ಉದಯ ಟಿವಿಯಲ್ಲಿ ಒಂದೇ ದಿನ 2 ಹೊಸ ಧಾರಾವಾಹಿಗಳು

ಕಳೆದ ಎರಡೂವರೆ ದಶಕಗಳಿಂದ ಕನ್ನಡ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ʻಉದಯ ಟಿವಿʼ, ವೈವಿಧ್ಯಮಯ ಧಾರಾವಾಹಿಗಳ ಮೂಲಕ ವೀಕ್ಷಕ ಹೃದಯಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ. ಈ ಗುಚ್ಛಕ್ಕೆ ಎರಡು ಹೊಸ ಧಾರಾವಾಹಿಗಳು ಸೇರ್ಪಡೆಯಾಗುತ್ತಿವೆ. ಮಾರ್ಚ್ 15 ರಿಂದ ಸಂಜೆ 6:30 ಕ್ಕೆ ಹಾಸ್ಯಮಯ ಸಸ್ಪೆನ್ಸ್ ಕಥೆ ʻಗೌರಿಪುರದ ಗಯ್ಯಾಳಿಗಳುʼ ಹಾಗೂ ಸಂಜೆ 7:30ಕ್ಕೆ ಮಂಜುನಾಥಸ್ವಾಮಿಯ ಭಕ್ತೆಯೂ ಆಗಿರುವ ಆಶಾಕಾರ್ಯಕರ್ತೆಯೊಬ್ಬಳ ಜೀವನ ಪಯಣ ʻನೇತ್ರಾವತಿʼ.

# “ಗೌರಿಪುರದ ಗಯ್ಯಾಳಿಗಳು”
ಗೌರಿಪುರ ಎಂಬ ಮಧ್ಯಮ ವರ್ಗದವರ ಕಾಲನಿಯಲ್ಲಿ ಇರುವ ನಾಲ್ವರು ಮಧ್ಯಮವರ್ಗದ ಗಯ್ಯಾಳಿಗಳು ಸ್ತ್ರೀ ಸಂಘ ಸ್ಥಾಪಿಸಿಕೊಂಡು ಹಪ್ಪಳ ಸಂಡಿಗೆ ತಯಾರು ಮಾಡುವಂಥವರು. ಇವರ ಬಾಯಿಗೆ ಕಾಲೊನಿಯೇ ಹೆದರುತ್ತದೆ. ಇವರ ನಡುವೆ ಸಮಸ್ಯೆಗಳಿವೆ. ಆದರೆ ಹೊರಗಿನವರು ಬಂದರೆ ಒಗ್ಗಟ್ಟಾಗುತ್ತಾರೆ.

ಇಂಥವರ ನಡುವೆ ಗುಲಾಬಿಯಂಥ ಹುಡುಗಿ ತನ್ನ ತಂದೆಯ ನಿಗೂಢ ಸಾವಿಗೆ ಸಾಕ್ಷಿ ಹುಡುಕಿಕೊಂಡು ಬರುತ್ತಾಳೆ. ಈ ಗಯ್ಯಾಳಿಗಳ ನಡುವೆ ನಡೆಯುವ ಹಾಸ್ಯಮಯ ಪ್ರಸಂಗಗಳು ಹಾಗೂ ಗುಲಾಬಿಯ ನಿಗೂಢ ನಡೆಗಳು ಕಥೆಗೆ ಹೊಸತನದ ಸ್ಪರ್ಶ ನೀಡಿವೆ. ರವಿತೇಜ ನಿರ್ದೇಶನದ ಜವಾಬ್ದಾರಿನ್ನು ಹೊತ್ತಿದ್ದಾರೆ. ತಾರಾಗಣದಲ್ಲಿ ನವ್ಯ, ರೋಹಿಣಿ, ದಿವ್ಯ, ವೀಣಾ, ರಚನಾ, ಆರ್ವ ಬಸವಟ್ಟಿ, ರವಿತೇಜ ಮುಂತಾದವರಿದ್ದಾರೆ.

ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲ ತಮ್ಮ ʻಸುರಾಗ್‌ ಪ್ರೊಡಕ್ಷನ್ಸ್‌ ಲಾಂಛನದಲ್ಲಿʼಈ ಧಾರಾವಾಹಿ ನಿರ್ಮಿಸುತ್ತಿದ್ದಾರೆ. ಇದು ಕಿರುತೆರೆಯಲ್ಲಿ ಅವರ ಮೊದಲ ಪ್ರಯತ್ನ. “ಗೌರಿಪುರದ ಗಯ್ಯಾಳಿಗಳು” ಮಾರ್ಚ್‌ 15ರಿಂದ ಸೋಮವಾರದಿಂದ ಶನಿವಾರ ಸಂಜೆ 6.30ಕ್ಕೆ ಪ್ರಸಾರವಾಗಲಿದೆ.

