ಕುರ್ಚಿಗೆ ಅಂಟಿಕೊಂಡು ಕೂತೇ ನೋಡಬೇಕೆನಿಸುವ ಟ್ರೈಲರ್

ಗಂಡು ಮಕ್ಳು ಅಡ್ಡ ದಾರಿ ಹಿಡಿತಾ ಇದ್ದಾರೆ ಅಂತ ಗೊತ್ತಾದಾಗ ಎಲ್ಲರೂ ಹೇಳೋದು, ಒಂದ್ ಮದ್ವೆ ಮಾಡಿ ಸರಿ ಹೋಗ್ತಾನೆ ಅಂತ. ಅದು ಮಾಮೂಲಿ ಸ್ಟೈಲು. ಆದರೆ ಅದನ್ನೇ, ‘ಅವನು ಒಂದು ತಪ್ಪು ಹೆಜ್ಜೆ ಇಡೋಕ್ ಮುಂಚೆ, ನೀವೇ ಏಳು ಹೆಜ್ಜೆ ಇಡಿಸ್ಬಿಡಿ’ ಅಂತ ಹೇಳಿದ್ರೆ ಅದು ವೀಲ್ ಛೇರ್ ರೋಮಿಯೋ ಸ್ಟೈಲು. ಇದು ಇಂದು ಬಿಡುಗಡೆಯಾಗಿರುವ ವೀಲ್ ಛೇರ್ ರೋಮಿಯೋ ಚಿತ್ರದ ಟ್ರೈಲರ್ನಲ್ಲಿರೋ ಸಂಭಾಷಣೆಯ ತುಣುಕು.

ಗಣೇಶ್ ಅಭಿನಯದ ರೋಮಿಯೋ ಚಿತ್ರದಲ್ಲಿ ತಮ್ಮ ಸಂಭಾಷಣೆಯಿಂದಲೇ ಹೆಸರು ಮಾಡಿದ್ದ ನಟರಾಜ್ ಈಗ ವೀಲ್ ಛೇರ್ ಹತ್ತಿ ಅದಕ್ಕೆ ಸಾರಥಿಯಾಗಿದ್ದಾರೆ. ಅವರ ನಿರ್ದೇಶನದ ಈ ಸಿನಿಮಾ ಒಂದು ಕಮರ್ಷಿಯಲ್ ಹಬ್ಬ ಅನಿಸೋದು ಚಿತ್ರದ ಟ್ರೈಲರ್ ನೋಡಿದಾಗ. ಚಿತ್ರದಲ್ಲಿ ದೊಡ್ಡ ಸ್ಟಾರ್ ಇಲ್ಲ, ಆದರೆ ಇಂಟರೆಸ್ಟಿಂಗ್ ಆದ ಸಣ್ಣ ಕಥೆಯ ಎಳೆ ಇದೆ. ಅಂಗವಿಕಲ ಮಗನ ಆಸೆ ಈಡೇರಿಸೋಕೆ ಯಾವ ಲೆವೆಲ್ಲಿಗೆ ಹೋಗೋಕೂ ಸೈ ಎನ್ನುವ ಅಪ್ಪ ಇಲ್ಲಿದ್ದಾನೆ. ಇಂಥ ಕಥೆ ಪ್ರೇಕ್ಷಕರನ್ನು ಎಲ್ಲಿಗೆ ಕರೆದುಕೊಂಡು ಹೋಗುತ್ತದೆ ಎಂಬ ಕುತೂಹಲವನ್ನು ಈ ಟ್ರೈಲರ್ ಹುಟ್ಟುಹಾಕಿದೆ. ಗುರು ಕಶ್ಯಪ್ ಅವರ “ಸಂಭಾಷಣೆ” ಈ ಟ್ರೈಲರ್ ನ ಹೈಲೈಟ್ ಅನ್ನೋದನ್ನು “ಮಾತಿನಲ್ಲಿ ಹೇಳಬೇಕಾಗಿಲ್ಲ”.

