ಬುಡಕ್ಕೆ ಕರೋನಾ ಬಂದ ಮೇಲೆ ಇವರ ತಲೆಗೆ ಏನಾಯ್ತು? ಮಂಜುನಾಥನ “ಗುರು”ತರ ಆರೋಪ
ಮನೆಗೊಂದು ಹೆಣ ಬೀಳುತ್ತೆ ನೋಡ್ತಾ ಇರಿ…!
ಒಂದಲ್ಲ ಎರಡು ಹೆಣ ಬೀಳುತ್ತೆ…!
ನನ್ನೂ ಜೈಲಿಗೆ ಹಾಕಿ, ಹೋಗಿ ಎಲ್ರಿಗೂ ಕರೋನಾ ಹಬ್ಬಿಸ್ತೀನಿ…!!
ನನ್ನನ್ನೇನು ತಮಾಷೆ ಅಂದ್ಕೊಡಿದ್ದೀರಾ…ನನ್ನಂಥವನ ಕೈಗೆ ಜವಾಬ್ದಾರಿ ಕೊಟ್ಟಿದ್ದಿದ್ರೆ, ಕರೋನಾ ಮಂಗಮಾಯ ಮಾಡಿಬಿಡ್ತಾ ಇದ್ದೆ. !!
ಇವರು ಮಾತಾಡೋ ಸ್ಟೈಲ್ ನೋಡಿದ್ರೆ ಯಾವ ಕ್ರೈಮ್ ಸ್ಟೋರಿ ನಿರೂಪಕರೂ ಒಂದ್ ಕ್ಷಣ ಗಾಬರಿ ಬೀಳ್ಬೇಕು. ಅವರ ಧ್ವನಿ, ಕಣ್ಣಲ್ಲೇ ಗುರಾಯಿಸೋದು, ಹಲ್ಲು ಕಚ್ಚಿ ಬೈಯ್ಯೋದು, ಅವರ ಮುಖಭಾವ, ಸಿಟ್ಟು, ಹತಾಶೆ ಎನಿಸುವ ಉಚ್ಚಾರಣೆ, ರವಿ ಶ್ರೀವತ್ಸ ಅವರ ಕ್ರೈಂ ಕಹಾನಿಗಳಿಗಿಂತ ಒಂದ್ ಕೈ ಮೇಲೆ. ಯಾರದು ಅಂತೀರಾ? ಇವರು ನಮ್ಮ ಎದ್ದೇಳು ಮಂಜುನಾಥ ಗುರುಪ್ರಸಾದ್. ಆದ್ರೆ, ಇಷ್ಟು ದಿನ ಮಲಗಿದ್ದ ಗುರುಪ್ರಸಾದ್ ಅವರಿಗೆ ಈಗ ಎದ್ದೇಳುವ ಸಮಯ ಬಂದಿದೆ ಅಂತ ಅವರ ಲೇಟೆಸ್ಟ್ ವಿಡಿಯೋ ನೋಡಿದವರು ಮಾತನಾಡುತ್ತಿದ್ದಾರೆ.
ತಮಗೆ ಕರೋನಾ ಪಾಸಿಟಿವ್ ಆದಮೇಲೆ ಗುರುಪ್ರಸಾದ್ ನಿಜಕ್ಕೂ ಗಾಬರಿ ಬಿದ್ದಿದ್ದಾರೆ. ಫೇಸ್ ಬುಕ್ ನಲ್ಲಿ ಲೈವ್ ಬಂದು ಎಮ್ಮೆ ಉಚ್ಚೆ ಹೊಯ್ದಂತೆ ಮಾತನಾಡಿದ್ದಾರೆ. ವಿಡಿಯೋ ಕೊನೆಯಲ್ಲಿ ಅವರು ಒಂದ್ ಮಾತ್ ಹೇಳ್ತಾರೆ ಅಸಹ್ಯ, ಅಸಹ್ಯ ಅಂತ. ಅವರ ಈ ಎಲ್ಲ ಮಾತುಗಳನ್ನ ಕೇಳಿದ ಮೇಲೆ ಎಲ್ಲರಿಗೂ ಅನ್ನಿಸೋದು ಅದೇ.
