ಅಂಧ & ಬುದ್ಧಿಮಾಂದ್ಯರಿಗೆ ಕೊರೊನಾ ಲಸಿಕೆ ಕೊಡಿಸಿದ ‘ಐರಾವನ್’ ಚಿತ್ರದ ನಟ ವಿವೇಕ್

‘ಐರಾವನ್’ ಚಿತ್ರದ ನಟ ವಿವೇಕ್ ಅವರು ಅಂಧ ಮತ್ತು ಬುದ್ಧಿಮಾಂದ್ಯರಿಗೆ ಕೊರೊನಾ ಲಸಿಕೆ ಕೊಡಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸುಮಾರು 150ಕ್ಕೂ ಅಧಿಕ ಅಂಧ ಮತ್ತು ಬುದ್ಧಿಮಾಂದ್ಯರಿಗೆ ಮಾತೃ ಎಜುಕೇಷನ್‌ ಟ್ರಸ್ಟ್‌ನಲ್ಲಿ ಕೊರೊನಾ ಲಸಿಕೆ ಕೊಡಿಸಿದ್ದಾರೆ.

ದೇಶದಲ್ಲಿ ಕೊರೊನಾ 2ನೇ ಅಲೆ ಇದೆ. ಇಂತಹ ಸಮಯದಲ್ಲಿ ಕೊರೊನಾವನ್ನು ತಡೆಗಟ್ಟುವುದಕ್ಕೆ ಇರುವ ಏಕೈಕ ಮಾರ್ಗೋಪಾಯವೆಂದರೆ, ಅದು ಲಸಿಕೆ ಪಡೆದುಕೊಳ್ಳುವುದು. ಸದ್ಯ ದೇಶದಲ್ಲಿ ಲಸಿಕೆ ಕೊರತೆ ಕೂಡ ಇದೆ. ಸದ್ಯ ಲಭ್ಯವಿರುವ ಲಸಿಕೆಗಳನ್ನು ಸರ್ಕಾರ ವಯಸ್ಸಿನ ಆಧಾರದ ಮೇಲೆ ನೀಡುತ್ತಿದೆ. ಈ ಮಧ್ಯೆ ಸುಮಾರು 150ಕ್ಕೂ ಹೆಚ್ಚು ಅಂಧ ಮತ್ತು ಬುದ್ಧಿಮಾಂದ್ಯರಿಗೆ ಲಸಿಕೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ ‘ಐರಾವನ್‘ ಚಿತ್ರದ ನಟ ವಿವೇಕ್.

ಯಲಹಂಕದ ಮಾತೃ ಎಜುಕೇಷನಲ್ ಟ್ರಸ್ಟ್ ನಲ್ಲಿರುವ 150ಕ್ಕೂ ಅಧಿಕ‌ ಅಂಧ ಹಾಗೂ ಬುದ್ದಿಮಾಂದ್ಯರಿಗೆ ಕೊರೊನಾ ಲಸಿಕೆ ಹಾಕಿಸಿದ್ದಾರೆ. ‘ಮಾತೃ ಎಜುಕೇಷನಲ್ ಟ್ರಸ್ಟ್ ಅಂಗವಿಕಲರಿಗೆ ಲಸಿಕೆ ನೀಡುತ್ತಿದ್ದರು. ಅದರ ಬಗ್ಗೆ ಮಾಹಿತಿ ಪಡೆದುಕೊಂಡು, 18 ವರ್ಷ ಮೇಲ್ಪಟ್ಟ ಸುಮಾರು 150ಕ್ಕೂ ಹೆಚ್ಚು ಅಂಧ ಹಾಗೂ ಬುದ್ಧಿಮಾಂದ್ಯರಿಗೆ ಅಲ್ಲಿಗೆ ಕರೆದುಕೊಂಡು ಹೋಗಿ ವ್ಯಾಕ್ಸಿನ್‌ ಕೊಡಿಸಿದೆವು’ ಎಂದು ಮಾಹಿತಿ ನೀಡುತ್ತಾರೆ ವಿವೇಕ್.

‘ಮೊದಲಿನಿಂದಲೂ ಈ ರೀತಿ ಸಮಾಜ ಸೇವೆ ಮಾಡುವುದಕ್ಕೆ ನನಗೆ ತುಂಬ ಆಸಕ್ತಿ ಇತ್ತು. ಕಳೆದ ಬಾರಿ ಲಾಕ್‌ಡೌನ್ ಆದ ಸಮಯದಲ್ಲಿ ಇದೇ ರೀತಿ ಸಹಾಯ ಮಾಡುವುದಕ್ಕೆ ಆಗಿರಲಿಲ್ಲ. ಆ ಸಮಯದಲ್ಲಿ ಊರಿನಲ್ಲಿದ್ದೆ. ಈ ಬಾರಿ ಇಲ್ಲಿಯೇ ಇದ್ದಿದ್ದರಿಂದ ಸಹಾಯ ಮಾಡುವುದಕ್ಕೆ ಅವಕಾಶ ಸಿಕ್ಕಿತು. ನಮ್ಮ ಕೈಯಲ್ಲಿ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ಹೀಗೆ ವ್ಯಾಕ್ಸಿನ್ ಕೊಡುತ್ತಿದ್ದಾರೆ ಎಂಬ ಬಗ್ಗೆ ಒಬ್ಬರಿಂದ ಮಾಹಿತಿ ಸಿಕ್ಕಿತ್ತು. ಹಾಗಾಗಿ, ತಕ್ಷಣವೇ 150ಕ್ಕೂ ಅಧಿಕ‌ ಅಂಧ ಹಾಗೂ ಬುದ್ದಿಮಾಂದ್ಯರಿಗೆ ಕೊರೋನ ಲಸಿಕೆ ಕೊಡಿಸಿದೆವು’ ಎನ್ನುತ್ತಾರೆ ವಿವೇಕ್.

ಸದ್ಯ ‘ಐರಾವನ್’ ಸಿನಿಮಾದಲ್ಲಿ ಜೆಕೆ (ಕಾರ್ತಿಕ್ ಜಯರಾಮ್) ಜೊತೆ ವಿವೇಕ್ ನಟಿಸಿದ್ದಾರೆ. ಆ ಸಿನಿಮಾ ಇನ್ನೇನು ತೆರೆಗೆ ಬರಬೇಕಿದೆ. ಅದರ ಜೊತೆಗೆ ಮತ್ತೊಂದು ಸಿನಿಮಾದಲ್ಲೂ ಅವರು ಬಣ್ಣ ಹಚ್ಚಲಿದ್ದಾರೆ. ಅದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!