‘ನಾ ನಿನ್ನ ಬಿಡಲಾರೆ’ ಅಂತ ಬರ್ತಿದ್ದಾಳೆ ‘ವಂದನ’
ಸದ್ದಿಲ್ಲದೆ ಚಿತ್ರೀಕರಣ ಮುಗಿಸಿ ತೆರೆಮೇಲೆ ಸದ್ದು ಮಾಡಲು ಬರುತ್ತಿದೆ ‘ವಂದನ’ ಸಿನಿಮಾ. ಇದು ರೊಮ್ಯಾಂಟಿಕ್ ಕಮ್ ಹಾರರ್ ಕಂಟೆಂಟ್ ಒಳಗೊಂಡಿರುವ ಚಿತ್ರವಾಗಿದ್ದು, ಹೆಣ್ಣು ಮಕ್ಕಳ ಬಗ್ಗೆ ತಾರತಮ್ಯ ಮಾಡಬಾರದು ಎಂಬ ಸಂದೇಶವನ್ನೂ ಹೊತ್ತು ಬರಲಿದೆ. ‘ನಿಷ್ಮಾ ಕ್ರಿಯೇಷನ್ಸ್’ ಅಡಿ ನಿರ್ಮಾಣವಾಗಿರುವ ಈ ಸಿನಿಮಾವನ್ನು ಮೊದಲ ಬಾರಿಗೆ ವಿಜೇತ್ ನಿರ್ದೇಶಿಸಿದ್ದು, ನಾಯಕ, ನಾಯಕಿಯಾಗಿ ಅರುಣ್ ಕುಮಾರ್ ಮತ್ತು ಶೋಭಿತಾ ಅಭಿನಯಿಸಿದ್ದಾರೆ. ಇತ್ತೀಚೆಗಷ್ಟೇ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್‍ಕುಮಾರ್ ಅವರು ಈ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿ ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಸದ್ಯ ಸೆನ್ಸಾರ್ ಸರ್ಟಿಫಿಕೇಟ್ ತೆಗೆದುಕೊಂಡು ಬಿಡುಗಡೆಗೆ ಸಿದ್ಧವಾಗಿರುವ ವಂದನ ಚಿತ್ರದ ಬಗ್ಗೆ ಇಡೀ ಚಿತ್ರತಂಡ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದೆ.
ಒಂದು ಸಿಂಪಲ್ ಸ್ಟೋರಿ ಪ್ರೇಕ್ಷಕನ ಮನ ಮುಟ್ಟುವಂತಿದೆ
– ವಿಜೇತ್, ನಿರ್ದೇಶಕ
‘ವಂದನ ಚಿತ್ರದ ಟೈಟಲ್ ಕೇಳಿದ ತಕ್ಷಣ ಎಲ್ಲರೂ ಇದೊಂದು ಮಹಿಳಾ ಪ್ರಧಾನ ಚಿತ್ರ ಅಂತ ಬ್ರಾಂಡ್ ಮಾಡುತ್ತಿದ್ದಾರೆ. ಇದರಿಂದ ಸಂತೋಷ ಮತ್ತು ಸ್ವಲ್ಪ ಆತಂಕವೂ ಆಗುತ್ತಿದೆ. ಇಲ್ಲ.. ಇಲ್ಲ.. ಇದು ಸಸ್ಪೆನ್ಸ್ ಥ್ರಿಲ್ಲರ್ ಹಾರರ್ ಮೂವೀ ಅಂತ ಹೇಳಿದ್ರೆ, ಎಲ್ಲಿ ಈಗ ಬರುತ್ತಿರುವ ನೂರಾರು ಹಾರರ್ ಸಿನಿಮಾಗಳಲ್ಲಿ ನಮ್ಮದೂ ಒಂದಾಗಿ ಹಾರ್ಕೊಂಡು ಹೋಗುತ್ತೋ ಅನ್ನೋ ಭಯವು ಇದೆ’ ಅಂತ ತಮಾಷೆಗೆ ಮಾತು