# “ನೇತ್ರಾವತಿ”
ತನ್ನೊಳಗೆ ನೋವಿದ್ದರೂ ತೋರಿಸಿಕೊಳ್ಳದೇ ಇತರರಿಗೆ ನಗು ಹಂಚುವ, ಸಮಾಧಾನ ನೀಡುವ, ಆಶಾಕಾರ್ಯಕರ್ತೆ, ಮಂಜುನಾಥ ಸ್ವಾಮಿಯ ಭಕ್ತೆ ನೇತ್ರಾವತಿ. ವೃತ್ತಿ ಜೀವನದ ಏರಿಳಿತಗಳು ಇವಳನ್ನು ಒಬ್ಬ ಒರಟ ನಾಯಕನ ಮನೆಗೆ ತಂದು ನಿಲ್ಲಿಸುತ್ತದೆ. ಶರೀರದ ಗಾಯಕ್ಕೆ ಮುಲಾಮು ಹಚ್ಚಬಲ್ಲ ನೇತ್ರಾವತಿ, ಆ ಒರಟನ ಮನಸ್ಸಿನ ಗಾಯಕ್ಕೆ ಮದ್ದು ಮಾಡಿ ಅವನಿಗೆ ಸತ್ಯದ ಅರಿವು ಮೂಡಿಸುವುದು ಮುಂದಿನ ಪಯಣ.

ಕನ್ನಡ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ, ಡಾ.ರಾಜ್‌ಕುಮಾರ್‌ ಕುಟುಂಬಕ್ಕೆ ಸೇರಿದ ಪೂರ್ಣಿಮಾ ಪ್ರೊಡಕ್ಷನ್ಸ್‌ ಲಾಂಛನದಡಿ ʻನೇತ್ರಾವತಿʼ ಧಾರಾವಾಹಿ ಮೂಡಿಬರಲಿದೆ. ಕಿರುತೆರೆಯ ಯಶಸ್ವಿ ನಿರ್ದೇಶಕ ಸಂತೋಷ್‌ಗೌಡ ʻನೇತ್ರಾವತಿʼಯನ್ನು ಹೊಸ ಥರದ ನಿರೂಪಣಾ ಶೈಲಿಯೊಂದಿಗೆ ನಿರ್ದೇಶಿಸುತ್ತಿದ್ದಾರೆ. ತಾರಾಗಣದಲ್ಲಿ ದುರ್ಗಾಶ್ರೀ, ಸನ್ನಿ ಮಹಿಪಾಲ್, ಸಚಿನ್, ಚೈತ್ರಾ ರಾವ್, ದಾನಪ್ಪ, ಐಶ್ವರ್ಯ ಮುಂತಾದವರಿದ್ದಾರೆ. ಛಾಯಾಗ್ರಹಣ: ದಯಾಕರ್, ಸಂಕಲನ: ಗುರುಮೂರ್ತಿ ಹೆಗಡೆ.

# ಎರಡು ದಶಕ ನಂತರ ಬಣ್ಣ ಹಚ್ಚುತ್ತಿರುವ ಅಂಜಲಿ:
ಅನಂತನ ಆವಾಂತರ, ತರ್ಲೆ ನನ್ನ ಮಗ, ನೀನು ನಕ್ಕರೆ ಹಾಲು ಸಕ್ಕರೆ ಮುಂತಾದ ಚಿತ್ರಗಳ ನಾಯಕಿಯಾಗಿ ತೊಂಬತ್ತರ ದಶಕದಲ್ಲಿ ಮಿಂಚಿದ್ದ ಕಲಾವಿದೆ ಅಂಜಲಿ 22 ವರ್ಷಗಳ ನಂತರ ʼನೇತ್ರಾವತಿʼ ಧಾರಾವಾಹಿ ಮೂಲಕ ಬಣ್ಣ ಹಚ್ಚುತ್ತಿದ್ದಾರೆ.

ನೇತ್ರಾವತಿಯ ತಾಯಿ ಭಾಗೀರಥಿಯಾಗಿ ಕಾಣಿಸಿಕೊಳ್ಳುತ್ತಿರುವ ಅಂಜಲಿ ಈ ಥರದ ಭಾವನಾತ್ಮಕ ಪಾತ್ರವನ್ನು ಮೊದಲ ಸಲ ನಿರ್ವಹಿಸುತ್ತಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸುತ್ತಾರೆ. ಕನ್ನಡಿಗರ ಹೃದಯಕ್ಕೆ ಇನ್ನಷ್ಟು ಹತ್ತಿರವಾಗಿರುವ ಉದಯ ಟಿವಿಯಲ್ಲಿ ಅಂಜಲಿಯವರ ಕಂ ಬ್ಯಾಕ್‌ಆಗುತ್ತಿರುವುದು ವಿಶೇಷ.

“ನೇತ್ರಾವತಿ” ಮಾರ್ಚ್‌ 15 ರಿಂದ ಸೋಮವಾರದಿಂದ ಶನಿವಾರ ಸಂಜೆ 7:30 ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!