ಲಾಕ್ಡೌನ್ ಪ್ರಾರಂಭದಿಂದಲೂ ಬಡವರ ಸಂಕಷ್ಟಕ್ಕೆ ಸಹಾಯ ಹಸ್ತ ಚಾಚುತ್ತಿರುವ ನಟ ಭುವನ್ ಮತ್ತು ನಟಿ ಹರ್ಷಿಕಾ ಪೂಣಚ್ಚ ಸದ್ಯ ತಮ್ಮ ತವರು ಕೊಡಗು ಜಿಲ್ಲೆಯ ಜನರ ಕೂಗಿಗೆ ಧ್ವನಿಯಾಗಿ ‘ಭುವನಂ ಸಂಸ್ಥೆ’ಯ ಮೂಲಕ ಕೋವಿಡ್ ಸೋಂಕಿತರಿಗೆ ಆಹಾರ ಕಿಟ್ ವಿತರಣೆ ಕಾರ್ಯದಲ್ಲಿ ತೊಡಗಿದ್ದಾರೆ.
ಇಷ್ಟುದಿನ ತೆರೆಯ ಮೆಲೆ ಜನರನ್ನ ರಂಜಿಸಿದ ನಟ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಪೂಣಚ್ಚ ಸದ್ಯ ಬಡವರು ಮತ್ತು ಸೋಂಕಿತರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ‘ಭುವನಂ ಸಂಸ್ಥೆ’ಯ ಮೂಲಕ ಕೊಡಗಿನ ಮೂಲೆ ಮೂಲೆಗೂ ಅಗತ್ಯ ವಸ್ತುಗಳನ್ನ ತಲುಪಿಸುತ್ತಿದ್ದಾರೆ. ಬೆಂಗಳೂರಿನಿಂದ ಆರಂಭವಾದ ಇವರ ಈ ಕಾರ್ಯ ಇದೀಗ ತಮ್ಮ ತವರು ಜಿಲ್ಲೆಯಾದ ಕೊಡಗಿನಲ್ಲೂ ಕೂಡ ಮುಂದುವರೆಯುತ್ತಿದೆ.
ಕೊಡಗು ಹೇಳಿ ಕೇಳಿ ಗುಡ್ಡಗಾಡು ಪ್ರದೇಶ. ಸರಿಯಾದ ರಸ್ತೆ ಸಂಪರ್ಕ ಇಲ್ಲ. ಮಳೆ ಗಾಳಿ ಬೇರೆ. ಆದ್ರೆ ಇವೆಲ್ಲವನ್ನು ಲೆಕ್ಕಿಸದೆ ಕೋವಿಡ್ ಸೋಂಕಿತರ ಮನೆ ಮನೆಗಳಿಗೆ ಆಹಾರದ ಕಿಟ್ ಗಳನ್ನ ತಲುಪಿಸುತ್ತಿದ್ದಾರೆ. ಜಿಲ್ಲೆಯಾದ್ಯಂತ ನೂರಾರು ಕುಟುಂಬಗಳಿಗೆ ಸುಮಾರು ಒಂದು ತಿಂಗಳಿಗೆ ಅವಶ್ಯವಿರುವ ಆಹಾರದ ಕಿಟ್ ಒದಗಿಸುತ್ತಿದ್ದಾರೆ. ಇಷ್ಟು ಮಾತ್ರ ಅಲ್ಲದೆ ಅಗತ್ಯ ಇದ್ರೆ ಮತ್ತಷ್ಟು ಸಹಾಯ ಮಾಡೋದಾಗಿ ಇಬ್ಬರು ಕಲಾವಿದರು ತಿಳಿಸಿದ್ದಾರೆ.
ಬಸ್ ಚಾಲಕರು, ನಿರ್ವಾಹಕರು ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲಿ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನ ಕಂಡ ಭುವನಂ ಸಂಸ್ಥೆ ಅವರಿಗೂ ಕೂಡ ಕಿಟ್ ವಿತರಿಸಿತು. ಕಳೆದ ಹಲವು ದಿನಗಳಿಂದ ಬಸ್ ಸಂಚಾರ ಬಂದ್ ಆಗಿರೋದ್ರಿಂದ ನಮಗೆ ಜೀವನ ಸಾಗಿಸಲು ತೊಂದರೆಯಾಗಿದೆ. ಕಷ್ಟದಲ್ಲಿ ಕೈ ಹಿಡಿಯಬೇಕಾದ ಸರ್ಕಾರ ಕೂಡ ನಮ್ಮ ಬಗ್ಗೆ ಗಮನ ಹರಿಸುತ್ತಿಲ್ಲಾ. ಹೀಗಿರುವಾಗ ನಮ್ಮ ಕಷ್ಟ ಅರಿತ ಕಲಾವಿದರು ನಮ್ಮ ಹಸಿವನ್ನ ನೀಗಿಸಿದ್ದಾರೆ ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ.
ಒಟ್ಟಿನಲ್ಲಿ ಶೂಟಿಂಗ್ ಶೂಟಿಂಗ್ ಅಂತ ಬ್ಯೂಸಿ ಇರುವ ಕಲಾವಿದರ ಮಧ್ಯೆ ಈ ಇಬ್ಬರು ಯುವ ಕಲಾವಿದರು ತಮ್ಮ ಕೈಲಾದ ಸಹಾಯ ಮಾಡುತ್ತ ಕೊಡಗಿನ ಜನತೆಯ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
Be the first to comment