ಆರಂಭಿಸುವ ನಿರ್ದೇಶಕ ವಿಜೇತ್, ತಮ್ಮ ಮೊದಲ ಕನಸಿನ ಚಿತ್ರದ ಬಗ್ಗೆ ಹೇಳುವುದು ಹೀಗೆ.. “ಒಂದು ಸಿಂಪಲ್ ಕಥೆಯನ್ನ, ಲಿಮಿಟೆಡ್ ಪಾತ್ರಗಳನ್ನ ಇಟ್ಟುಕೊಂಡು, ಓವರ್ ಬಿಲ್ಡಪ್‍ಗಳಿಲ್ಲದೆ ಜನರ ಮನಮುಟ್ಟುವಂತೆ ಹೇಳುವ ಪ್ರಯತ್ನ ಮಾಡಿದ್ದೇನೆ. ಫ್ಯಾಮಿಲಿ ಆಡಿಯನ್ಸ್‍ಗೆ ಇಷ್ಟ ಆಗುವ ಎಲ್ಲಾ ಎಲಿಮೆಂಟ್‍ಗಳು ಕೂಡ ಈ ಚಿತ್ರದಲ್ಲಿದ್ದು, ಇಡೀ ಕುಟುಂಬ ಯಾವುದೇ ಮುಜುಗರವಿಲ್ಲದೆ ನೋಡಬಹುದು. ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿರುವ ಅರುಣ್ ಕುಮಾರ್ ಮತ್ತು ಶೋಭಿತಾ ಜೋಡಿ ಚಿತ್ರದ ಕಥೆಗೆ ಹೇಳಿ ಮಾಡಿಸಿದಂತಿದೆ. ಶಿವನಸಮುದ್ರದ ಬಳಿಯ ಸುಂದರತಾಣಗಳಲ್ಲಿ ಚಿತ್ರೀಕರಣ ಮಾಡಿದ್ದೇವೆ. ಅದರಲ್ಲೂ ಗಗನಚುಕ್ಕಿ ಫಾಲ್ಸ್ ಬಳಿ ಒಂದು ಕ್ವಾಟ್ರಸ್ ಇದೆ. ಅಲ್ಲಿ ಇದೂವರೆಗೂ ಯಾರು ಶೂಟಿಂಗ್ ಮಾಡಿಲ್ಲ. ಸೋ, ನಾವು ಶಕ್ತಿ ಭವನದಿಂದ ಅನುಮತಿ ಪಡೆದುಕೊಂಡು ಹದಿನೈದು ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ಕ್ಯಾಮೆರಾಮೆನ್ ಜಿಟಿಬಿ ಗೌಡ ಕೀಲಾರ ಅವರು ಸೆರೆ ಹಿಡಿದ ದೃಶ್ಯಗಳನ್ನು ಅನುಭವಿ ಸಂಕಲನಕಾರ ಕೆಂಪರಾಜ್ ಅಷ್ಟೇ ನೀಟಾಗಿ ಜೋಡಿಸಿದ್ದಾರೆ. ಎಂ.ಎಸ್. ತ್ಯಾಗರಾಜ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಮೂರು ಹಾಡುಗಳು ಅದ್ಭುತವಾಗಿ ಮೂಡಿಬಂದಿವೆ. ಆನಂದ್ ಆಡಿಯೋ ಕಂಪನಿಯಿಂದ ಧ್ವನಿಸುರಳಿ ಬಿಡುಗಡೆಯಾಗಿದ್ದು, ಜನರು ಕೂಡ ಹಾಡುಗಳನ್ನು ಕೇಳಿ ಮೆಚ್ಚಿಕೊಂಡಿದ್ದಾರೆ. ಕೆಲವೇ ದಿನಗಳಲ್ಲಿ ವಂದನ ಚಿತ್ರ ತೆರೆ ಮೇಲೆ ಬರಲಿದ್ದು, ಕನ್ನಡ ಪ್ರೇಕ್ಷಕ ನಮ್ಮ ಸಿನಿಮಾವನ್ನು ನೋಡಿ ಗೆಲ್ಲಿಸುತ್ತಾನೆ ಎಂಬ ಕಾನ್ಫಿಡೆಂಟ್ ಇದೆ.
