ಯೂಟ್ಯೂಬ್ ವಿಮರ್ಶಕರ ಮೇಲೆ ಆದಿತ್ಯ ಗರಂ: ಫಿಲ್ಮ್ ಚೇಂಬರ್ನಲ್ಲಿ ದೂರು, ಕಾನೂನು ಹೋರಾಟಕ್ಕೆ ತಯಾರಿ!
ಮುಂದುವರೆದ ಅಧ್ಯಾಯ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್ಗಳ ಮೇಲೆ ದೂರು ಸಲ್ಲಿಸಿದರು.
ಸ್ಯಾಂಡಲ್ವುಡ್ ನಟ ಡೆಡ್ಲಿ ಸರಣಿ ಖ್ಯಾತಿಯ ಆದಿತ್ಯ ಯೂಟ್ಯೂಬ್ ವಿಮರ್ಶಕರ ಮೇಲೆ ಗರಂ ಆಗಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ದೂರು ನೀಡಿರುವ ಅವರು, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದ್ದಾರೆ. ಹೌದು, ಇತ್ತೀಚೆಗಷ್ಟೆ ಯೂಟ್ಯೂಬ್ ಸಿನಿಮಾ ವಿಮರ್ಶಕರ ವಿರುದ್ಧ ನಟ ಆದಿತ್ಯ ಹರಿಹಾಯ್ದಿದ್ದರು. ವಿಡಿಯೋ ಮೂಲಕ ಯೂಟ್ಯೂಬ್ ವಿಮರ್ಶಕರ ಮೇಲೆ ಚಾಟಿ ಬೀಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿರುವ ಅವರು, ಫಿಲ್ಮ್ ಚೇಂಬರ್ನಲ್ಲಿ ಯೂಟ್ಯೂಬರ್ಗಳ ವಿರುದ್ಧ ದೂರು ಸಲ್ಲಿಸಿದ್ದಾರೆ. ಮುಂದುವರೆದ ಅಧ್ಯಾಯ ಸಿನಿಮಾ ಬಗ್ಗೆ ಅವಹೇಳನಕಾರಿಯಾಗಿ ರಿವ್ಯೂ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ಮುಂದುವರೆದ ಅಧ್ಯಾಯ ಸಿನಿಮಾ ನಿರ್ದೇಶಕ ಬಾಲು ಚಂದ್ರಶೇಖರ್, ನಿರ್ಮಾಪಕರು ಹಾಗೂ ಚಿತ್ರತಂಡದ ಜತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ನಾಯಕ ಆದಿತ್ಯ, ಆರು ಮಂದಿ ಯೂಟ್ಯೂಬರ್ಗಳ ಮೇಲೆ ದೂರು ಸಲ್ಲಿಸಿದರು.
ದೂರು ಸ್ವೀಕರಿಸಿ ಮಾತನಾಡಿದ ಫಿಲ್ಮ್ ಚೇಂಬರ್ ಕಾರ್ಯದರ್ಶಿ ಎನ್ಎಮ್ ಸುರೇಶ್, ಕನ್ನಡ ಚಿತ್ರಗಳಿಗೆ, ಕನ್ನಡ ಚಿತ್ರರಂಗಕ್ಕೆ ಇವರೇ ಮಾರಕವಾಗುತ್ತಿದ್ದಾರೆ. ಹೀಗಾಗಿ ಸಿನಿಮಾಗಳನ್ನು ವಿಮರ್ಶೆ ಮಾಡದಂತೆ ಬ್ಯಾನ್ ಮಾಡುವ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಮುಂದುವರೆದ ಅಧ್ಯಾಯ ಚಿತ್ರದ ನಾಯಕ ನಟ ಆದಿತ್ಯ, ಸಿನಿಮಾ ನೋಡಿದ ಹಿರಿಯ ಪತ್ರಕರ್ತರು, ಟಿವಿ ಹಾಗೂ ದಿನಪತ್ರಿಕೆಯ ಪರ್ತಕರ್ತರು ಮಾತ್ರವಲ್ಲ ಪ್ರೇಕ್ಷಕರೂ ಸಹ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ ಹಣದಾಸೆಗೆ ಕೆಲ ಯೂಟ್ಯೂಬರ್ಗಳು ಹೀಗೆ ನೆಗಟಿವ್ ರಿವ್ಯೂ ಮಾಡುತ್ತಿದ್ದಾರೆ. ಸಿನಿಮಾ ರಿಲೀಸ್ ಪ್ರಕಟಿಸಿದ ಸಂದರ್ಭದಲ್ಲಿ ಒಳ್ಳೆಯ ವಿಮರ್ಶೆ ನೀಡಲು ಹಣ ಕೇಳಿದ್ದರು. ಆದರೆ ನಮ್ಮ ಚಿತ್ರತಂಡದವರು ಅವರಿಗೆ ಸ್ಪಂದಿಸಿರಲಿಲ್ಲ, ಹೀಗಾಗಿಯೇ ಈ ರೀತಿ ನೆಗಟಿವ್ ರಿವ್ಯೂ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಶುಕ್ರವಾರ ಮಾರ್ನಿಂಗ್ ಶೋ ಸಿನಿಮಾ ಮಧ್ಯಾಹ್ನ 12.45 – 1ಕ್ಕೆ ಮುಗಿದಿತ್ತು, ಆದರೆ 1.30ರ ವೇಳೆಗಾಗಲೇ ಯೂಟ್ಯೂಬ್ನಲ್ಲಿ ರಿವ್ಯೂ ಶೇರ್ ಮಾಡಿಬಿಟ್ಟಿದ್ದರು. ಇಂತಹ ವಿರುದ್ಧ ಈಗಾಗಲೇ ಚಿತ್ರರಂಗದ ಹಲವರ ಜೊತೆ ಮಾತನಾಡಿದ್ದೇನೆ. ಹಲವಾರು ಮಂದಿ ನನಗೆ ಬೆಂಬಲ ಸೂಚಿಸಿದ್ದಾರೆ. ನಾನು ಈ ಹೋರಾಟದ ಮುಖವಷ್ಟೇ ಆದರೆ ನನ್ನ ಹಿಂದೆ ತುಂಬಾ ಜನ ಇದ್ದಾರೆ. ಮುಂದಿನ ದಿನಗಳಲ್ಲಿ ಯೂಟ್ಯೂಬರ್ಗಳು ಇದೇ ರೀತಿ ಕನ್ನಡ ಚಿತ್ರಗಳನ್ನು ಟಾರ್ಗೆಟ್ ಮಾಡಿದರೆ, ಎಲ್ಲರೂ ಮುಂದೆ ಬರಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು
Be the first to comment