ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋದ 8ನೇ ಆವೃತ್ತಿಯ ವಿಜೇತ ಆಗಿ ಮಂಜು ಪಾವಗಡ ಹೊರ ಹೊಮ್ಮಿದ್ದಾರೆ.
ಭಾನುವಾರ ರಾತ್ರಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ನಟ ಸುದೀಪ್ ವಿಜೇತ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿದರು.
ಅಂತಿಮ 5 ರಲ್ಲಿ ಸ್ಥಾನ ಪಡೆದ ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ, ಕೆಪಿ. ಅರವಿಂದ್, ದಿವ್ಯಾ ಉರುಡುಗ, ಮತ್ತು ವೈಷ್ಣವಿ ಅವರ ಪೈಕಿ ಶನಿವಾರ ಪ್ರಶಾಂತ್ ಸಂಬರ್ಗಿ, ದಿವ್ಯಾ ಉರುಡುಗ ಅವರು ಎಲಿಮಿನೇಟ್ ಆದರು. ಭಾನುವಾರದ ಎಪಿಸೋಡ್ ನಲ್ಲಿ ದಿವ್ಯಾ ಉರುಡುಗ ಮೂರನೇ ಅಭ್ಯರ್ಥಿ ಆಗಿ ಎಲಿಮಿನೇಟ್ ಆದರು.
ಅಂತಿಮವಾಗಿ ಮಂಜು ಪಾವಗಡ, ಅರವಿಂದ್ ನಡುವೆ ಯಾರು ವಿಜೇತರಾಗುವರು ಎನ್ನುವ ಕುತೂಹಲ ವೀಕ್ಷಕರಿಗೆ ಮೂಡಿತು. ಕೊನೆಗೂ ಮಂಜು ಬಿಗ್ ಬಾಸ್ ಗೆಲ್ಲುವಲ್ಲಿ ಯಶಸ್ವಿ ಆದರು.
ಮಂಜು ಅವರು ತಮ್ಮ ಹಾಸ್ಯದ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಇದೇ ವೇಳೆ ಅರವಿಂದ್ ಅವರು ಮೋಟಾರ್ ಬೈಕ್ ರೇಸರ್ ಆಗಿ ತಮ್ಮ ಸಾಧನೆಯ ಮೂಲಕ ಜನರ ಗಮನ ಸೆಳೆದಿದ್ದರು.
ಬಿಗ್ ಬಾಸ್ ಕಾರ್ಯಕ್ರಮ 120 ದಿನಗಳ ಕಾಲ ನಡೆದಿದ್ದು ಈ ಬಾರಿ ಒಟ್ಟು 20 ಸ್ಪರ್ಧಿಗಳು ಭಾಗಿ ಆಗಿದ್ದರು. ವಿಜೇತ ಸ್ಪರ್ಧಿಗೆ 50 ಲಕ್ಷ ರೂಪಾಯಿ ನಗದು ಬಹುಮಾನ, ಟ್ರೋಫಿ ನೀಡಲಾಯಿತು.
ಈ ಬಾರಿ ಕೋರೋನ ಎರಡನೇ ಅಲೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಂದರೆ ನೀಡಿತ್ತು. ಸೋಂಕು ವ್ಯಾಪಕವಾಗಿ ಹರಡಿದ ಹಿನ್ನೆಲೆಯಲ್ಲಿ ಸರ್ಕಾರದ ಆದೇಶದಂತೆ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಬಳಿಕ ಮರು ಆಯೋಜನೆ ಮಾಡಲಾಗಿತ್ತು.
ನಿರೂಪಕ ಸುದೀಪ್ ಅವರು ಅನಾರೋಗ್ಯದ ಕಾರಣ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕೆಲ ವಾರಗಳ ಕಾಲ ಗೈರು ಆಗಿದ್ದರು.
Be the first to comment