ಅಂಡರ್ ವಲ್ಡ್೯ ಕಥೆ ಹೇಳುವ “ಯಾರ್ ಮಗ” ಟೀಸರ್

ಭೂಗತಲೋಕದ ಜೊತೆಗೆ ತಾಯಿ ಸೆಂಟಿಮೆಂಟ್ ಕಥಾನಕ ಹೊಂದಿರುವ ಚಿತ್ರ ಯಾರಮಗ. ಈ ಚಿತ್ರದಲ್ಲಿ ಯುವನಟ ರಘು ಪಡುಕೋಟೆ ನಾಯಕನಾಗಿ ನಟಿಸಿದ್ದು ಅವರೇ ಚಿತ್ರಕ್ಕೆ ಆಕ್ಷನ್ ಕಟ್ ಕೂಡ ಹೇಳಿದ್ದಾರೆ, ಭೂಗತಲೋಕದಲ್ಲಿ ಒಬ್ಬ ತಾಯಿ ಮಗನನ್ನು ಇಟ್ಟುಕೊಂಡು ಕಥೆ ಹೆಣೆಯಲಾಗಿರುವ ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಇತ್ತೀಚೆಗೆ ರೇಣುಕಾಂಬ ಥಿಯೇಟರಿನಲ್ಲಿ ನೆರವೇರಿತು.

ಈ ಕೋಟೆಗೂ ರಾಜನೂ ನಾನೇ, ಕಾವಲುಗಾರನೂ ನಾನೇ ಎನ್ನುವ ಖಡಕ್ ಡೈಲಾಗ್ ಇರುವ ಈ ಟೀಸರ್ ನೋಡುಗರ ಗಮನ ಸೆಳೆಯುವಂತಿದೆ. ಕನ್ನಡಪರ ಹೋರಾಟಗಾರ ಬಸವರಾಜ ಪಡುಕೋಟೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಇವರ ಪುತ್ರ ರಘು ಪಡುಕೋಟೆ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೆ ಈ ಚಿತ್ರದ ಕಥೆ ಬರೆದು ನಿರ್ದೇಶನ ಕೂಡ ಇವರೇ ಮಾಡಿದ್ದಾರೆ.

ಟೀಸರ್ ಅನಾವರಣ ಸಮಾರಂಭದಲ್ಲಿ ಕರವೇ ಯುವಘಟಕದ ರಾಜ್ಯಾಧ್ಯಕ್ಷ ಧರ್ಮರಾಜ್, ಡಿ.ಎಸ್. ಮ್ಯಾಕ್ಸ್ನ ದಯಾನಂದ್, ಮಾರುತಿರಾವ್ ಮೋರೆ, ವೀರಶೈವ ಯುವ ವೇದಿಕೆಯ ಪ್ರಶಾಂತ್, ಕೆ.ಜಿ.ಹನುಮಂತಯ್ಯ ಹಾಗೂ ಚಿತ್ರತಂಡದವರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಬಸವರಾಜ ಪಡುಕೋಟೆ ನಾನು ಮೊದಲಿನಿಂದಲೂ ಕನ್ನಡಪರ‌ ಹೋರಾಟಗಳನ್ನು ಮಾಡಿಕೊಂಡು ಬಂದವನು.

ಅಲ್ಲದೆ ಡಾ.ರಾಜ್‌ಕುಮಾರ್ ಅವರ ಅಪ್ಪಟ ಅಬಿಮಾನಿ, ಸಿನಿಮಾ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದೆ, ಈಗ ನನ್ನ ಮಗನಿಗಿರುವ ಸಿನಿಮಾ ಆಸಕ್ತಿ ಕಂಡು ಈಚಿತ್ರ ನಿರ್ಮಾಣ ಮಾಡಿದ್ದೇನೆ. ಈಗಾಗಲೇ ಸುರಪುರ ತಾಲ್ಲೂಕಿನ ಪಡುಕೋಟೆ, ಬೆಂಗಳೂರಿನ ಶಿವಾಜಿನಗರ, ವೈಟ್‌ಫೀಲ್ಡ್ ಸುತ್ತಮುತ್ತ ಶೇ.60ರಷ್ಟು ಚಿತ್ರೀಕರಣ ಮುಗಿದಿದೆ.