ಬಬ್ಲಿ, ಬಜಾರಿ ಮತ್ತು ಗೃಹಿಣಿ ಪಾತ್ರ
– ಶೋಬಿತಾ, ಹೀರೋಯಿನ್
ಎರಡೊಂದ್ಲಾ ಮೂರು, ಎಟಿಎಂ ಚಿತ್ರಗಳ ಬಳಿಕ ಶೋಬಿತಾ ಅಭಿನಯಿಸಿರುವ ಮೂರನೇ ಚಿತ್ರ ವಂದನ. ಎಟಿಎಂ ಚಿತ್ರದಲ್ಲಿ ಕ್ರೈಂ ಬೇಸ್ಡ್, ಸಸ್ಪೆನ್ಸ್ ಥ್ರಿಲ್ಲರ್ ಚಿತ್ರದಲ್ಲಿ ಅಭಿನಯಿಸಿದ್ದ ಇವರು, ಇದೀಗ ಮಹಿಳೆಯರಿಗೆ ಮೆಸೇಜ್ ಮತ್ತು ಹಾರರ್ ಕಂಟೆಂಟ್ ಇರುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಚಿತ್ರದಿಂದ ಚಿತ್ರಕ್ಕೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಶೋಭಿತಾ ವಂದನ ಚಿತ್ರದ ಅನುಭವನ್ನು ಹೇಳುವುದು ಹೀಗೆ. ‘ವಂದನದಲ್ಲಿ ನನ್ನ ಈ ಹಿಂದಿನ ಎರಡು ಚಿತ್ರಗಳಿಗಿಂತ ವಿಭಿನ್ನವಾದ ಪಾತ್ರ ಸಿಕ್ಕಿದೆ. ಡಬಲ್ ಶೇಡ್ ಇರುವ ಪಾತ್ರ. ಮೊದಲನೆಯದು ಬಬ್ಲಿ, ಬಜಾರಿ ಪಾತ್ರ. ಹೀರೋ ನನಗೆ ಪ್ರಪೋಸ್ ಮಾಡಲು ಬಂದಾಗಲೆಲ್ಲ ಅವರಿಗೆ ಬೈತಾನೇ ಇರುತ್ತೇನೆ. ಯಾವಾಗಲೂ ವಟಗುಟ್ಟುವ ಪಾತ್ರ. ಇನ್ನೊಂದು ಗೃಹಿಣಿ ಪಾತ್ರ. ಗಂಡ-ಮನೆ ಅಂತ ಟ್ರೆಡಿಷನಲ್ ಆಗಿ ಇರುವ ಕ್ಯಾರೆಕ್ಟರ್. ಈ ಸಿನಿಮಾ ಆಲ್‍ರೆಡಿ ಕಥೆ ನಡಿತಿದೆ ಅನ್ನೋ ಹಾಗೆ ಶುರುವಾಗುತ್ತೆ. ಅಲ್ಲಲ್ಲಿ ಫ್ಲಾಶ್ ಬ್ಯಾಕ್ ಸನ್ನಿವೇಶಗಳ ಜೊತೆಗೆ ಸಿನಿಮಾ ಸಾಗುತ್ತೆ. ಒಬ್ಬ ಗೃಹಿಣಿಗೆ ಇಂಥದ್ದೆ ಮಗು ಬೇಕು ಅಂತ ಒತ್ತಡ ಹೇರುವುದರಿಂದ ಆಕೆಯ ಮೇಲೆ ಯಾವ ರೀತಿಯ ದುಷ್ಪರಿಣಾಮ ಬೀರುತ್ತೆ ಅನ್ನೋದನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಶಿವನಸಮುದ್ರ, ಬರಚುಕ್ಕಿ, ಮುಂತಾದ ಕಡೆ ಚಿತ್ರೀಕರಣವಾಯಿತು. ರಾತ್ರಿ ವೇಳೆ ಜಾಸ್ತಿ ಶೂಟಿಂಗ್ ಮಾಡುತ್ತಿದ್ದರಿಂದ ನಿದ್ರೆ ಕಂಟ್ರೋಲ್ ಮಾಡ್ಕೊಂಡು ಆಕ್ಟ್ ಮಾಡಿದ್ದ ಒಳ್ಳೆ ಎಕ್ಸ್‍ಪಿರಿಯನ್ಸ್. ಶೂಟಿಂಗ್ ಎಲ್ಲಾ ಕಂಪ್ಲೀಟ್ ಆಗಿ ಎಡಿಟಿಂಗ್ ಆದಮೇಲೆ ಸಿನಿಮಾ ನೋಡಿದ್ದೇನೆ. ತುಂಬಾ ಅದ್ಭುತವಾಗಿ ಮೂಡಿ ಬಂದಿದೆ. ಒಂದು ಎಂಟರ್‍ಟೈನರ್ ಮೂವೀಗೆ ಏನೇನ್ ಬೇಕೋ ಅದೆಲ್ಲವೂ ಸಿನಿಮಾದಲ್ಲಿದೆ. ಎರಡು ಗಂಟೆ ಸಿನಿಮಾದಲ್ಲಿ ಎಲ್ಲಿಯೂ ಬೋರ್ ಎನಿಸುವುದಿಲ್ಲ. ಸೋ, ಕನ್ನಡ ಪ್ರೇಕ್ಷಕರು ಮಿಸ್ ಮಾಡದೇ ವಂದನ ಸಿನಿಮಾ ನೋಡಿ ನಮ್ಮನ್ನ ಪ್ರೋತ್ಸಾಹಿಸಿ ಅಂತ ಕೇಳಿಕೊಳ್ಳುತ್ತೇನೆ.
