ಹೈದರಾಬಾದ್ – ಕರ್ನಾಟಕದ ಯಾದಗಿರಿ ಜಿಲ್ಲೆ ಬಳಿಯ ಊರು “ಸೈದಾಪುರ”. ಈ ಊರಿನ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರಕ್ಕೆ ಸತ್ಯ ಲವ್ ಸ್ಟೋರಿ ಎಂಬ ಅಡಿಬರಹವಿದೆ. ಈ ಚಿತ್ರದ ಹಾಡುಗಳ ಬಿಡುಗಡೆ ಇತ್ತೀಚೆಗೆ ರೇಣುಕಾಂಬ ಥಿಯೇಟರ್ ನಲ್ಲಿ ನೆರವೇರಿತು. ಜೆ ಡಿ ಎಸ್ ಮುಖಂಡ ಹನುಮೇಗೌಡ ಬೀರಣಕಲ್ ಈ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿ ಶುಭ ಕೋರಿದರು.
ಶ್ರೀರಾಮ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿನು ಮನಸು ಸಂಗೀತ ನೀಡಿದ್ದಾರೆ.7
ಆಡಿಯೋ ರಿಲೀಸ್ ಸಮಾರಂಭದಲ್ಲಿ ಮಾತನಾಡಿದ ವಿನು ಮನಸು ಈ ಚಿತ್ರದ ನಾಲ್ಕು ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಎಲ್ಲರೂ ನಮ್ಮ ಚಿತ್ರವನ್ನು ಪ್ರೋತ್ಸಾಹಿಸಿ ಎಂದರು.
ಸ್ವಲ್ಪ ಭಾವುಕರಾಗಿ ಮಾತು ಆರಂಭಿಸಿದ ನಾಯಕ ಭಾನುಪ್ರಕಾಶ್ ಅಕಾಲಿಕ ಮರಣ ಹೊಂದಿದ ಅಣ್ಣನ ನೆನೆದು ಕಣ್ಣೀರಾದರು.
ನನ್ನ ಅಣ್ಣ ಕೂಡ ಒಂದು ಸಿನಿಮಾ ಮಾಡಿದ್ದ. ಚಿತ್ರ ತೆರೆಗೆ ಬರುವ ಮುಂಚೆಯೇ ಅವನು ನಮ್ಮನ್ನು ಬಿಟ್ಟು ಹೋದ. ಈ ಸಂಕಟ ನಮ್ಮ ಕುಟುಂಬನ್ನು ಇಂದಿಗೂ ಕಾಡುತ್ತಿದೆ ಎಂದರು. ಅಣ್ಣನ ನಿಧನದ ನಂತರ ಊರಿನ ಕೆಲವರು ನಮ್ಮನ್ನು ನೋಡುತ್ತಿದ್ದ ದೃಷ್ಟಿಯೇ ಬೇರೆ ಆಯಿತು.
ನಮ್ಮನ್ನು ನೋಡಿ ನಗುವವರ ಮುಂದೆ ಎದ್ದು ನಿಲ್ಲಬೇಕು ಎಂದು ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ. ನನ್ನ ಅಣ್ಣನ ಹಲವು ಸ್ನೇಹಿತರಾದ ಅಶೋಕ್, ಅಬ್ದುಲ್ ರೋಫ್ ಸಿದ್ವಿಕ್, ನಿಂಗಪ್ಪ, ಇರ್ಫಾನ್, ಮಲ್ಲೇಶ್ ಮುಂತಾದವರು ನನ್ನ ಜೊತೆ ನಿಂತು ಚಿತ್ರವನ್ನು ಬಿಡುಗಡೆ ಹಂತದವರೆಗೂ ತಂದಿದ್ದಾರೆ ಎಂದು ಭಾನುಪ್ರಕಾಶ್ ತಿಳಿಸಿದರು.
ಹೈದರಾಬಾದ್ ಮೂಲದ ಸಂಗೀತ ಈ ಚಿತ್ರದ ನಾಯಕಿ. ಕನ್ನಡದಲ್ಲಿ ನನಗೆ ಇದು ಚೊಚ್ಚಲ ಚಿತ್ರ. ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನಿಮ್ಮ ಬೆಂಬಲ ನಮಗಿರಲಿ ಎನ್ನುತ್ತಾರೆ ನಾಯಕಿ ಸಂಗೀತ. ನಿರ್ಮಾಪಕರ ಪೈಕಿ ಮಾತನಾಡಿದ ಅಶೋಕ್, ಮಹದೇವ ನನ್ನ ಗೆಳೆಯ. ಅವನ ಸಾವು ನಮ್ಮಗೆಲ್ಲಾ ತಂದಿದೆ ನೋವು. ಅವನ ತಮ್ಮ ಈ ಚಿತ್ರದ ಬಗ್ಗೆ ಹೇಳಿದಾಗ ಮಹದೇವನ ಮೇಲಿನ ಪ್ರೀತಿಯಿಂದ ನಾವು ಕೆಲವು ಸ್ನೇಹಿತರು ಭಾನುಪ್ರಕಾಶ್ ಜೊತೆ ನಿಂತೆವು ಎಂದರು.
ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರತಂಡದ ಅನೇಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ಅನುಭವ ಹಂಚಿಕೊಂಡರು.ಕೋವಿಡ್ ನಿಂದ ಬಳಲುತ್ತಿರುವ ಚಿತ್ರದ ನಿರ್ದೇಶಕ ಶ್ರೀರಾಮ್ ಸಮಾರಂಭದಲ್ಲಿ ಉಪಸ್ಥಿತರಿರಲಿಲ್ಲ.
ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪ್ರೀತಿಯ ಬಲೆಗೆ ಬಿದ್ದಾಗ ಮುಂದೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾ ಸಾರಾಂಶ. ಅಶೋಕ್ ಬಿ ಹಾಗೂ ಅಬ್ದುಲ್ ರೋಫ್ ಸಿದ್ವಿಕ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಮಾಣಿಕ್ಯ ಪ್ರಭು, ತಮ್ಮುಡು ಸಾಯಿ ಛಾಯಾಗ್ರಹಣ, ಬಾಲು ನೃತ್ಯ ನಿರ್ದೇಶನ ಹಾಗೂ ಕವಿತ ಬಂಡಾರಿ ಸಂಕಲನವಿರುವ ಈ ಚಿತ್ರಕ್ಕೆ ರಾಜ್ ಭಾಸ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಭಿನ್ನ ಕಥೆಯ ಈ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ.
Be the first to comment