ಬಡವರಿಗೆ ಫುಡ್‌ ಕಿಟ್‌ ನೀಡಿದ ಉತ್ತರ ಕರ್ನಾಟಕದ ನಟ ಅಭಯ್ ವೀರ

ಕರೋನಾ ಮಹಾಮಾರಿ ಸಾವಿರಾರು ಜನರ ಜೀವ ತೆಗೆಯುತ್ತಿರುವುದಲ್ಲದೆ ಜನರ ಜೀವನದ ಮೇಲೂ ಪರಿಣಾಮ ಬೀರಿದೆ. ದುಡಿಯವ ಕೈಗಳಿಗೆ ಕೆಲಸವಿಲ್ಲದಂತಾಗಿ ಬಡಜನತೆ ಜೀವನ ನಡೆಸುವುದೇ ದುಸ್ತರವಾಗಿದೆ. ಇಂಥ ಸಮಯದಲ್ಲಿ ಸಾಕಷ್ಟು ಜನ ಉಳ್ಳವರು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅದರಲ್ಲಿ ಚಿತ್ರರಂಗದ ಕಲಾವಿದರೂ ಇದ್ದಾರೆ.

ಈವರೆಗೆ ತೆರೆಯಮೇಲೆ ಹೀರೋ ಆಗುತ್ತಿದ್ದವರು, ನಿಜ ಜೀವನದಲ್ಲೂ ರಿಯಲ್ ಹೀರೋ ಆಗಿದ್ದಾರೆ, ಅಂಥವರಲ್ಲಿ ಉತ್ತರ ಕರ್ನಾಟಕದ ಯುವಪ್ರತಿಭೆ ಅಭಯ್‌ವೀರ್ ಕೂಡ ಒಬ್ಬರು, ಅವರು ಕೊರೋನಾ ಲಾಕ್‌ಡೌನ್ ಶುರುವಾದಾಗಿನಿಂದ ತಮ್ಮ ಸುತ್ತಮುತ್ತಲ ಭಾಗದಲ್ಲಿರುವ ನೂರಾರು ಬಡ ಕುಟುಂಬಗಳಿಗೆ ಒಂದು ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ, ಅಡುಗೆ ಎಣ್ಣೆಯಂಥ ಆಹಾರ ಸಾಮಗ್ರಿಗಳನ್ನು ಒಳಗೊಂಡ ಕಿಟ್ ವಿತರಿಸಿದ್ದಾರೆ ಅಲ್ಲದೆ ಕೊರೋನಾ ವಾರಿಯರ್ಸ್ ಗಳಾದ ಪೋಲೀಸರಿಗೆ ಮಾಸ್ಕ್, ಫೇಸ್‌ಷೀಲ್ಡ್, ಸ್ಯಾನಿಟೈಸರ್‌ಗಳನ್ನು ವಿತರಿಸುತ್ತಿದ್ದಾರೆ, ಈಗಾಗಲೇ ಮುಧೋಳ, ಲೋಕಾಪೂರ ಸುತ್ತಮುತ್ತಲ ಭಾಗಗಳಲ್ಲಿ ಕೂಲಿ ಕಾರ್ಮಿಕರಿಗೆ, ಪರಸ್ಥಳದಿಂದ ಬಂದ ವಿದ್ಯಾರ್ಥಿಗಳಿಗೆ, ಬಡ ಕುಟುಂಬಗಳಿಗೆ ಸುಮಾರು ಐದುನೂರಕ್ಕೂ ಹೆಚ್ಚು ದಿನಸಿ ಕಿಟ್‌ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಇದರ ಜೊತೆಗೆ ಅಭಯವೀರ ಅಭಿಮಾನಿಗಳ ಬಳಗದ ಸ್ನೇಹಿತರು ಹಸಿದವರಿಗೆ ಊಟ ನೀಡುವ ಕಾಯಕವನ್ನು ದಿನನಿತ್ಯ ಮಾಡಿಕೊಂಡು ಬಂದಿದ್ದಾರೆ,

ಅಭಯವೀರ್ ಅವರ ಸರ್ವೇಜನೋ ಸುಖಿನೋ ಭವಂತು ತಂಡದಿಂದ ಬೆಂಗಳೂರಿನಲ್ಲೂ ಸಹ ಸಂಕಷ್ಟದಲ್ಲಿರುವ ನೂರಾರು ಚಲನಚಿತ್ರ ಕಾರ್ಮಿಕರಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಮೂಲಕ ನೆರವಾಗಿದ್ದಾರೆ. ನಟ ಅಭಯವೀರ್ ಅವರ ಜೊತೆಗೆ ಸಚಿನ್‌ಗೌಡ ಪಾಟೀಲ್, ಸುನಿಲ್, ಮಣಿಕಂಠ ಸೇರಿದಂತೆ ಇನ್ನೂ ಹಲವಾರು ಸ್ನೇಹಿತರ ಬಳಗ ಕೈಜೋಡಿಸಿದೆ.

ಈಗಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡಿರುವ ಅಭಯ್‌ವೀರ ಅವರು ಮಾಡುತ್ತಿರುವ ಈ ಸೇವೆಯಿಂದ ನೂರಾರು ಕುಟುಂಬಗಳ ಹಸಿವು ನೀಗಿದಂತಾಗಿದೆ. ಇಂಥ ಸಮಯದಲ್ಲಿ ಯಾರೂ ಸಹ ಊಟ ಇಲ್ಲದೆ ಬಳಲಬಾರದು, ಇರುವ ಆಹಾರವನ್ನೇ ಹಂಚಿ ತಿನ್ನೋಣವೆಂದು ನಾನೀ ಕೆಲಸ ಮಾಡುತ್ತಿದ್ದೇನೆ, ಇದರಿಂದ ನನಗೆ ಆತ್ಮತೃಪ್ತಿಯಾಗಿದೆ ಎಂದು ಅಭಯವೀರ್ ಹೇಳುತ್ತಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!