ಪ್ರತಿಯೊಬ್ಬ ಪ್ರೇಕ್ಷಕನ ರಿಯಲ್ ಲೈಫ್ ತೆರೆಮೇಲೆ ಕಾಣುತ್ತೆ
– ಅರುಣ್ ಕುಮಾರ್, ಹೀರೋ
ಅರುಣ್ ಕುಮಾರ್ ಮೂಲತಃ ರಂಗಭೂಮಿ ಕಲಾವಿದ. ಕಿರುತೆರೆಯಲ್ಲಿ ಹಲವಾರು ದಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು, ನಿರ್ದೇಶಕ ವಿಜೇತ್ ಕರೆದಿದ್ದ ಆಡಿಷನ್‍ನಲ್ಲಿ ಸೆಲೆಕ್ಟ್ ಆಗಿ ಮೊದಲ ಬಾರಿಗೆ ಹೀರೋ ಆಗಿ ನಟಿಸಿದ್ದಾರೆ. ಇದೇ ಖುಷಿಯಲ್ಲಿರುವ ಅರುಣ್ ವಂದನ ಚಿತ್ರದ ಬಗ್ಗೆ ಹೇಳುವುದು ಹೀಗೆ. ‘ವಂದನ ರೊಮ್ಯಾಂಟಿಕ್ ಕಮ್ ಹಾರರ್ ಮೂವೀ. ಇದರ ಜೊತೆಗೆ ಮಹಿಳೆಯರಿಗೆ ಒಂದು ಮೆಸೇಜ್ ಕೂಡ ಇದೆ. ಈ ಚಿತ್ರದಲ್ಲಿ ನನ್ನದು ಡಬಲ್ ಶೇಡ್ ಪಾತ್ರ. ಒಂದು ಮ್ಯಾರೀಡ್ ಮ್ಯಾನ್, ಇನ್ನೊಂದು ಕಾಲೇಜ್ ಲವರ್ ಬಾಯ್. ನನ್ನ ಮತ್ತು ಶೋಭಿತಾ ಅವರ ಕೆಮಿಸ್ಟ್ರಿ ವರ್ಕೌಟ್ ಆಗಿದೆ. ರಿಯಾಲಿಟಿಗೆ ಹತ್ತಿರವಾದ ಆ್ಯಕ್ಷನ್ ಸೀನ್‍ಗಳಿವೆ. ಶಿವನಸಮುದ್ರದ ಬ್ಲಫ್‍ನಲ್ಲಿ ಶೇ.90ರಷ್ಟು ಚಿತ್ರೀಕರಣವಾಯಿತು. ಇನ್ನು ಶೇ.10ರಷ್ಟು ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ಆಯಿತು. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮೈಸೂರಿನ ಜಿಆರ್‍ಎಸ್ ಪ್ಯಾಂಟಸಿ ಪಾರ್ಕ್‍ನಲ್ಲಿ ಒಂದು ಸಾಂಗ್, ರಾಮನಗರದ ಕಣ್ವ ರೆಸಾರ್ಟ್‍ನಲ್ಲಿ ಇನ್ನೊಂದು ಸಾಂಗ್ ಚಿತ್ರೀಕರಣಮಾಡಿದ್ವಿ. ಮೂರನೇಯದ್ದು ಪಡ್ಡೆ ಹುಡುಗರಿಗೆ ಇಷ್ಟ ಆಗುವ ಹೀರೋಯಿನ್ ಪ್ರಪೋಸಲ್ ಸಾಂಗ್ ಕೂಡ ಇದೆ. ಎಲ್ಲಾ ಸಾಂಗ್‍ಗಳು ಅದ್ಭುತವಾಗಿ ಮೂಡಿಬಂದಿವೆ. ಶೂಟಿಂಗ್ ಸ್ಪಾಟ್‍ನಲ್ಲಿ ಇಡೀ ಚಿತ್ರತಂಡ ತುಂಬಾ ಫ್ಲೆಕ್ಸಿಬಲ್ ಆಗಿತ್ತು. ಒಂದು ಫ್ಯಾಮಿಲಿ ಜೊತೆ ಕೆಲಸ ಮಾಡಿದ ಅನುಭವವಾಯಿತು. ನಿರ್ದೇಶಕ ವಿಜೇತ್ ಕೂಡ ಅಷ್ಟೇ ಚೆನ್ನಾಗಿ ನಮ್ಮಿಂದ ಕೆಲಸ ತೆಗೆಸಿಕೊಂಡಿದ್ದಾರೆ. ಥಿಯೇಟರ್‍ಗೆ ಬರುವ ಆಡಿಯನ್ಸ್‍ಗೆ ಎರಡು ಗಂಟೆ ಕಂಪ್ಲೀಟ್ ಎಂಟರ್‍ಟೈನ್ಮೆಂಟ್ ಸಿಗುತ್ತೆ. ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಮೂಲಕ ಕ್ಯೂರಿಯಾಸಿಟಿ ಹುಟ್ಟಿಸುತ್ತೆ. ಜೊತೆಗೆ ಚಿತ್ರದಲ್ಲಿನ ಹಲವು ಇನ್ಸಿಡೆಂಟ್‍ಗಳು ಸಿನಿಮಾ ನೋಡುವವನ ಜೀವನಕ್ಕೆ ಹತ್ತಿರವಾಗಿರವಾಗಿವೆ. ಸೋ, ಯಾವ ಹಂತದಲ್ಲೂ ವಂದನ ಸಿನಿಮಾ ಪ್ರೇಕ್ಷಕನಿಗೆ ನಿರಾಸೆ ಉಂಟುಮಾಡುವುದಿಲ್ಲ.
