‘ಅಟ್ಟಹಾಸ’ ಸಿನಿಮಾ ಖ್ಯಾತಿಯ ನಿರ್ದೇಶಕ ಎಎಂಆರ್ ರಮೇಶ್ ಅವರು ತಮಗೆ 50 ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ ಎಂದು ಪೊಲೀಸ್ ದೂರು ದಾಖಲಿಸಿದ್ದಾರೆ.
ಅಟ್ಟಹಾಸ’ ಸಿನಿಮಾವನ್ನು ಹಾಟ್ಸ್ಟಾರ್ನಲ್ಲಿ ಬಿಡುಗಡೆ ಮಾಡಿದ್ದು ತಮಗೆ ಹಣ ನೀಡಿಲ್ಲ. ಈ ಸಂಬಂಧ ಸಿನಿಮಾ ನಿರ್ಮಾಪಕ, ವಿತರಕ ಮಹೇಶ್ ಕೊಠಾರಿ, ಡಿಸ್ನಿ ಹಾಟ್ಸ್ಟಾರ್ ಆಪ್ ವಿರುದ್ಧ ಅವರು ಪೊಲೀಸ್ ದೂರು ದಾಖಲಿಸಿದ್ದಾರೆ.
“ಸಿನಿಮಾವನ್ನು ಡಿಸ್ನಿ ಹಾಟ್ಸ್ಟಾರ್ಗೆ ಮಾರಿ 50 ಲಕ್ಷ ರೂಪಾಯಿ ಹಣ ಕೊಡುತ್ತೇನೆ ಎಂದು ಒಪ್ಪಂದ ಮಾಡಿಕೊಂಡ ಮಹೇಶ್ ಕೊಠಾರಿ ಅವರು ಸಿನಿಮಾವನ್ನು ಡಿಸ್ನಿ ಹಾಟ್ಸ್ಟಾರ್ಗೆ ಮಾರಿ ನನಗೆ ಹಣ ನೀಡದೆ ವಂಚನೆ ಮಾಡಿದ್ದಾರೆ. ‘ಅಟ್ಟಹಾಸ’ ಸಿನಿಮಾವನ್ನು ನ್ಯಾಷನಲ್ ಅವಾರ್ಡ್ಗೆ ಕಳಿಸುವಾಗ ಅದಕ್ಕೆ ಸಬ್ಟೈಟಲ್ಸ್ ಹಾಕಿಸಲು ಸಿನಿಮಾದ ಕಾಪಿಯನ್ನು ಮಹೇಶ್ ಕೊಠಾರಿಗೆ ನೀಡಿದ್ದೆ. ಆದರೆ ಅವರು ಅದನ್ನು ದುರ್ಬಳಕೆ ಮಾಡಿಕೊಂಡು ಆ ಕಾಪಿಯನ್ನು ಡಿಸ್ನಿ ಹಾಟ್ಸ್ಟಾರ್ಗೆ ನೀಡಿದ್ದಾರೆ” ಎಂದು ರಮೇಶ್ ಆರೋಪಿಸಿದ್ದಾರೆ.
ಎಎಂಆರ್ ರಮೇಶ್ ಸಧ್ಯ ವೀರಪ್ಪನ್ ಕುರಿತ ವೆಬ್ ಸರಣಿ ನಿರ್ಮಾಣ ಮಾಡುತ್ತಿದ್ದಾರೆ. ವೆಬ್ ಸರಣಿಯ ಚಿತ್ರೀಕರಣ ನಡೆಯುತ್ತಿದ್ದು ಕಿಶೋರ್ ಅವರು ವೆಬ್ ಸರಣಿಯಲ್ಲಿವೀರಪ್ಪನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ವೆಬ್ ಸರಣಿಯ ಬಳಿಕ ಎಲ್ಟಿಟಿಇ ಮುಖ್ಯಸ್ಥ ಆಗಿದ್ದ ವಿ.ಪ್ರಭಾಕರನ್ ಬಗ್ಗೆ ಸಿನಿಮಾ ಮಾಡುವುದಾಗಿ ರಮೇಶ್ ಘೋಷಣೆ ಮಾಡಿದ್ದಾರೆ.

Be the first to comment