ಲಾಕ್ ಡೌನ್ ಮುಗಿದ ಮೇಲೆ ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ತೆರೆಕಂಡು ಯಶಸ್ಸು ಗಳಿಸುತ್ತಿದ್ದಂತೆ ಕನ್ನಡದಲ್ಲಿ ಹೊಸ ಬ್ಯಾನರ್, ನಿರ್ಮಾಪಕ, ನಿರ್ದೇಶಕರ ಚಿತ್ರಗಳೂ ಕೂಡಾ ಈಗ ತೆರೆಗೆ ಬರುವ ಹುಮ್ಮಸ್ಸು ತೋರಿಸುತ್ತಿದ್ದಾರೆ.
ಕರೋನಾ ಇನ್ನೂ ಸಂಪೂರ್ಣ ನಮ್ಮನ್ನು ಬಿಟ್ಟು ಹೋಗಿಲ್ಲ. ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರಲು ಆಸಕ್ತಿ ತೋರಿಸುತ್ತಿರುವ ಪ್ರೇಕ್ಷಕರು ಕೊಂಚ ಗೊಂದಲದಲ್ಲೇ ಇದ್ದಾರೆ. ಆದರೆ ಇಂಥ ಸಮಯದಲ್ಲೂ ತಮ್ಮ ಚಿತ್ರವನ್ನು ಬಿಡುಗಡೆ ಮಾಡುವ ಆತ್ಮವಿಶ್ವಾಸ ಹಲವು ಸಿನಿಮಾ ಮಂದಿಗೆ ಇದೆ. ಅಂಥದ್ದೇ ಧೈರ್ಯ ಇರುವ ಚಿತ್ರ ರೀವೈಂಡ್. ಹೌದು ಬಹಳ ದಿನಗಳಿಂದ ತನ್ನ ಟ್ರೈಲರ್ ನಿಂದ ಸಾಕಷ್ಟು ಸುದ್ದಿ ಮಾಡಿದ ರಿವೈಂಡ್ ಚಿತ್ರ ಈಗ ಚಿತ್ರಮಂದಿರಗಳಲ್ಲಿ ಸದ್ದು ಮಾಡಲು ಹೆಜ್ಜೆ ಇಟ್ಟಿದೆ. ಈ ವಾರ ಅಂದರೆ ಏಪ್ರಿಲ್ 16ರಂದು ರಿವೈಂಡ್ ಚಿತ್ರ ರಾಜ್ಯಾದ್ಯಂತ ತೆರೆಕಾಣಲಿದೆ.
ಅಮೆರಿಕಾ ಮೂಲದ ಪನಾರಮಿಕ್ ಸ್ಟುಡಿಯೋ ಕಂಪನಿಯ ಬ್ಯಾನರ್ ನಲ್ಲಿ ಪ್ರಭಾಕರ್ ವಿಶ್ವಾರಾಧ್ಯ ಮತ್ತು ಪ್ರದೀಪ್ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ನಿರ್ದೇಶಕರಾದ ತೇಜ್ ನಾಯಕನಾಗಿಯೂ ಕಾಣಿಸಿಕೊಡಿದ್ದಾರೆ.
ನಟಿ ಪ್ರಮೀಳಾ ಜೋಷಾಯ್ ಅವರ ಸಹೋದರನ ಪುತ್ರನಾದ ತೇಜ್ ಈಗಾಗಲೇ ತಮ್ಮ ರೀವೈಂಡ್ ಚಿತ್ರದ ಟೀಸರ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡಿದ್ದಾರೆ. ಇದುವರೆಗೂ 6 ಚಿತ್ರಗಳಲ್ಲಿ ಅಭಿನಯಿಸಿರುವ ತೇಜ್ ತಮಿಳು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಜೀವನದಲ್ಲಿ ಏನಾದರೂ ಸಾಧಿಸಬೇಕು ಅಂದ್ರೆ ಆಗಾಗ ನಾವು ನಡೆದು ಬಂದ ಹಾದಿಯನ್ನು ರಿವೈಂಡ್ ಮಾಡಿಕೊಂಡು ನೋಡಬೇಕಂತೆ. ದೊಡ್ಡವರು ಹೇಳಿದ ಈ ಮಾತನ್ನೇ ತಮ್ಮ ಚಿತ್ರದ ಟೈಟಲ್ ಮೂಲಕ ಹೇಳುತ್ತಿರುವ ಈ ಚಿತ್ರತಂಡ ಈಗ ಪ್ರೇಕ್ಷಕರ ಮನಸ್ಸಿಗೆ ಲಗ್ಗೆ ಹಾಕಲು ರೆಡಿಯಾಗಿದೆ.
ಕಾಲಿವುಡ್ ನಲ್ಲಿ ಸಿನಿಮಾ ಪಯಣ ಆರಂಭಿಸಿದ್ದ ತೇಜ್. ‘ಕೊಂಜಮ್ ವೆಯಿಲ್ ಕೊಂಜಮ್ ಮಝಾಯಿ, ಕದಲುಕು ಮರಣಾನಂ ಇಲೈ, ಗಾಂಥಮ್ ಮತ್ತು ಮೊಜಿವತ್ ಯಾಥ್ಲೇಲ್ ಮತ್ತಿತರ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದು ಅವರಿಗೆ ಕನ್ನಡದಲ್ಲಿ ಮೊದಲ ಪ್ರಯತ್ನ.
ರೀವೈಂಡ್ ಒಂದು ಕೌಟುಂಬಿಕ ಥ್ರಿಲ್ಲರ್ ಚಿತ್ರವಾಗಿದ್ದು, ತಮಿಳು ಹಾಗೂ ಕನ್ನಡ ಎರಡು ಭಾಷೆಗಳಲ್ಲಿ ಮೂಡಿಬರುತ್ತಿದೆ. ತಮ್ಮ ಮುಂದಿನ ಚಿತ್ರವಾದ ರಾಮಾಚಾರಿ 2.0 ಚಿತ್ರಕ್ಕೆ ರಿವೈಂಡ್ ಚಿತ್ರ ಭದ್ರ ಬುನಾದಿ ಹಾಕಲಿದೆ ಎಂಬುದು ತೇಜ್ ಅವರ ನಂಬಿಕೆ. ಒಟ್ಟಿನಲ್ಲಿ ಇದೇ ಶುಕ್ರವಾರ ರೀವೈಂಡ್ ಸಿನಿಮಾ ಬಿಡುಗಡೆ ಆಗುತ್ತಿದೆ. ಸಿನಿಪ್ರೇಮಿಗಲು ಸ್ಟಾರ್ ಸಿನಿಮಾಗಳಿಗೆ ಕೊಟ್ಟಷ್ಟೇ ಪ್ರೀತಿಯನ್ನು ತಮ್ಮ ಚಿತ್ರಕ್ಕೂ ನೀಡುತ್ತಾರೆ ಎಂಬ ಭರವಸೆ ಚಿತ್ರತಂಡದ್ದು.
@ಬಿಸಿನಿಮಾಸ್
Be the first to comment