ಬೆಂಗಳೂರು : ಉತ್ತರ ಕರ್ನಾಟಕದ ಹಿರಿಯ ಪೋಷಕ ನಟ ವೈಜನಾಥ್ ಬಿರಾದರ್ ಅವರಿಗೆ ಪದ್ಮಶ್ರೀ ಸಿಗಲಿ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಟನೆಯ ಗೀಳಿಗೆ ಬಿದ್ದು ಬೀದರ್‌ನಿಂದ ಬೆಂಗಳೂರಿಗೆ ಬಂದು ಬಿರಾದಾರ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಬಡ ಕೃಷಿ ಕುಟುಂಬದಿಂದ ಬಂದ ಕೇವಲ ಮೂರನೆ ಕ್ಲಾಸ್ ಓದಿದ ಬಿರಾದಾರ್ ಗೆ ನಾಲ್ಕನೆ ಕ್ಲಾಸ್ ಓದಿ ಮೇರು ನಟ ಡಾ.ರಾಜಕುಮಾರ ಅವರು ಆದರ್ಶವಾಗಿ ಕಂಡರು. ಬೆಂಗಳೂರಿನಲ್ಲಿ ವರ್ಷಾನುಗಟ್ಟಲೆ ಕಷ್ಟ ಪಟ್ಟ ಬಿರಾದರ್ ನ್ನು ಗುರುತಿಸಿ ಚಿತ್ರದಲ್ಲಿ ಅವಕಾಶ ಕೊಟ್ಟದ್ದು ಕಾಶಿನಾಥ್ ಎಂದು ಸಿನೆಮಾ ಹಾದಿ ನೆನಪಿಸಿಕೊಂಡಿದ್ದಾರೆ.
ಬಿರಾದಾರ್ ಕನ್ನಡ ಸಿನಿಮಾಗಳಲ್ಲಿ ಭಿಕ್ಷುಕನ ಪಾತ್ರಕ್ಕೆ ಬ್ರಾಂಡ್ ಆಗಿಬಿಟ್ಟರು. ಭಿಕ್ಷುಕ, ಕುಡುಕ ಪಾತ್ರಗಳೇ ಅವರಿಗೆ ಖಾಯಂ ಆಗಿ ಚಿತ್ರರಂಗದಲ್ಲಿ ನೆಲೆಯೂರಿದರು. ಭಿಕ್ಷುಕ ಪಾತ್ರಗಳಿಗೆ ಸೀಮಿತರಾದ ಬಿರಾದಾರ್ ಎಂದಿಗೂ ನೊಂದುಕೊಳ್ಳಲಿಲ್ಲ. ‘ ಭಿಕ್ಷುಕ ಪಾತ್ರವೆ ನನ್ನ ಜೀವನದ ಅಕ್ಷಯ ಪಾತ್ರೆ’ ಎಂದು ಸಂತೃಪ್ತರಾಗಿದ್ದರು.
500 ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ನೈಜ ಅಭಿನಯದಿಂದ ತಮ್ಮದೇ ಅಭಿಮಾನ ವಲಯವನ್ನು ಹೊಂದಿರುವ ಬಿರಾದಾರ್ ಅವರ ಅಪ್ರತಿಮ ಪ್ರತಿಭೆಗೆ ಕನ್ನಡಿ ” ಕನಸೆಂಬ ಕುದುರೆಯನ್ನೇರಿ” ಚಿತ್ರ. 2010 ರಲ್ಲಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದ ಈ ಚಿತ್ರ ಸ್ಪೇನ್ ನಲ್ಲಿ ನಡೆದ ಅಂತರರಾಷ್ಟ್ರೀಯ India image ಸ್ಪರ್ಧೆಯಲ್ಲಿ ಶ್ರೇಷ್ಠ ನಟ ಪ್ರಶಸ್ತಿ ಪಡೆದು ಕನ್ನಡ ಚಿತ್ರರಂಗದ ಹಿರಿಮೆಗೆ ಗರಿ ಮೂಡಿಸಿದ್ದರು ಎಂದು ಅಭಿಮಾನಿಗಳು ನೆನಪಿಸಿಕೊಂಡಿದ್ದಾರೆ.
ಬಿರಾದಾರ್ ತನಗೆ ವಹಿಸುವ ಪಾತ್ರದಲ್ಲಿ ಯಾರಿಗೂ ಕಮ್ಮಿಯಿಲ್ಲದಂತೆ ಪ್ರತಿಭೆಯನ್ನು ಮೆರೆಯುತ್ತಾರೆ. ಪಾತ್ರಕ್ಕೆ ನ್ಯಾಯ ಒದಗಿಸಬಲ್ಲರು. ಒಬ್ಬ ಸಾಮಾನ್ಯ ನಟ ಕಾಮಿಡಿಯನ್ ಆಗಿ, ಪೋಷಕ ಪಾತ್ರಗಳಲ್ಲಿ ಐದು ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸುವುದು, ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆವುದು ಸಾಧನೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ನೈಜ ಪ್ರತಿಭೆ ಬಿರಾದಾರ್ ಭಾರತ ಸರ್ಕಾರದ ‘ ಪದ್ಮಶ್ರೀ’ ಪ್ರಶಸ್ತಿಗೆ ಎಲ್ಲಾ ಬಗೆಯಲ್ಲೂ ಅರ್ಹರಿದ್ದಾರೆ. ಅವರಿಗೆ ಪದ್ಮ ಪ್ರಶಸ್ತಿ ಸಿಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
Be the first to comment