ಟಾಕೀಸ್ ತೆರೆಯುವ ಮುನ್ನ

ಈ ವಾರ ರಿಲೀಸಾಗುತ್ತಿರುವ ಕೃಷ್ಣ ಅಜಯ್‌ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮ ಪಂಚತಾರಾ ಹೋಟೆಲ್‌ನಲ್ಲಿ ನೆರವೇರಿತು. ವರ್ಣರಂಜಿತವಾಗಿ ನಡೆದ ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಈ ಹಿಂದೆ ಅಜಯ್‌ರಾವ್ ಅವರ ಜೊತೆ ಕೃಷ್ಣ ಸೀರೀಸ್‌ನಲ್ಲಿ ಚಿತ್ರಗಳನ್ನು ಮಾಡಿದ ನಿರ್ಮಾಪಕರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು. ವಿಜಯಾನಂದ್ (ಆನಂದಪ್ರಿಯ) ಅವರ ನಿರ್ದೇಶನದ ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದ್ದು, ಹಾಡುಗಳು ಹಾಗೂ ಟೀಸರ್, ಟ್ರೇಲರ್ ಮೂಲಕ ಪೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕ ಗೋವಿಂದರಾಜು ಒಮ್ಮೆ ನಿರಂತ್ ಈ ಥರದ ಕಥೆ ಇದೆ ಎಂದು ಹೇಳಿದರು. ಅವರ ಮೂಲಕ ಆನಂದಪ್ರಿಯ ಮೀಟ್ ಆಗಿ ಕಥೆ ಕೇಳಿದಾಗ ಈ ಸಿನಿಮಾ ನಾನೇ ಮಾಡಬೇಕು ಎಂದು ಆರಂಭಿಸಿದೆ. ಅಲ್ಲದೆ ಈ ಚಿತ್ರ ಇಲ್ಲೀವರೆಗೆ ಬರಲು ನಾನೊಬ್ಬನೇ ಕಾರಣನಲ್ಲ, ಆರ್‌ ಕೆ ಟಾಕೀಸ್ ನ ಕೃಷ್ಣ ಸೇರಿದಂತೆ ಇತರರೆಲ್ಲ ಕೈಜೋಡಿಸಿದ್ದರಿಂದ ಕಂಪ್ಲೀಟ್ ಆಗಿದೆ. ಕೋವಿಡ್‌ನಿಂದ ಸ್ವಲ್ಪ ಲೇಟಾದರೂ ಲೇಟೆಸ್ಟಾಗಿ ಬರುತ್ತಿದೇವೆ ಎಂದರು.

ನಂತರ ನಿರ್ದೇಶಕ ವಿಜಯಾನಂದ್ ಮಾತನಾಡುತ್ತ ಈ ಚಿತ್ರದ ಕಥೆ ಹುಟ್ಟಿದ್ದು ಒಂದು ಪೇಪರ್‌ನಲ್ಲಿ ಬಂದ ಆರ್ಟಿಕಲ್‌ನಿಂದ. ೨೦೧೭ರಲ್ಲಿ ಲಕ್ನೋದ ಚಿತ್ರಮಂದಿರವೊಂದರಲ್ಲಿ ನಡೆದ ಘಟನೆಯದು. ಇದನ್ನೇ ಇಟ್ಟುಕೊಂಡು ಸಿನಿಮಾ ಮಾಡಿದರೆ ಹೇಗೆ ಅನ್ನಿಸಿತು, ೨ ವರ್ಷ ಕೂತು ಸ್ಕ್ರಿಪ್ಟ್ ಮಾಡಿಕೊಂಡೆ, ಅದ್ಭುತವಾದ ಸಿನಿಮಾ ಕಣ್ಣಮುಂದೆ ಬಂತು. ಅದನ್ನು ಪ್ರೇಕ್ಷಕರಿಗೆ ಯಾವ ರೀತಿ ಪ್ರೆಸೆಂಟ್ ಮಾಡಿದರೆ ಚೆನ್ನಾಗಿರುತ್ತೆ ಅಂತ ಪ್ಲಾನ್ ಮಾಡಿದೆ, ನಾಯಕ ಎಂದಕೂಡಲೇ ಅಜಯ್‌ರಾವ್ ಕಣ್ಣಮುಂದೆ ಬಂದರು, ಆದರೆ ಅವರು ಹಾರರ್ ಸಬ್ಜೆಕ್ಟ್ ಒಪ್ತಾರೋ ಇಲ್ವೋ ಎಂದು ಅನುಮಾನವಿತ್ತು. ಕಥೆ ಕೇಳಿದ ಕೂಡಲೇ ಗ್ರೀನ್‌ಸಿಗ್ನಲ್ ಕೊಟ್ಟರು. ಅವರ 20 ವರ್ಷಗಳ ವೃತ್ತಿ ಜೀವನದಲ್ಲೇ ಮೊದಲಬಾರಿಗೆ ಒಂದು ಹಾರರ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡದಲ್ಲಿ ಈ ರೀತಿಯ ಹಾರರ್, ಥ್ರಿಲ್ಲರ್ ಚಿತ್ರಗಳು ಈವರೆಗೆ ಬಂದಿಲ್ಲವೆಂದೇ ಹೇಳಬಹುದು, ಗೆಳೆಯ ಶ್ರೀಧರ್ ಸಂಭ್ರಮ್ ಹಾಗೂ ನಿರ್ಮಾಪಕರು ನೀಡಿದ ಸಹಕಾರ ತುಂಬಾ ದೊಡ್ಡದು. ಖಂಡಿತ ಈ ಚಿತ್ರ ಎಲ್ಲರಿಗೂ ದೊಡ್ಡ ಬ್ರೇಕ್ ನೀಡುತ್ತೆ ಎಮದು ಹೇಳಿದರು, ಕೃಷ್ಣ ಟಾಕೀಸ್ ಚಿತ್ರದಲ್ಲಿ ನಟ ಅಜಯ್‌ರಾವ್ ಒಬ್ಬ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದಾರೆ. ತನ್ನ ಪಾತ್ರದ ಕುರಿತಂತೆ ಮಾತನಾಡುವ ಸಂದರ್ಭದಲ್ಲಿ ನಿರ್ಮಾಪಕ ಗೋವಿಂದರಾಜು ಅವರನ್ನು ನೆನೆದು ಭಾವುಕರಾದ ಅವರು, ರೆಡಿಯಾಗಿರುವ ಸಿನಿಮಾವನ್ನು ಬಿಡುಗಡೆ ಮಾಡಲು ಹೊರಟಾಗ ಲಾಕ್‌ಡೌನ್ ಆಗಿ ಒಂದು ವರ್ಷ ನಿರ್ಮಾಪಕರು ಅನುಭವಿಸಿದ ಕಷ್ಟವನ್ನು ಹೇಳಿಕೊಂಡರು.

