ಚಿತ್ರರಂಗದಲ್ಲಿ ಚಾಲೆಂಜಿಂಗ್ ಅನಿಸುವುದು ನೈಜ ಸಬ್ಜೆಕ್ಟ್ ಮೇಲೆ ಸಿನಿಮಾ ಮಾಡುವಾಗ ಎಂದು ಹೇಳಲೇಬೇಕು. ಅಂಥದೊಂದು ನೈಜ ಘಟನೆ ಆಧಾರಿತ ಸಿನಿಮಾವೊಂದರ ಪೋಸ್ಟರ್ ಬಿಡುಗಡೆಯಾಗಿದೆ. ಚಿತ್ರದ ಹೆಸರು ‘ರತ್ನಾಪುರ’.
ಇದು ಸರಿ ಸುಮಾರು 65 ವರ್ಷಗಳ ಹಿಂದೆ ನಡೆದ ನೈಜ ಘಟನೆಯೊಂದನ್ನು ಆಧಾರವಾಗಿಸಿ ಮಾಡತ್ತಿರುವಂಥ ಚಿತ್ರ. ನೈಜ ಕತೆಯನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದ ಟೈಟಲ್ ಪೋಸ್ಟರ್ ಇಂದು ಶಿವರಾತ್ರಿ ಹಬ್ಬದಂದು ಬಿಡುಗಡೆ ಮಾಡಲಾಯಿತು. ‘ಲೋಕೂರ ಕ್ರಿಯೇಷನ್ಸ್ ‘ನಲ್ಲಿ ಮೂಡಿಬಂದಿರೋ ಈ ಸಿನಿಮಾ ಹೊಸಬರ ತಂಡದಿಂದ ಕೂಡಿದೆ. ತಾಯಿ ಮತ್ತು ಮಗುವಿನ ನಡುವೆ ನಡೆದಿರುವಂಥ ಘಟನೆ ಈ ಚಿತ್ರಕ್ಕೆ ಪ್ರೇರಣೆ ಎನ್ನಲಾಗಿದೆ.
‘ಕಲಾಗಂಗೋತ್ರಿ’ ನಾಟಕ ತಂಡದಲ್ಲಿ ನಾಟಕಗಳನ್ನು ಮಾಡಿಕೊಂಡಂತಹ ತಂಡವು ಈ ಸಿನಿಮಾ ಮಾಡುತ್ತಿರುವುದು ವಿಶೇಷ. ರಂಗಭೂಮಿ ಹಿನ್ನೆಲೆಯ ತಂಡ ಚಿತ್ರದಲ್ಲಿದೆ ಎನ್ನುವ ಕಾರಣಕ್ಕಾಗಿ ಇನ್ನಷ್ಟು ಭರವಸೆ ಮೂಡುವುದು ಸಹಜ. ಅಂದಹಾಗೆ ನಿರ್ದೇಶಕ ಹಾಲೇಶ ಲೋಕುರ ಅವರೇ ಈ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆಯನ್ನು ಕೂಡ ರಚಿಸಿದ್ದಾರೆ.
ರತ್ನಾಪುರ ಸಿನಿಮಾದ ನಾಯಕರಾಗಿ ದೀಕ್ಷಿತ್ ಶೆಟ್ಟಿ ಜೊತೆಗೆ ಹಾಲೇಶ ಕೂಡ ನಟಿಸುತ್ತಿದ್ದು, ಮರಾಠಿ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿರುವ ಮಾಧುರಿ ಪವಾರ್ ಹಾಗೂ ತೆಲುಗು ಧಾರವಾಹಿಗಳಲ್ಲಿ ನಟಿಸಿರುವಂತಹ ನಯನ ಸಿನಿಮಾದ ನಾಯಕಿಯರು.
ಸಿನಿಮಾದ ನಿರ್ಮಾಪಕರು ಪಿ.ಜನಾರ್ದನ, ಶಿವಬಸವ ನಾಯಕ್ ಮತ್ತು ಹಾಲೇಶ್. ಮರಾಠಿ ಸಿನಿಮಾ ‘ಸೈರಾಟ್’ ನ ಅಜಯ ಮತ್ತು ಅತುಲ್ ಈ ಸಿನಿಮಾದ ಸಂಗೀತ ನಿರ್ದೇಶಕರಾಗಿದ್ದು, ಒಟ್ಟು 6 ಹಾಡುಗಳಿವೆ. ಛಾಯಾಗ್ರಹಣ ವೇಣುಗೌಡ. ಈ ಸಿನಿಮಾದಲ್ಲಿ ಹಿರಿಯ ಕಲಾವಿದರಾದ ದಸರತ್ ಅಂಬಿ, ಸಕಾರಾಮ್, ಮುರುಗೇಶ್, ಸುನಿಲ್ ಮುಂತಾದವರಿದ್ದಾರೆ.
@ಬಿಸಿನಿಮಾಸ್
Be the first to comment