ರಾಬರ್ಟ್ ಸಿನಿಮಾದ ‘ಕಣ್ಣೇ ಅದಿರಿಂದಿ’ ಹಾಡಿನ ಖ್ಯಾತಿಯ ಗಾಯಕಿ ಮಂಗ್ಲಿ ಅವರು ಹಾಡಿದ ಹಾಡೊಂದು ಈಗ ವಿವಾದಕ್ಕೆ ಕಾರಣ ಆಗಿದೆ. ತೆಲುಗು ಪ್ರಾಂತ್ಯಗಳಲ್ಲಿ ಈಗ ‘ಬೋನಾಲು ಪಂಡುಗ’ದ ಸಮಯ ಆಗಿದೆ ಇದಕ್ಕೆ ಅನುಗುಣವಾಗಿ ಜನಪದ ಹಾಡೊಂದನ್ನು ಮಂಗ್ಲಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಈ ಹಾಡು ವಿವಾದಕ್ಕೆ ಕಾರಣವಾಗಿದೆ. ಮಂಗ್ಲಿ ಅವರು ಇದೀಗ ಬಿಡುಗಡೆ ಮಾಡಿರುವ ‘ಬೋನಾಲು’ ಹಾಡಿನಲ್ಲಿನ ಕೆಲವು ಸಾಲುಗಳು ಗ್ರಾಮ ದೇವತೆ ಮೈಸಮ್ಮ ದೇವಿಯನ್ನು ಟೀಕಿಸುವಂತಿದೆ. ಬೈಯ್ಯುವ ಶೈಲಿಯಲ್ಲಿರುವ ಈ ಹಾಡಿಗೆ ಮೈಸಮ್ಮ ದೇವಿಯ ಭಕ್ತರು ತಕರಾರು ಎತ್ತಿದ್ದಾರೆ.
ಹಾಡಿನ ಕೆಲವು ಸಾಲುಗಳು ದೇವಿಯ ಮಹಿಮೆಯನ್ನು ಸಾರುವ ಬದಲು ದೇವಿಯನ್ನು ಬೈಯ್ಯುವ ರೀತಿಯಲ್ಲಿ ಇವೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆರೋಪಿಸಲಾಗಿದೆ. ಆದರೆ ಈ ಆರೋಪಗಳ ಬಗ್ಗೆ ಮಂಗ್ಲಿ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ.
ಟೀಕೆಗೆ ಒಳಗಾದ ಈ ಹಾಡನ್ನು ಸರಿಸುಮಾರು ಅರ್ಧ ಕೋಟಿ ಜನ ವೀಕ್ಷಣೆ ಮಾಡಿದ್ದಾರೆ. ರಾಮಸ್ವಾಮಿ ಅನ್ನುವವರು ಬರೆದಿರುವ ಹಾಡನ್ನು ಮಂಗ್ಲಿ ಹಾಡಿದರೆ, ರಾಕೇಶ್ ವೆಂಕಟಾಪುರ ಸಂಗೀತ ನೀಡಿದ್ದಾರೆ. ಢೀ ಖ್ಯಾತಿಯ ಪಂಡು ಅವರ ಕೊರಿಯೋಗ್ರಫಿ ಈ ಹಾಡಿಗೆ ಇದೆ.
‘ರಾಬರ್ಟ್’ ತೆಲುಗು ಸಿನಿಮಾದಲ್ಲಿ “ಕಣ್ಣೇ ಅದಿರಿಂದಿ’ ಹಾಡನ್ನು ಮಂಗ್ಲಿ ಹಾಡಿದ್ದರು. ಕನ್ನಡದಲ್ಲಿ ಇದೇ ಹಾಡನ್ನು “ಕಣ್ಣು ಹೊಡಿಯಾಕ” ವನ್ನು ಶ್ರೇಯಾ ಘೋಷಾಲ್ ಹಾಡಿದ್ದರು.
Be the first to comment