“ಜನರು ಬಯಸಿದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಸಿದ್ಧ ” ಎಂದು ಹೇಳುವ ಮೂಲಕ ಚಿತ್ರನಟ ಅಭಿಷೇಕ್ ಅಂಬರೀಶ್ ಕುತೂಹಲ ಮೂಡಿಸಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುಳುಗನಹಳ್ಳಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅವರು ಈ ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಸುಮಲತಾ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದ ವೇಳೆ ಅಭಿಷೇಕ್ ಅಂಬರೀಶ್ ಮಂಡ್ಯದಲ್ಲಿ ಪ್ರಚಾರ ಕೈಗೊಂಡಿದ್ದರು. ನಟ ದರ್ಶನ್, ಯಶ್ ಜೊತೆಗೆ ಹಳ್ಳಿಗಳಲ್ಲಿ ಪ್ರಚಾರ ಮಾಡುವ ಮೂಲಕ ಗೆಲುವಿಗೆ ಕಾರಣ ಆಗಿದ್ದರು. ಈಗ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಬಗ್ಗೆ ಹೇಳಿಕೆ ನೀಡಿರುವುದು ಕುತೂಹಲ ಮೂಡಿಸಿದೆ.
ಕೆಲ ದಿನಗಳ ಹಿಂದೆ ಕೆಆರ್ಎಸ್ ವಿಷಯದಲ್ಲಿ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ವಾಕ್ಸಮರ ನಡೆದಿತ್ತು. ಈ ವೇಳೆ ಅಂಬರೀಶ್ ಬೆಂಬಲಿಗರು ಸುಮಲತಾ ಅವರನ್ನು ಭೇಟಿ ಮಾಡಿ, ಹೊಸ ಪಕ್ಷ ಸ್ಥಾಪಿಸಿ ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲು ಕೋರಿದ್ದರು. ಈ ನಡುವೆ ಅಭಿಷೇಕ್ ಹೇಳಿಕೆ ಮಂಡ್ಯ ರಾಜಕಾರಣದಲ್ಲಿ ಹೊಸ ಪ್ರಶ್ನೆ ಹುಟ್ಟು ಹಾಕಿದೆ.
ಮಂಡ್ಯ ಲೋಕಸಭಾ ಕ್ಷೇತ್ರದಿಂದ ಈ ಹಿಂದೆ ನಟಿ ರಮ್ಯಾ ಗೆಲುವು ಸಾಧಿಸಿದ್ದರು. ಇಲ್ಲಿ ಮತ್ತೆ ಚಿತ್ರರಂಗಕ್ಕೆ ಸೇರಿದ ಕಲಾವಿದ ಅಭಿಷೇಕ್ ಸ್ಪರ್ಧೆ ಮಾಡುವರೇ ಎನ್ನುವ ಬಗ್ಗೆ ಸಹಜವಾಗಿ ಪ್ರಶ್ನೆ ಎದ್ದಿದೆ.
ಅಭಿಷೇಕ್ ಸದ್ಯ ‘ಬ್ಯಾಡ್ ಮ್ಯಾನರ್ಸ್’ ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ಈ ಚಿತ್ರದಲ್ಲಿ ರಚಿತಾ ರಾಮ್ ನಟಿಸುತ್ತಿದ್ದಾರೆ.

Be the first to comment