– ಕೆಂಪರಾಜು, ಹಿರಿಯ ಸಂಕಲನಕಾರ
ಹೆಣ್ಣನ್ನು ಅವಹೇಳನ ಮಾಡಬಾರದು ಎಂಬ ವಿಚಾರ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ. ಒಂದು ಹೊಸ ಟೀಮ್ ಆದರು ಕೂಡ ಟೆಕ್ನಿಕಲ್ ವೈಸ್ ಸಿನಿಮಾ ತುಂಬಾ ಅದ್ಭುತವಾಗಿ ಮೂಡಿಬಂದಿದೆ. ಜಿಟಿಬಿ ಗೌಡ ಕೀಲಾರ ಅವರ ಫೊಟೋಗ್ರಫಿ, ಮದನ್ ಹರಿಣಿ ಅವರ ಕೊರಿಯೋಗ್ರಫಿ, ಎಂ.ಎಸ್. ತ್ಯಾಗರಾಜ್ ಮ್ಯೂಸಿಕ್ ಎಲ್ಲವೂ ಚೆನ್ನಾಗಿದೆ. ಚಿತ್ರದಲ್ಲಿ ಸಸ್ಪೆನ್ಸ್ ಇರುವುದರಿಂದ ಎಲ್ಲೂ ಸ್ಟೇ ಆಗಲ್ಲ. ಲ್ಯಾಗ್ ಅನಿಸುವುದಿಲ್ಲ. ಕಂಟಿನಿಯಸ್ ಆಗಿ ಒಂದು ಫ್ಲೋ ಇರುವುದರಿಂದ ಸಿನಿಮಾ ನೋಡಿಸಿಕೊಂಡು ಹೋಗುತ್ತೆ.
– ಜಿಟಿಬಿ ಗೌಡ ಕೀಲಾರ, ಸಿನಿಮಾಟೋಗ್ರಫಿ
ವಂದನ ಹೊಸ ರೀತಿಯ ಕಥೆ. ಟೆಕ್ನಿಕಲಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಿರ್ಮಾಪಕರು ಒಳ್ಳೆ ಕ್ಯಾಮೆರಾ, ಲೈಟಿಂಗ್ ಎಲ್ಲಾ ಒದಗಿಸಿಕೊಟ್ಟಿದ್ದರು. ದೊಡ್ಡ-ದೊಡ್ಡ ಕ್ಯಾಮೆರಾಮನ್‍ಗಳ ಜೊತೆ ಅಸಿಸ್ಟಂಟ್ ಆಗಿ ವರ್ಕ್ ಮಾಡಿದ್ದೆ. ಆ ಅನುಭವಗಳನ್ನು ನಿರ್ದೇಶಕ ವಿಜೇತ್ ಜೊತೆ ಚರ್ಚೆ ಮಾಡಿ ಒಂದಷ್ಟು ಕ್ರಿಯೆಟಿವ್ ಆಗಿ ವರ್ಕ್ ಮಾಡಿದ್ದೇನೆ. ಆರ್ಟಿಸ್ಟ್‍ಗಳು ಕೂಡ ನಮ್ಮ ಸಣ್ಣ-ಸಣ್ಣ ಸಲಹೆಗಳನ್ನು ಸ್ವೀಕರಿಸಿ ನಟಿಸಿದ್ದಾರೆ. ಓವರ್ ಆಲ್ ಸಿನಿಮಾ ತುಂಬಾ ನ್ಯಾಚುರಲ್ ಆಗಿ ಮೂಡಿಬಂದಿದೆ.
….
Be the first to comment