ಇತ್ತೀಚೆಗೆ ಚಿತ್ರರಂಗದಲ್ಲಿ ಕೇಳಬರುತ್ತಿರುವ ವಿಷಯ ಅಂದ್ರೆ 50 ಪರ್ಸೆಂಟ್ ಮತ್ತು 100 ಪರ್ಸೆಂಟ್ ನದ್ದು. ಇದೇನಿದು ಇದು ರಾಜಕೀಯದ ವಿಷಯವಾ ಅಂತ ನಿಮಗೆ ಅನಿಸಬಹುದು. ಅವರದ್ದೇನಿದ್ದರೂ 10 ಪರ್ಸೆಂಟ್ ವಿಷ್ಯ ಬಿಡಿ. ಆದರೆ, ಇದು ಚಿತ್ರಮಂದಿರಗಳಲ್ಲಿನ ಅಟೆಂಡೆನ್ಸ್ ಬಗೆಗಿನ ವಿಷಯ.
ಹೌದು ಕರೋನಾ ವಿಷಯ ಮುಂದಿಟ್ಟುಕೊಂಡು ನಮ್ಮ ರಾಜ್ಯ ಸರ್ಕಾರ ಹಲವು ಸಾರ್ವಜನಿಕ ರಂಗಗಳ ವಿಷಯದಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಿದೆ. ಒಮ್ಮೆ ಎಲ್ಲವನ್ನೂ ಸಂಪೂರ್ಣ ಮುಚ್ಚುತ್ತೇವೆ ಅಂದ್ರೆ, ಕೆಲವೊಮ್ಮೆ ಸಂಪೂರ್ಣ ಮುಚ್ಚುತ್ತೇವೆ ಎನ್ನುತ್ತದೆ, ಇನ್ನೊಮ್ಮೆ ಫಿಫ್ಟಿ ಫಿಫ್ಟಿ ಎನ್ನುತ್ತದೆ ನಮ್ಮ ಸರ್ಕಾರ. ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಇದ್ಯಾವುದಕ್ಕೂ ನಮ್ಮ ಸರ್ಕಾರ ಮುನ್ಸೂಚನೆ ಕೊಡೋದಿಲ್ಲ. ಎಲ್ಲವೂ ನಾಳೆಯಿಂದಲೇ ಅಮೋಘ ಪ್ರಾರಂಭ ಎನ್ನುವಂಥ ನಿಯಮಾವಳಿಗಳು.
ಈಗ ಪುನೀತ್ ಅಭಿನಯದ ಯುವರತ್ನ ಚಿತ್ರದ ವಿಷಯದಲ್ಲಿ ಆಗಿರೋದು ಕೂಡ ಅದೇ. ಈ ಮೊದಲು ಚಿತ್ರರಂಗದ ಮಂದಿ ಮುಖ್ಯಮಂತ್ರಿಗಳ ಬಳಿ ಹೋಗಿ ಮಾತನಾಡಿದಾಗ ಅವರಿಗೆ 100 ಪರ್ಸೆಂಟ್ ಹಾಜರಾತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಇದರಿಂದ ಚಿತ್ರರಂಗ ಕೊಂಚ ನಿರಾಳವಾಗಿತ್ತು. ಪೊಗರು ಮತ್ತು ರಾಬರ್ಟ್ ಚಿತ್ರಗಳ ಇದರ ಸದುಪಯೋಗ ಪಡೆದುಕೊಂಡಿದ್ದವು. ಆದರೆ ಈಗ ಪುನೀತ್ ಅಭಿನಯದ ಯುವರತ್ನ ಚಿತ್ರ ಬಿಡುಗಡೆಯಾದ ಮರುದಿನವೇ ಸರ್ಕಾರ ಮತ್ತೆ ತನ್ನ ಹಳೆಯ 50 ಪರ್ಸೆಂಟ್ ರಾಗ ಹಾಡಿತ್ತು. ಇದರಿಂದ ಯುವರತ್ನ ಚಿತ್ರತಂಡ ಶಾಕ್ ಆಗಿತ್ತು. ಸ್ವತಃ ಪುನೀತ್ ಕೂಡಾ ಹೀಗೆ ಇದ್ದಕ್ಕಿದ್ದಂತೆ ನಿಯಮ ಬದಲಾಯಿಸಿದರೆ ಹೇಗೆ? ನಮ್ಮ ಚಿತ್ರಕ್ಕೆ ಅಡ್ವಾನ್ಸ್ ಬುಕ್ಕಿಂಗ್ ಆಗಿದೆ ಎಂದು ಹೇಳಿ ಮತ್ತೆ ಯಡಿಯೂರಪ್ಪ ಅವರ ಜೊತೆ ಮಾತನಾಡಿ ಕನಿಷ್ಠ ಪಕ್ಷ ನಾಲ್ಕು ದಿನಗಳವರೆಗಾದರೂ 100 ಪರ್ಸೆಂಟ್ ಹಾಜರಾತಿ ಕೊಡುವಂತೆ ಮಾಡಿದ್ದರು. ಆದರೆ ಈಗ ಕೆಲವರು ಅದರ ಬಗ್ಗೆ ಅಸಮಾಧಾನದ ರಾಗ ಹಾಡುತ್ತಿದ್ದಾರೆ.
