ವೈದ್ಯಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಪದ್ಮಶ್ರೀ ಪುರಸ್ಕೃತೆ ಡಾ. ಕಾಮಿನಿ ರಾವ್ ಈಗಾಗಲೇ ಮನರಂಜನಾ ಕ್ಷೇತ್ರಕ್ಕೂ ಪದಾರ್ಪಣೆ ಮಾಡಿದ್ದಾರೆ. ಇದೀಗ ಇವೆರಡೂ ಕ್ಷೇತ್ರಗಳ ಜತೆಗೆ ಶಿಕ್ಷಣ ಕ್ಷೇತ್ರದ ಕಡೆಗೂ ಮುಖ ಮಾಡಿದ್ದಾರೆ. ಅಂದರೆ, ಕಾಮಿನಿ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ಹೆಸರಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದಾರೆ.
ಈ ವಿಚಾರವನ್ನು ಹೇಳಿಕೊಳ್ಳಬೇಕೆಂಬ ಉದ್ದೇಶದಿಂದ ಶುಕ್ರವಾರ ಶೇಷಾದ್ರಿಪುರಂನಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು. ಈ ವೇಳೆ ಮಾತನಾಡುವ ಅವರು, ಬಂಜೆತನಕ್ಕೆ ಚಿಕಿತ್ಸೆ ನೀಡುವ ಕೆಲಸದ ಜತೆಗೆ ಕಾಮಿನಿ ರಾವ್ ಫೌಂಡೇಷನ್, ಪೂರ್ವಿ ಪ್ರೊಡಕ್ಷನ್ಸ್ ಹೀಗೆ ಸಾಕಷ್ಟು ಕ್ಷೇತ್ರಗಳಲ್ಲಿಯೂ ಕೆಲಸಗಳು ನಡೆಯುತ್ತಿವೆ.
ಇದೀಗ ಶಿಕ್ಷಣ ಕ್ಷೇತ್ರದ ಬಗ್ಗೆ ಕಾಳಜಿ ವಹಿಸಿದ್ದೇವೆ. ಇದಕ್ಕೆ ನನ್ನ ಇಡೀ ಕುಟುಂಬ ಒಟ್ಟಾಗಿ ಕೆಲಸ ಮಾಡುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ನಿರ್ಧರಿಸಿದ್ದು, ಡಾ. ಕಾಮಿನಿ ರಾವ್ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ಮೂಲಕ ಪ್ರಶಸ್ತಿಯನ್ನು ಘೋಷಿಸಿದ್ದೇವೆ. ಪ್ರತಿ ವರ್ಷ ಇಂತಿಷ್ಟು ಮೊತ್ತವನ್ನು ಡಿಪಾಸಿಟ್ ಇಟ್ಟು, ಮಕ್ಕಳ ಏಳಿಗೆಗೆ ಅದನ್ನು ನೀಡಲಿದ್ದೇವೆ ಎಂದರು.
ಕಾಮಿನಿ ರಾವ್ ಪತಿ ಅರವಿಂದ್ ರಾವ್ ಮಾತನಾಡಿ, ಸೀಮಿತ ವಿಷಯಕ್ಕೆ ಶಿಷ್ಯವೇತನ ನೀಡುತ್ತಿಲ್ಲ. ಎಲ್ಲದಕ್ಕೂ ಇದು ಸಲ್ಲಲಿದೆ. ಯಾರಿಗೆ ಇದನ್ನು ನೀಡಬೇಕು, ಶಿಷ್ಯವೇತನಕ್ಕೆ ಅರ್ಹರು ಯಾರು ಎಂಬುದನ್ನು ಬಂದ ಅರ್ಜಿಗಳನ್ನು ಪರಿಶೀಲಿಸಿ ನಿರ್ಧರಿಸಲು ಪ್ರತ್ಯೇಕ ಜೂರಿ ಸದಸ್ಯರು ಇರಲಿದ್ದಾರೆ.
ನಮ್ಮ ಈ ಟ್ರಸ್ಟ್ನಿಂದ ಒಬ್ಬರು ಇರಲಿದ್ದು, ಆಯ್ಕೆ ಪ್ರಕ್ರಿಯೆ ಎಲ್ಲದಕ್ಕೂ ಆ ತಂಡದವರೇ ನಿರ್ಧರಿಸಲಿದ್ದಾರೆ. ನಮ್ಮ ರಾಜ್ಯ ಅಷ್ಟೇ ಅಲ್ಲದೆ ಹೊರ ರಾಜ್ಯಗಳಿಂದಲೂ ಅರ್ಜಿಯನ್ನು ಸ್ವೀಕರಿಸಲಿದ್ದೇವೆ. ಆನ್ಲೈನ್ ಅಪ್ಲಿಕೇಷನ್ ಪ್ರಕ್ರಿಯೆ ಜುಲೈ 10ರಿಂದ ಶುರುವಾಗಲಿದ್ದು, ಆಗಸ್ಟ್ 15ಕ್ಕೆ ಮುಕ್ತಾಯವಾಗಲಿದೆ.