ವಿಡಿಯೋ ಲಿಂಕ್👇
https://www.facebook.com/watch/?v=1206848433063292
ಒಂದು ಕ್ಷಣ ನಾನೊಂದು ಇರುವೆ, ನಾನು ಈಗ ಇರುವೆ, ನಾಳೆ ಸಾಯುವೆ, ಯಾರಿಗೂ ಲಾಸಿಲ್ಲ ಅಂತಾರೆ. ಮರುಕ್ಷಣ ನಾನು ಶಾಪ ಹಾಕ್ತೀನಿ, ಅದು ನೀವು ಇರೋವರೆಗೂ ನಿಮಗೆ ನೋವು ಕೊಡುತ್ತೆ, ಇದು ನನ್ನ ಡೆತ್ ನೋಟ್ ಅಂತೆಲ್ಲಾ ಭ್ರಮೆಯಲ್ಲಿ ಮಾತಾಡ್ತಾರೆ,
ಸರಿ, ಕರೋನಾದ ವಿಷಯದಲ್ಲಿ ಸರ್ಕಾರದ ನಿರ್ಲಕ್ಷ್ಯ ಇದೆ. ಅದು ಯಾರಿಗೂ ಗೊತ್ತಿಲ್ಲದೆ ಇರೋ ವಿಷಯ ಅಲ್ಲ. ಆದರೆ, ಇದುವರೆಗೂ ಇನ್ನೊಬ್ಬರ ವಿಷಯದಲ್ಲಿ ನಗು ನಗುತ್ತಾ ಕಾಲೆಳೆದು ಮಾತನಾಡಿ ಮಜಾ ತೆಗೆದುಕೊಳ್ಳುತ್ತಿದ್ದ ಗುರು ಪ್ರಸಾದ್ ಅವರಿಗೆ ಈಗ ಸರ್ಕಾರದ ಅಸಲಿಯತ್ತು ಗೊತ್ತಾಗಿದೆ. ಇಷ್ಟ್ ದಿನ ಯಾರಾದ್ರೂ ಸರ್ಕಾರದ ಬಗ್ಗೆ ಮಾತಾಡಿದ್ರೆ, ಬಿಜೆಪಿಗರನ್ನ ಸ್ವಲ್ಪ ಟೀಕೆ ಮಾಡಿದ್ರೂ ಸಾಕು ಅವರನ್ನು ವ್ಯಂಗ್ಯವಾಗಿ ಆಡಿಕೊಳ್ಳುತ್ತಿದ್ದ ಗುರು ಪ್ರಸಾದ್ ಅವರಿಗೆ ಈಗ ಬಿಜೆಪಿ ಮತ್ತು ರಾಜ್ಯ ಸರ್ಕಾರಗಳ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ. ಅವರು ದುಡ್ಡು ಕೊಟ್ಟು ಓಟು ಹಾಕಿಸಿಕೊಂಡವರು ಅಂತ ಈಗ ಹೇಳ್ತಾ ಇದ್ದಾರೆ. ಇನ್ನು ರಾಜಕಾರಣಿಗಳು ಕೋಟಿಗಟ್ಟಲೆ ದುಡ್ಡು ಮಾಡುತ್ತಿರೋದು ತಮಗೆ ಕರೋನಾ ಬಂದ ಮೇಲೆ ಇವರಿಗೆ ಗೊತ್ತಾಗಿದೆ ಪಾಪ.
ಆರೋಗ್ಯ ಸಚಿವ ಡಾ, ಸುಧಾಕರ್ ಅವರ ಮೇಲೆ ಗುರು ಕೆಂಡಾಮಂಡಲ ಆಗಿದ್ದಾರೆ. ಕರ್ನಾಟಕದಲ್ಲಿ ಕರೋನಾದಿಂದ ಆದ ಪ್ರತಿ ಸಾವಿಗೂ ಸುಧಾಕರ್ ಅವರೇ ಕಾರಣವಂತೆ. ಅಲ್ಲದೆ ಮುಖ್ಯಮಂತ್ರಿಗಳ ಮಗ ವಿಜಯೇಂದ್ರನ ಮೇಲೂ ಗುರು ಗರಂ ಆಗಿದ್ದಾರೆ. ಹಾಗೆ ನೋಡಿದರೆ ಬರೀ ಬಿಜೆಪಿಯವರನ್ನಷ್ಟೇ ಅಲ್ಲ, ಕಾಂಗ್ರೆಸ್, ಜೆಡಿಎಸ್ ಪಕ್ಷದವರನ್ನೂ ಬಯ್ತಾ ಇದ್ದಾರೆ. ನಮ್ಮ ಮನೆಗೆ ಕರೋನಾ ತಂದು ಸೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಧನ್ಯವಾದ ಅನ್ನೋ ಅವರು, ಇವರಿಗೆ ಕರೋನಾ ಬರೋಕೆ ಡಿಕೆಶಿ, ಕುಮಾರಸ್ವಾಮಿ ಹೆಂಗೆ ಕಾರಣ ಅಂತ ಮಾತ್ರ ಬಾಯಿ ಬಿಡಲ್ಲ. ಆದ್ರೆ ವಿಶೇಷ ಅಂದ್ರೆ ಇವರ ಪಾಲಿಗೆ ಮೋದಿ ಮಾತ್ರ ಇನ್ನೂ ಪ್ರಾಮಾಣಿಕ. ಗುರುಪ್ರಸಾದ್ ಅವರ ಬಾಯಲ್ಲಿ ಇಷ್ಟೆಲ್ಲಾ ಮಾತು ಕೇಳಿದ ಮೇಲೆ ಗುರುಪ್ರಸಾದ್ ಅವರಿಗೆ ತಲೆ ಸರಿ ಇದೆಯಾ ಅಂತ ಅನುಮಾನ ಬಂದರೆ ನೀವು ತಲೆಕೆಡಿಸಿಕೊಳ್ಳಬೇಡಿ. ಯಾಕಂದ್ರೆ ಬಹುತೇಕ ಎಲ್ಲರದ್ದೂ ಇದೇ ಅನಿಸಿಕೆ.