ಇಂದಿನ ಅನೇಕ ದೈನಂದಿನ ಚಟುವಟಿಕೆಗಳಲ್ಲಿ ಅನೇಕ ಜನ ಗುಂಪುಗುಂಪಾಗಿ ಸೇರುತ್ತಿದ್ದಾರೆ. ಅದು ಜಾತ್ರೆ ಇರಲಿ, ಅರ್ಧಂಬರ್ಧ ನಿಯಮಗಳನ್ನು ಪಾಲಿಸುತ್ತಿರುವ ಶಾಲಾ ಕಾಲೇಜುಗಳಾಗಲೀ, ಅಲ್ಲಿ ಕರೋನಾ ಭಯ ಇದ್ದೇ ಇದೆ. ಆದರೆ ಅಲ್ಲಿ ಕರೋನಾ ನಿಯಮಗಳನ್ನು ಪಾಲಿಸಲಾಗುತ್ತಿದೆ ಎಂಬ ನಂಬಿಕೆಯ ಮೇಲೆ ಇವುಗಳ ಮೇಲೆ ಹೆಚ್ಚಿನ ನಿಯಂತ್ರಣ ಇಲ್ಲ. ಆದರೆ ಏಕಾಏಕಿ ಪುನೀತ್ ಮುಖ್ಯಮಂತ್ರಿಗಳ ಬಳಿ ಹೋಗಿ ನಿಯಮ ಬದಲಾಯಿಸೊಂಡಿದ್ದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ. ಇಷ್ಟು ದಿನ ನಾವು ಚಿತ್ರರಂಗದ ಪರ ಎಂದು ಮಾತನಾಡುತ್ತಿದ್ದ ಕೆಲವರು ಈಗ ಇದು ಪುನೀತ್ ಆಗಿದ್ದಕ್ಕೆ ಮಾತ್ರ ಸಾಧ್ಯ ಆಗಿದೆ. ಬಲಾಢ್ಯರು ದಂಗೆ ಎದ್ದರೆ ನಮ್ಮ ಸರ್ಕಾರ ಬಗ್ಗುತ್ತೆ , ಅಸಹಾಯಕರು ಮನವಿ ಮಾಡಿದರೆ ಒದ್ದು ಕಳುಹಿಸುತ್ತೆ..ಯಾರದೋ ಹೊಸಬರ ಸಿನಿಮಾ ಆಗಿದ್ರೆ,
ಸರ್ಕಾರದ ನಿರ್ಧಾರ ಹೀಗೆಲ್ಲ ಆಗ್ತಿತ್ತಾ? ಹೊಸಬರ ಒತ್ತಡ ಅಥವಾ ಮನವಿಗೆ ಸರ್ಕಾರ ಮಣಿಯುತ್ತಿತ್ತಾ? ಎಂದೆಲ್ಲಾ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಪುನೀತ್ ಅವರಿಗೆ ಈ ನಿಮಯದ ವಿರುದ್ಧ ಮಾತನಾಡಲು ಎಲ್ಲಾ ಹಕ್ಕೂ ಇತ್ತು. ಯಾಕೆಂದರೆ ಸರ್ಕಾರ 100 ಪರ್ಸೆಂಟ್ ಹಾಜರಾತಿಗೆ ಅನುಮತಿ ಕೊಟ್ಟ ಮೇಲೆಯೇ ಅವರು ಯುವರತ್ನ ಚಿತ್ರವನ್ನು ಬಿಡುಗಡೆ ಮಾಡಲು ತಯಾರಾಗಿದ್ದು. ಇಲ್ಲದಿದ್ದರೆ ನಾವು ಚಿತ್ರವನ್ನು ಮುಂದೂಡುತ್ತಿದೆವು ಎಂದು ಪುನೀತ್ ಅವರೇ ಹೇಳಿದ್ದಾರೆ. ಅವರ ವಾದ ಸರಿ ಕೂಡ. ಹಾಗಾಗಿ ಅವರು ತಮ್ಮ ಚಿತ್ರಕ್ಕಾದ ಅನ್ಯಾಯದ ಬಗ್ಗೆ ಮಾತನಾಡಿದ್ದರಲ್ಲಿ ತಪ್ಪೇನಿಲ್ಲ.
