ಚಿತ್ರಮಂದಿರಗಳಲ್ಲಿ 100% ಆಸನ ಭರ್ತಿಗೆ ಅವಕಾಶ ನೀಡಬೇಕು ಎಂದು ಕೋರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್.ದೇವರಾಜ್ ನೇತೃತ್ವದ ನಿಯೋಗ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ.
“ಕೊರೊನಾದಿಂದ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿದೆ. ಶೇ. 50 ಆಸನ ಭರ್ತಿಗೆ ಸರ್ಕಾರ ಅನುಮತಿ ನೀಡಿದ್ದರೂ ದೊಡ್ಡ ಬಜೆಟ್ನ ಸಿನಿಮಾ ಬಿಡುಗಡೆ ಮಾಡಲು ಹಿಂದೇಟು ಹಾಕುತ್ತಿವೆ. ಶೇ.100 ರಷ್ಟು ಆಸನ ಭರ್ತಿ ಮಾಡಲು ಅವಕಾಶ ನೀಡಿದಲ್ಲಿ ಚಿತ್ರರಂಗಕ್ಕೆ ಅನುಕೂಲ ಆಗಲಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಶೇ. 100 ಆಸನ ಭರ್ತಿಗೆ ಅವಕಾಶ ನೀಡಿ ಆದೇಶ ಹೊರಡಿಸಲಾಗಿದೆ” ಎಂದು ಮನವಿ ಪತ್ರದಲ್ಲಿ ನಿಯೋಗ ಶನಿವಾರ ಕೋರಿದೆ.
ಕೊರೊನಾ ಎರಡನೇ ಅಲೆಯಿಂದ ಏಪ್ರಿಲ್ 20 ರಂದು ಚಿತ್ರಮಂದಿರಗಳನ್ನು ಬಂದ್ ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ನಂತರ ಜುಲೈ 19ರಿಂದ
ರಾಜ್ಯದಲ್ಲಿ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಲಾಗಿದೆಯಾದರೂ ಶೇ.50 ಸೀಟು ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದರಿಂದ ಹೊಸ ಚಿತ್ರಗಳು ಬಿಡುಗಡೆ ಆಗಲು ಹಿಂದೇಟು ಹಾಕುತ್ತಿವೆ.
ಸುದೀಪ್ ಹೀರೋ ಆಗಿರುವ ‘ಕೋಟಿಗೊಬ್ಬ 3’, ಯಶ್ ನಟನೆಯ ಕೆಜಿಎಫ್ 2, ಉಪೇಂದ್ರ ಹೀರೋ ಆಗಿರುವ ‘ಕಬ್ಜ’, ಧನಂಜಯ್ ನಾಯಕ ಆಗಿರುವ ‘ರತ್ನನ್ ಪರ್ಪಂಚ’, ಜಗ್ಗೇಶ್ ನಟನೆಯ ‘ತೋತಾಪುರಿ’ ಚಿತ್ರಗಳು ಬಿಡುಗಡೆಗೆ ಸಿದ್ಧ ಆಗಿದ್ದರೂ ಇನ್ನೂ ರಿಲೀಸ್ ಡೇಟ್ ಘೋಷಣೆ ಮಾಡಿಲ್ಲ.
Be the first to comment