ಬೆಂಗಳೂರು : ಇತ್ತೀಚೆಗೆ ಅಪಘಾತದಲ್ಲಿ ನಿಧನರಾದ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ ಹುಟ್ಟುಹಬ್ಬದ ದಿನವಾದ ಜುಲೈ 17 ರಂದು ಅವರ ಬದುಕನ್ನು ಕುರಿತ ಪುಸ್ತಕ ಬಿಡುಗಡೆ ಆಗಲಿದೆ.
ಪತ್ರಕರ್ತ ಶರಣು ಹುಲ್ಲೂರು ಸಂಪಾದಕತ್ವದಲ್ಲಿ ‘ಅನಂತವಾಗಿರು’ ಹೆಸರಿನ ಪುಸ್ತಕ ಹೊರಬರಲು ಸಿದ್ಧತೆ ನಡೆದಿದೆ. ಈ ಪುಸ್ತಕದಲ್ಲಿ ಸಂಚಾರಿ ವಿಜಯ್ ಅವರ ಜೀವನದ ಅನೇಕ ಘಟನೆಗಳು ಇರಲಿವೆ.
“ಪುಸ್ತಕದಲ್ಲಿ ಸಂಚಾರಿ ವಿಜಯ್ ಅವರ ಬಾಲ್ಯ, ಜೀವನದ ಮಾಹಿತಿ ಇದೆ. ಕಾಲೇಜು ದಿನಗಳ ಬಗ್ಗೆ ಸ್ನೇಹಿತರು, ಆಪ್ತರು ಹಂಚಿಕೊಂಡ ವಿಚಾರಗಳಿವೆ. ವಿಜಯ್ ಅವರ ಬದುಕಿನ ಬಗ್ಗೆ ಗೆಳೆಯರು, ಸಿನಿಮಾ ನಿರ್ದೇಶಕರು, ರಂಗಕರ್ಮಿಗಳು, ಸಹಪಾಠಿಗಳು ಮಾಹಿತಿ ನೀಡಿದ್ದಾರೆ” ಎಂದು ಲೇಖಕ ಶರಣು ಹುಲ್ಲೂರು ಹೇಳಿದ್ದಾರೆ.
ಲೇಖಕ ವಸುಧೇಂದ್ರ, ಚಿತ್ರ ಸಾಹಿತಿ ಕವಿರಾಜ್, ಪತ್ರಕರ್ತ ಜೋಗಿ, ಸಂಧ್ಯಾರಾಣಿ, ನಿರ್ದೇಶಕ ಲಿಂಗದೇವರು, ಮಂಸೋರೆ, ಅರವಿಂದ್ ಕುಪ್ಳಿಕರ್, ಎಂಎಸ್ ರಮೇಶ್, ಸಂಚಾರಿ ವಿಜಯ್ ಗುರುಗಳಾದ ಮಂಗಳಾ, ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ ಅಕ್ಕೈ ಪದ್ಮಶಾಲಿ ಸೇರಿದಂತೆ 32ಕ್ಕೂ ಅಧಿಕ ಒಡನಾಡಿಗಳು ವಿಜಯ್ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕಾಯಕ ಪ್ರಕಾಶನ ಹೊರ ತಂದಿರುವ ಈ ಪುಸ್ತಕದ ಬೆಲೆ 250 ರೂ. ಎಂದು ಲೇಖಕ ಶರಣು ಹುಲ್ಲೂರು ಹೇಳಿದ್ದಾರೆ. ಅಂಬರೀಶ್, ಕಿಚ್ಚ ಸುದೀಪ್ ಬಗ್ಗೆ ಈ ಹಿಂದೆ ಶರಣು ಹುಲ್ಲೂರು ಪುಸ್ತಕ ಬರೆದಿದ್ದರು.
ಕಳೆದ ತಿಂಗಳು ಸಂಚಾರಿ ವಿಜಯ್ ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು.
__________
Be the first to comment