ನನ್ನ ಹೆಸರಿನಲ್ಲಿ ಹೆಣೆಯಲಾದ 25 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ ಯಾರನ್ನೂ ಸುಮ್ನೆ ಬಿಡಲ್ಲ. ಅವರು ಅದೆಷ್ಟು ಆತ್ಮೀಯರಾಗಿದ್ರೂ ಅಷ್ಟೇ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದರು.
ಮೈಸೂರಿನಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆಂಡು ಈಗ ಉಮಾಪತಿ ಅಂಗಳದಲ್ಲಿದೆ. ಗೋಲು ಹೊಡೆಯುವುದು ಅವರಿಗೆ ಬಿಟ್ಟಿದ್ದು ಎಂದು ಮಾರ್ಮಿಕವಾಗಿ ಹೇಳಿದರು.
ಪ್ರಕರಣದ ಬಗ್ಗೆ ಎಲ್ಲಾ ಮಾಹಿತಿ ನೀಡಿದ ದರ್ಶನ್, ವಂಚನೆಗೆ ಯತ್ನಿಸಿದ ಅರುಣಾ ಕುಮಾರಿ ಬಗ್ಗೆ ಅನುಮಾನ ಬಂದು ಬ್ಯಾಂಕ್ಗೆ ಹೋಗಿ ಪರಿಶೀಲನೆ ನಡೆಸಿದೆವು. ಆದ್ರೆ ಆರೋಪಿಗಳು ಯಾರೂ ಅಲ್ಲಿ ಕಾಣಿಸಲಿಲ್ಲ. ಹೀಗಾಗಿ ಉಮಾಪತಿಗೆ ಕಂಪ್ಲೆಂಟ್ ಕೊಡಲು ಸೂಚಿಸಿದೆ. ನಾನು ಆರ್ಆರ್ ನಗರದಲ್ಲಿ ಕಂಪ್ಲೆಂಟ್ ಕೊಡ್ತೇನೆ ಅಂತ ಹೇಳಿದೆ. ಉಮಾಪತಿ ಅದಕ್ಕೆ ಸಮ್ಮತಿ ಸೂಚಿಸಿದ್ರು ಎಂದರು.
ಅರುಣಾ ಪತಿಯಿಂದ ದೂರವಾಗಿ ಐದಾರು ವರ್ಷಗಳಾಗಿವೆ. ಆಕೆ ಯಾವ ಬ್ಯಾಂಕ್ ಉದ್ಯೋಗಿಯೂ ಅಲ್ಲ. ಆಕೆ ಪಿಯುಸಿ ಕೂಡ ಓದಿಲ್ಲ ಅಂತ ಅವಳ ಪತಿಯೇ ಸ್ಪಷ್ಟೀಕರಣ ನೀಡಿದ್ದಾರೆ ಎಂದು ಹೇಳಿದರು.
ಪ್ರಕರಣದ ಬಗ್ಗೆ ವಿಚಾರಿಸಿದಾಗ, ಅರುಣಾ, ಇಷ್ಟೆಲ್ಲಾ ಮಾಡಿಸಿದ್ದು ಉಮಾಪತಿ ಅಂದಳು. ನಾನು ಉಮಾಪತಿಗೆ ಕಾಲ್ ಮಾಡಿದಾಗ ಉಮಾಪತಿ, ಆಕೆ ನನಗೆ ಫೇಸ್ಬುಕ್ ಫ್ರೆಂಡಷ್ಟೇ. ನನಗೆ ಮತ್ತೇನು ಗೊತ್ತಿಲ್ಲ ಅಂತ ಉತ್ತರಿಸಿದ್ರು. ಮತ್ತೊಮ್ಮೆ ಅರುಣಾಳನ್ನೇ ಪ್ರಶ್ನಿಸಿದಾಗ, ಉಮಾಪತಿ ನಂಗೆ ಜೀವ ಬೆದರಿಕೆ ಹಾಕಿದ್ದಾರೆ ಅಂದಳು. ಏಪ್ರಿಲ್ 8 ರಿಂದ ಉಮಾಪತಿ, ಅರುಣಾ ಜತೆ ವಾಟ್ಸ್ಆ್ಯಪ್ ಚಾಟ್ ಮಾಡಿದ್ದು ನನ್ನ ಬಳಿ ದಾಖಲೆಯಿದೆ. ನಿನ್ನೆಯೂ ಉಮಾಪತಿ ಜತೆ ನಾನು ಮಾತಾಡಿದ್ದು ಅವರು ಇದಕ್ಕೂ, ನನಗೂ ಸಂಬಂಧವಿಲ್ಲ ಎಂದಿದ್ದಾರೆ ಎಂದರು.
ಉಮಾಪತಿ ಹಾಗೂ ನನ್ನ ನಡುವೆ ಯಾವುದೇ ವೈಮನಸ್ಸಿಲ್ಲ. ನಾನೀಗಲೆ ಅವರು ನಿರ್ಮಾಣ ಮಾಡುವ ಎರಡು ಚಿತ್ರಗಳಿಗೆ ಡೇಟ್ ಕೊಟ್ಟಿದ್ದೇನೆ ಎಂದು ದರ್ಶನ್ ಹೇಳಿದರು.
___________________

Be the first to comment