ಇಷ್ಟು ದಿನ ಸುಮ್ಮನಿದ್ದ ಇವರಿಗೆ, ವಿಷಯ ತಮ್ಮ ಬುಡಕ್ಕೆ ಬಂದ ಮೇಲೆ ತಲೆ ಕೆಲಸ ಮಾಡೋಕೆ ಶುರು ಮಾಡ್ತಾ ಅಂತ ಅನುಮಾನ ಯಾರಿಗಾದರೂ ಬರೋದು ಸಹಜ. ಆದರೆ ಅವರ ಮಾತು ಕೇಳಿದ್ರೆ ಮಾತ್ರ ಅವರು ತಲೆ ಬುಡ ಇಲ್ಲದೆ ಮಾತಾಡ್ತಾ ಇದ್ದಾರೆ ಅಂತ ಅನ್ನಿಸೋದು ನಿಜ. ನಾನು ಸತ್ರೆ ಯಾರಿಗೂ ಲಾಸ್ ಇಲ್ಲ ಅಂತಾರೆ, ಆದರೆ ಅವರ ಮಾತಲ್ಲಿ ಸಾವಿನ ಭಯ ಎದ್ದು ಕಾಣುತ್ತಿದೆ. ಆದರೆ ಇಷ್ಟೆಲ್ಲಾ ಹೇಳಿದ್ದು ಯಾಕೆ ಅಂದ್ರೆ ಆತ ಎಲ್ಲರೂ ಹೇಳೋದನ್ನೇ ಹೇಳುತ್ತಿದ್ದಾರೆ. ಆದರೆ ಅವರಲ್ಲಿನ ಆ ಸಾವಿನ ಭಯ, ಈಗ ಎಲ್ಲರನ್ನೂ ಭಯ ಬೀಳಿಸುವ ಪ್ರಯತ್ನ ಮಾಡುತ್ತಿದೆ. ಕರೋನಾ ಬಂದವರು ಇವರ ಮಾತು ಕೇಳಿದರೆ ಹಾರ್ಟ್ ಅಟ್ಯಾಕ್ ನಿಂದಲೇ ಸತ್ತು ಹೋದರೂ ಆಶ್ಚರ್ಯ ಇಲ್ಲ. ಇಂಥ ಸಮಯದಲ್ಲಿ ಹೇಳಬೇಕಾದುದನ್ನು ಸಂಯಮದಿಂದ ಹೇಳಿ, ತನ್ನ ಆರೋಗ್ಯ ಮತ್ತು ಸಮಾಜದ ಆರೋಗ್ಯ ಎರಡನ್ನೂ ಕಾಪಾಡೋದು ಇಂಥವರ ಕರ್ತವ್ಯ, ಆದರೆ, ಒಬ್ಬ ಜವಾಬ್ದಾರಿಯುತ ಮನುಷ್ಯನಾಗಿ ಅವರು ಹೀಗೆ ಮಾತಾಡಬಹುದಾ ಅಂದ್ರೆ, ಅವರನ್ನು ಜವಾಬ್ದಾರಿಯುತ ಮನುಷ್ಯ ಅಂತ ನೀವ್ಯಾಕೆ ತಪ್ಪು ತಿಳ್ಕೊಂಡಿದೀರ ಎನ್ನುತ್ತದೆ ಗಾಂಧಿನಗರ.
Be the first to comment