ಅಪ್ಲಿಕೇಷನ್ಗಳಲ್ಲಿ ಸರಿ ತಪ್ಪನ್ನು ತುಲನೆ ಮಾಡಿ ಸೆಪ್ಟೆಂಬರ್ನಲ್ಲಿ ಅವಾರ್ಡ್ ನೀಡಲಿದ್ದೇವೆ ಎಂದರು. ಡಾ. ಕಾಮಿನಿ ರಾವ್ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ನ ಸಂಪೂರ್ಣ ಉಸ್ತುವಾರಿ ವಹಿಸಿಕೊಂಡಿರುವ ಪೂಜಾ ಎಸ್ ರಾವ್ ಸಹ ಮಾತನಾಡಿದ್ದಾರೆ. ಕಾಮಿನಿರಾವ್ ಅವರ ಪುತ್ರಿ ಡಾ||ವೈಷ್ಣವಿ ಸಹ ಈ ಸಂದರ್ಭದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡರು.
ಈ ಅವಾರ್ಡ್ಸ್ ನ ನೀಡುವಿಕೆ ಹಿಂದೆ ಯಾವುದೇ ನಿರೀಕ್ಷೆಯನ್ನು ಇರಿಸಿಕೊಂಡಿಲ್ಲ. ಈ ಶಿಷ್ಯವೇತನದಿಂದ ಒಂದಷ್ಟು ಮಕ್ಕಳಿಗೆ ಅನುಕೂಲವಾಗಲಿ ಎಂಬುದಷ್ಟೇ ನಮ್ಮ ಉದ್ದೇಶ. ಅದರಲ್ಲೂ ಪ್ರತಿಭಾವಂತ ಹೆಣ್ಣು ಮಕ್ಕಳಿಗೂ ಇದರಿಂದ ನೆರವಾಗಲಿದೆ.
ಈಗಾಗಲೇ ಮಾಸ್ಟರ್ ಕ್ಲಾಸ್, ಹರಟೆ, ಸಿನಿಮಾ ಪ್ರೊಡಕ್ಷನ್ಸ್ ಸೇರಿ ಸಾಕಷ್ಟು ಕೆಲಸಗಳು ನಡೆಯುತ್ತಿವೆ. ಇದೀಗ ಹೊಸದಾಗಿ ಶಿಕ್ಷಣ ಕ್ಷೇತ್ರದಲ್ಲಿನ ಟ್ಯಾಲೆಂಟ್ ವುಳ್ಳವರಿಗೆ ಡಾ. ಕಾಮಿನಿ ರಾವ್ ಕೇರ್ಸ್ ಎಕ್ಸ್ಲೆನ್ಸ್ ಅವಾರ್ಡ್ಸ್ ನೀಡಲು ನಿರ್ಧರಿಸಿದ್ದೇವೆ. ಆನ್ಲೈನ್ ಮೂಲಕ ಇದರ ಪ್ರಕ್ರಿಯೆ ಶುರುವಾಗಲಿದೆ. ಹೊಸ ಹೆಜ್ಜೆ ಇರಿಸಿದ್ದೇವೆ. ಇದನ್ನು ಎಲ್ಲರಿಗೂ ತಲುಪಿಸಿ ಎಂದು ಕೇಳಿಕೊಳ್ಳುತ್ತೇನೆ ಎಂದರು.
ಪೂರ್ವಿ ಪ್ರೊಡಕ್ಷನ್ಸ್ ಮೂಲಕ ಎಂಟು ಚಿತ್ರಗಳ ನಿರ್ಮಾಣಕ್ಕೆ ಮುಂದಾಗಿದ್ದು, ಏಳು ಚಿತ್ರಗಳ ಕಥೆ ಕೂಡ ಸಿದ್ದವಾಗಿದೆ. ಸದ್ಯದಲ್ಲೇ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೂಜಾ ತಿಳಿಸಿದರು. ಕುಟುಂಬ ಸದಸ್ಯರ ಹಾಗೂ ಮಾಧ್ಯಮ ಮಿತ್ರರೊಂದಿಗೆ ಕಾಮಿನಿರಾವ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು.
Be the first to comment