ಸರ್ಕಾರ ಏನಿದ್ದರೂ ಕರೋನಾ ತಡೆಗಟ್ಟುವ ಬಗೆಗಿನ ಕಟ್ಟುಪಾಡುಗಳನ್ನು ಬಿಗಿಗೊಳಿಸಬೇಕಿತ್ತೇ ಹೊರತು, ಒಂದು ಚಿತ್ರವನ್ನೇ ಹಾಳು ಮಾಡುವ ಪ್ರಯತ್ನ ಮಾಡಬಾರದಿತ್ತು. ಅಲ್ಲದೆ, ಈ ಅನುಕೂಲ ಯುವರತ್ನನ ಚಿತ್ರಕ್ಕೆ ಸಿಕ್ಕಿರೋದು ಕೇವಲ 4 ದಿನಗಳವರೆಗೆ ಮಾತ್ರ. ಅದಕ್ಕೂ ಕೊಂಕು ಮಾತನಾಡುತ್ತಾರೆ ಅಂದ್ರೆ ಇದು ಪುನೀತ್ ಗೆ ಆಗದವರು ಆಡುತ್ತಿರೋ ಮಾತು ಎಂಬುದು ಸ್ಪಷ್ಟವಾಗುತ್ತದೆ. ಅಲ್ಲದೆ ಈ ಬಗ್ಗೆ ಮಾತನಾಡಿರುವ ನಟ ಮುಖ್ಯಮಂತ್ರಿ ಚಂದ್ರು ಪುನೀತ್ ಈ ರೀತಿಯ ಬೇಡಿಕೆ ಇಡಬಾರದಿತ್ತು ಎಂದು ಬಡಬಡಿಸಿದ್ದಾರೆ. ಆದರೆ, ಅಪ್ಪಿ ತಪ್ಪಿಯೂ ಅವರು ತಮ್ಮ ಬಾಯಿಯಲ್ಲಿ ಚುನಾವಣಾ ಪ್ರಚಾರಕ್ಕೆಂದು ಅವರ ರಾಜಕೀಯ ಪಕ್ಷವೂ ಸೇರಿದಂತೆ ಹಲವು ಪಕ್ಷಗಳು ಲಕ್ಷಾಂತರ ಜನಗಳನ್ನು ಸೇರಿಸುತ್ತಿರುವ ಬಗ್ಗೆ ತುಟಿಕ್ ಪಿಟಿಕ್ ಎನ್ನುವುದಿಲ್ಲ. ಹಾಗಾಗಿ ಇಲ್ಲಿ ಎಲ್ಲರೂ ತಮ್ಮ ತಮ್ಮ ಹುಳುಕುಗಳನ್ನು ಮುಚ್ಚಿಟ್ಟುಕೊಂಡು ಇನ್ನೊಬ್ಬರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಅಂತ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
ಕೊರೋನಾದ ಅಪಾಯ ಎಲ್ಲರಿಗೂ ಗೊತ್ತು. ಆದರೆ ಅದಕ್ಕಾಗಿ ಕಳೆದ ವರ್ಷ ಲಾಕ್ ಡೌನ್ ಮಾಡಿ ಸಾಮಾನ್ಯರ ಜೀವನ ಎಷ್ಟು ಹದಗೆಟ್ಟಿದೆ ಎಂಬುದು ಎಲ್ಲರಿಗೂ ಗೊತ್ತು. ಈಗ ನಮಗೆ ಉಳಿದಿರುವ ದಾರಿ ಅಂದ್ರೆ ಎಚ್ಚರವಾಗಿದ್ದುಕೊಂಡು ನಮ್ಮ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುವುದೇ ವಿನಃ, ಎಲ್ಲವನ್ನೂ ಮುಚ್ಚಿ ಮನೆಯಲ್ಲಿ ಬಾಗಿಲು ಹಾಕ್ಕೊಂಡು ಮಲಗುವುದಲ್ಲ. ಅದರಿಂದ ಯಾವ ಲಾಭವೂ ಇಲ್ಲ ಎಂಬುದನ್ನ ನಾವು ಕಳೆದ ವರ್ಷದ ಅನುಭವದಿಂದ ಅರಿತುಕೊಳ್ಳಬೇಕಾಗಿದೆ.
Be the first to comment