ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಗೆದ್ದ ಪಿ.ವಿ ಸಿಂಧೂ ಅವರಿಗೆ ಸಿನಿಮಾರಂಗದ ಗಣ್ಯರಿಂದ ಶುಭಾಶಯದ ಮಹಾಪೂರವೇ ಹರಿದುಬರುತ್ತಿದೆ.
ಚಿತ್ರ ನಟಿ ಹಾಗೂ ಸಂಸದೆ ಆಗಿರುವ ಸುಮಲತಾ ಅಂಬರೀಶ್ ಅವರು ಸಿಂಧೂ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.
” ಸತತ ಎರಡು ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬುದು ಭಾರತೀಯರ ಮನಸಲ್ಲಿ ನಿಮಗೆ ಶಾಶ್ವತ ಸ್ಥಾನ ತಂದುಕೊಟ್ಟಿದೆ. ಇಡೀ ದೇಶಕ್ಕೆ ಇಂಥ ಸಂತಸ ತಂದುಕೊಟ್ಟಿದಕ್ಕೆ ನಿಮಗೆ ಧನ್ಯವಾದಗಳು ಪಿ.ವಿ ಸಿಂಧೂ. ನೂರು ಕೋಟಿ ಜನರಿಗೆ ಇಂದು ಸ್ಫೂರ್ತಿ ತುಂಬಿದ್ದೀರಿ” ಎಂದು ಸುಮಲತಾ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ನಟಿ ತಾಪ್ಸಿ ಪನ್ನು, “ನಮ್ಮ ಹುಡುಗಿ ಮನೆಗೆ ಕಂಚಿನ ಪದಕ ತಂದಿದ್ದಾರೆ. ಇದು ನಾವು ಸಂಭ್ರಮವನ್ನು ಆಚರಣೆ ಮಾಡುವ ಸಮಯ “ಎಂದು ಟ್ವೀಟ್ ನಲ್ಲಿ ಹೇಳಿದ್ದಾರೆ.
ನಟಿ ಪಾರುಲ್ ಯಾದವ್ ಅವರು ಪಿ.ವಿ ಸಿಂಧು ಆಟದ ದೃಶ್ಯವನ್ನು ಶೇರ್ ಮಾಡಿ ಸಂತಸ ಹಂಚಿದ್ದಾರೆ. “ಒಲಂಪಿಕ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಪಿ.ವಿ ಸಿಂಧು ಅವರಿಗೆ ಅಭಿನಂದನೆಗಳು. ಅವರು ಭಾರತ ಕಂಡ ಅತಿ ಶ್ರೇಷ್ಠ ಆಟಗಾರ್ತಿ’ ಎಂದು ಹೇಳಿದ್ದಾರೆ.
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು, “ಭಾರತಕ್ಕೆ ಕಂಚು ಗೆದ್ದ ಪಿ.ವಿ ಸಿಂಧೂ ಅವರಿಗೆ ಅಭಿನಂದನೆಗಳು. ಒಲಂಪಿಕ್ ನಲ್ಲಿ 2 ಪದಕ ಗೆದ್ದ ಮೊದಲ ಭಾರತೀಯ ಮಹಿಳೆ. ನೀವು ಭಾರತ ಹೆಮ್ಮೆ ಪಡುವಂತೆ ಮಾಡಿದ್ದೀರಿ” ಎಂದು ಟ್ವೀಟ್ ಮಾಡಿದ್ದಾರೆ.
ಒಲಿಂಪಿಕ್ಸ್ ನ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ನಲ್ಲಿ ಪಿ ವಿ ಸಿಂಧೂ ಭಾನುವಾರ ಚೀನಾದ ಹೀ ಬಿಂಗ್ಜಿಯಾವೊ ಅವರನ್ನು 21-13, 21-15 ನೇರ ಸೆಟ್ಗಳಿಂದ ಮಣಿಸುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ.
Be the first to comment