ಬೆಂಗಳೂರು : ಸೆಲೆಬ್ರಿಟಿ, ಉದ್ಯಮಿ, ಪ್ರಭಾವಿಗಳ ದೌರ್ಜನ್ಯ ತಡೆಗಟ್ಟುವಲ್ಲಿ ಮೈಸೂರು ಪೊಲೀಸರು ವಿಫಲರಾಗಿದ್ದಾರೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ಗುಡುಗಿದ್ದಾರೆ.
ಈ ಹಿಂದೆ ಮಾದಕ ವಸ್ತು ಮಾರಾಟ ಪ್ರಕರಣದಲ್ಲಿ ಸಿನಿತಾರೆಯರು ಭಾಗಿಯಾಗಿರುವ ಬಗ್ಗೆ ಹರಿಹಾಯ್ದಿದ್ದ ಇಂದ್ರಜಿತ್ ಲಂಕೇಶ್ ಅವರು ಈ ಬಾರಿ ಮೈಸೂರು ಪೊಲೀಸರು ಅಪರಾಧ ಪ್ರಕರಣಗಳನ್ನು ತಡೆಗಟ್ಟುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ ಎಂದು ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ದರ್ಶನ್ ಅವರ ಹೆಸರಿನಲ್ಲಿ ನಡೆದ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಾಕ್ಷಿಗಳಿದ್ದರೂ ಮೈಸೂರು ಪೊಲೀಸರು ಯಾವುದೇ ಕ್ರಮವನ್ನು ವಹಿಸದೆ ಇರುವುದನ್ನು ಗಮನಿಸಿದರೆ ಪೊಲೀಸ್ ವ್ಯವಸ್ಥೆ ಕುಸಿದು ಹೋಗಿರುವ ಅನುಮಾನ ವ್ಯಕ್ತವಾಗುತ್ತದೆ. ಪ್ರಭಾವಿಗಳ ಎದುರು ಜನಸಾಮಾನ್ಯರ ಹೋರಾಟಕ್ಕೆ ಬೆಲೆ ಇಲ್ಲವಾಗಿದೆ ಸಿಡಿ ಲೇಡಿ ವಿಚಾರದಲ್ಲಿ ಇಡೀ ವ್ಯವಸ್ಥೆ ವಿರುದ್ಧ ನಿಂತಿತ್ತು. ಅದು ಅರುಣಾ ಕುಮಾರಿ ವಿಚಾರದಲ್ಲೂ ಮುಂದುವರೆದಿದೆ. ಕಾನೂನು ಕ್ರಮ ತೆಗೆದುಕೊಳ್ಳಬೇಕಾದ ಮೈಸೂರು ಪೊಲೀಸರು ಮೂಕರಂತೆ ವರ್ತನೆ ತೋರುತ್ತಿರುವುದು, ಸಾಕ್ಷಿ ಇದ್ದರೂ ಕ್ರಮ ವಹಿಸದೆ ಇರುವುದು ಸರಿಯಲ್ಲ. ಇತ್ತೀಚೆಗೆ ನಡೆಯುತ್ತಿರುವ ಅಪರಾಧ ಪ್ರಕರಣಗಳಲ್ಲಿ ಜನಸಾಮಾನ್ಯರಿಗೆ ಅನ್ಯಾಯ ಆಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಮೈಸೂರು ಜಿಲ್ಲಾ ಪೊಲೀಸ್ ವ್ಯವಸ್ಥೆಗೆ ಚುರುಕು ಮುಟ್ಟಿಸಬೇಕಾದ ಅಗತ್ಯವಿದೆ. ಭ್ರಷ್ಟರನ್ನು ಅಮಾನತುಗೊಳಿಸಿ ಸಮರ್ಥ ಅಧಿಕಾರಿಗಳನ್ನು ನೇಮಿಸಬೇಕಾದ ಅಗತ್ಯವಿದೆ. ಯಾರು, ಎಷ್ಟೇ ಪ್ರಭಾವಶಾಲಿಯಾದರೂ ಅವರ ವಿರುದ್ಧ ಪೊಲೀಸರು ಕ್ರಮ ವಹಿಸಬೇಕಿದೆ ಎಂದು ಅವರು ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ಮೈಸೂರಿನ ಸ್ಟಾರ್ ಹೋಟೆಲ್ ನಲ್ಲಿ ದಲಿತನ ಮೇಲೆ ನಡೆದ ಹಲ್ಲೆ, ನಟ ದರ್ಶನ್ ಹೆಸರಿನಲ್ಲಿ ನಡೆದ ಲೋನ್ ಪ್ರಕರಣ ಬಗ್ಗೆ ಸೂಕ್ತ ತನಿಖೆ ಮಾಡಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
_________
Be the first to comment