ನಿರ್ದೇಶಕ “ನಟ”ರಾಜ್ ಮೊದಲ ಚಿತ್ರದಲ್ಲೇ ಎಲ್ಲ ನಟರನ್ನೂ ಸಮರ್ಪಕವಾಗಿ ಬಳಸಿಕೊಂಡಿರುವ ಲಕ್ಷಣಗಳು ಕಾಣಿಸುತ್ತವೆ. ರಂಗಾಯಣ ರಘು, ಸುಚೇಂದ್ರ ಪ್ರಸಾದ್ ಅವರ ಪ್ರತಿಭೆಯನ್ನು ರಸಹಿಂಡಿ ಬಳಸಿಕೊಂಡಿರೋದು ನಟರಾಜ್ ಅವರ ಜಾಣ್ಮೆ. “ಮೇರು ಪರ್ವತ”ದಂತಿರೋ ಅವರ ಜೊತೆ ಹಾಸ್ಯ ಕಲಾವಿದರಾದ “ಗಿರಿ” ಕೂಡ ಇದ್ದಾರೆ. ಹಾಗಾಗಿ ಮನರಂಜನೆಯ ಎಲ್ಲ ಬಾಗಿಲುಗಳೂ ಇಲ್ಲಿ ಓಪನ್ ಆಗುವ ಲಕ್ಷಣಗಳಿವೆ.

ಕಥೆಯ ಫ್ಲೇವರ್ ಟ್ರೈಲರ್ ನಲ್ಲಿ ಅಲ್ಪ ಸ್ವಲ್ಪ ಗೊತ್ತಾಗುತ್ತದೆ. ಮದುವೆಗೆ ಮುಂಚೆ ಪ್ರಸ್ತ ಮಾಡಿಕೊಳ್ಳಲು ವೇಶ್ಯೆಯ ಬಳಿ ಹೋಗುವ ನಾಯಕ ಅವಳ ಬಳಿ ಮದುವೆಯ ಪ್ರಸ್ತಾಪ ಇಡುತ್ತಾನೆ ಅನ್ನೋದು ಮಾಮೂಲಿ “ಸಿನಿಕತನ” ಎನಿಸಿದರೂ, ಇಲ್ಲಿನ “ಸಿನಿ ಕಥನ” ಬೇರೆ ರೀತಿಯದ್ದೇ ಎನಿಸುವಂತೆ ಮಾಡುತ್ತದೆ ಟ್ರೈಲರ್. ನಾಯಕ ರಾಮ್ “ಚೇತನ್”, ಇಲ್ಲಿ ವಿಕಲ “ಚೇತನ”. ಅವರು ಯಾವಾಗಲೂ ವೀಲ್ ಛೇರ್ ಮೇಲೆ “ಕೂತಿರ್ತಾರೆ”. ಹಾಗಾಗಿ ಅವರ ಅಭಿನಯ “ಸ್ಟಾಂಡಿಂಗ್” ಒವೇಶನ್ ಕೊಡುವಷ್ಟು ಅದ್ಭುತವಾಗಿಲ್ಲ ಎನಿಸಿದರೆ ಅದಕ್ಕೆ ಮಾರ್ಜಿನ್ ಕೊಡಬಹುದು. ಯಾಕಂದ್ರೆ ಅವರು ತಮ್ಮ ಪಾತ್ರದಲ್ಲಷ್ಟೇ ಅಲ್ಲ, ನಟನೆಯಲ್ಲೂ ಬಹುಷಃ “ವರ್ಜಿನ್”. ಅಂದ್ರೆ ಇದು ಅವರ ಅಭಿನಯದ ಮೊದಲ ಸಿನಿಮಾ ಇರಬೇಕು. ಅಂದಹಾಗೆ, ಬಿಜೆ ಭರತ್ ಅವರ ಸಂಗೀತದ ಝಲಕ್ ವೀಲ್ ಛೇರ್ ರೋಮಿಯೋದ ಈ ಟ್ರೈಲರ್ ನಲ್ಲಿ ಕಂಡುಬಂದಿಲ್ಲ. ಇದೇನಿದ್ದರೂ ಬರೀ “ಟಾಕ್ ಟೈಮ್” ಕೊಡುವ ಟ್ರೈಲರ್. ಆದರೆ, ಇದು “ಟಾಕ್ ಆಫ್ ದಿ ಟೌನ್” ಆಗುವ ಎಲ್ಲ ಲಕ್ಷಣಗಳನ್ನಂತೂ ತೋರಿಸಿದೆ. ಸಿನಿಮಾ ಬಿಡುಗಡೆ ಆದಾಗ ಚಿತ್ರಮಂದಿರದಲ್ಲೂ, ಚಿತ್ರದ ನಾಯಕಂತೆ ಪ್ರೇಕ್ಷಕರೂ ಕೂಡ ಕುರ್ಚಿಗೆ ಅಂಟಿಕೊಂಡೇ ಇರುತ್ತಾರೆ ಎನಿಸಿದರೆ ತಪ್ಪಿಲ್ಲ.

@bcinemasReviews

Be the first to comment

Leave a Reply

Your email address will not be published. Required fields are marked *

Translate »
error: Content is protected !!