ಚಿತ್ರದಲ್ಲಿ ಸಾಕಷ್ಟು ಹೊಸಬರಿಗೆ ಅವಕಾಶ ಕೊಟ್ಟಿದ್ದೇವೆ. ಪ್ಲಾನ್ ಪ್ರಕಾರ ಆದರೆ ಇದೇ ಜೂನ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂದು ಹೇಳಿದರು. ನಂತರ ದಯಾನಂದ್ ಮಾತನಾಡಿ ಅಭಿನಯ ಒಂದು ಕಲೆ, ಅದು ಎಲ್ಲರಿಗೂ ಬರಲ್ಲ, ಈ ಹುಡುಗನಿಗೆ ಹುಟ್ಟಿನಿಂದಲೇ ಅದು ಒಲಿದಿದೆ, ಈತ ಮುಂದೆ ಒಳ್ಳೇ ಹೆಸರು ಮಾಡುವ ಎಲ್ಲಾ ಲಕ್ಷಣಗಳು ಈ ಚಿತ್ರದಲ್ಲಿದೆ ಎಂದರು.

ಚಿತ್ರದ ನಾಯಕ ಹಾಗೂ ನಿರ್ದೇಶಕ ರಘು ಪಡುಕೋಟೆ ಮಾತನಾಡಿ ಈಗಿನ ಕಾಲದ ಹುಡುಗರು ಹೇಗೆಲ್ಲಾ ಹಾಳಾಗ್ತಿದಾರೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ, ತಾಯಿ ಸೆಂಟಿಮೆಂಟ್, ಲವ್, ಡ್ರಗ್ ಮಾಫಿಯಾ ಕೂಡ ಚಿತ್ರದಲ್ಲಿದೆ. ಒಬ್ಬ ಮಗನಾದವನು ತನ್ನ ತಾಯಿಯನ್ನು ಎಷ್ಟು ಕಾಳಜಿಯಿಂದ ನೋಡಿಕೊಳ್ಳಬಹುದು ಅಂತ ನನ್ನ ಪಾತ್ರದ ಮೂಲಕ ನಿರೂಪಿಸಲಾಗುತ್ತಿದೆ.

ತಾಯಿ ಕೂಡ ತನ್ನ ಮಗನ ಮೇಲೆ ಎಷ್ಟು ಕಾಳಜಿ ವಹಿಸುತ್ತಾಳೆ ಎಂಬ ಕಂಟೆಂಟ್ ಚಿತ್ರದಲ್ಲಿದೆ. ಮೇಕಿಂಗ್‌ವೈಸ್ ಸಿನಿಮಾ ತುಂಬಾ ರಿಚ್‌ಆಗಿ ಮೂಡಿಬಂದಿದ್ದು, ಒಳ್ಳೇ ಮೆಸೇಜ್ ಕೂಡ ಇದೆ ಎಂದು ಹೇಳಿದರು. ನಂತರ ಚಿತ್ರದ ಸಂಗೀತ ನಿರ್ದೇಶಕ ಪ್ರವೀಣ್ ಮಾತನಾಡಿ ಚಿತ್ರದಲ್ಲಿ 4 ಹಾಡುಗಳಿವೆ. ಹೀರೋ ಇಂಟ್ರಡಕ್ಷನ್, ಡ್ಯುಯೆಟ್, ಪ್ಯಾಥೋ ಹಾಗೂ ತಾಯಿ ಸೆಂಟಿಮೆಂಟ್ ಹೀಗೆ ಎಲ್ಲಾ ರೀತಿಯ ಹಾಡುಗಳಿವೆ ಎಂದರು.

90ರ ದಶಕದಲ್ಲಿ ನಡೆಯುವ ಅಂಡರ್‌ವರ್ಲ್ಡ್ ಕಥೆ ಚಿತ್ರದಲ್ಲಿದ್ದು, ರೆಟ್ರೋ ಸ್ಟೈಲ್‌ನಲ್ಲಿ ಚಿತ್ರದ ನಿರೂಪಣೆಯಿರುತ್ತದೆ. ನಾಯಕಿಯಾಗಿ ಸುಕೃತ ಅವರು ಅಭಿನಯಿಸುತ್ತಿದ್ದು, ಕಾಕ್ರೋಚ್‌ಸುಧಿ, ಬಲ ರಾಜವಾಡಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!