ನಿಗೂಢ ಸಾವುಗಳ ಸುತ್ತ ನಡೆಯೋ ಕಥೆಯನ್ನು ಕೃಷ್ಣ ಟಾಕೀಸ್ ಒಳಗೊಂಡಿದ್ದು, ಈ ಸಾವುಗಳ ಬೆನ್ನು ಹತ್ತೋ ನಾಯಕ ಕೃಷ್ಣ ಕೊನೆಗೆ ಆ ಸುಳಿಯಲ್ಲಿ ತಾನೇ ಸಿಲುಕಿಹಾಕಿಕೊಳ್ಳುತ್ತಾನೆ. ಅದು ಹೇಗೆ ಈ ಕೊಲೆಗಳ ಸುಳಿಯಲ್ಲಿ ನಾಯಕ ಕೃಷ್ಣ ಸಿಲುಕುತ್ತಾನೆ ? ಅದರಿಂದ ಆತ ಹೇಗೆ ಹೊರಬರ್ತಾನೆ ? ಅಥವಾ ಹೊರಗೆ ಬರಲ್ವಾ ? ದೆವ್ವ, ಭೂತ ಏಕೆ ಅವನನ್ನು ಕಾಡುತ್ತದೆ ? ಹೀಗೆ ಹುಟ್ಟುವ ಅನೇಕ ಪ್ರಶ್ನೆಗಳಿಗೆ ಚಿತ್ರದಲ್ಲಿ ಉತ್ತರವಿದೆ. ಕೃಷ್ಣ ಟಾಕೀಸ್ ೧೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.

ಸಸ್ಪೆನ್ಸ್, ಹಾರರ್ ಕಂ ಥ್ರಿಲ್ಲರ್ ಕಥೆಯ ಈ ಚಿತ್ರದಲ್ಲಿ ಅಪೂರ್ವ ಮತ್ತು ಸಿಂಧೂ ಲೋಕನಾಥ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿಕ್ಕಣ್ಣ, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ. ಪ್ರಕಾಶ್ ತುಮ್ಮಿನಾಡು, ಶೋಭರಾಜ್, ಯಶ್ ಶೆಟ್ಟಿ ಸೇರಿದಂತೆ ಹಲವಾರು ಹೆಸರಾಂತ ಕಲಾವಿದರ ತಾರಾಬಳಗವೇ ಇದೆ. ಅಭಿಷೇಕ್ ಜಿ.ಕಾಸರಗೋಡು ಅವರ ಛಾಯಾಗ್ರಹಣ, ಶ್ರೀಕಾಂತ್ ಅವರ ಸಂಕಲನ ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!