ದುರ್ಗಾ ಸಿನಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಸಿದ್ಧವಾಗಿರುವ ಪಾರು ಸಿನಿಮಾ ಶನಿವಾರ ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಆಡಿಯೋ ಬಿಡುಗಡೆ ಮಾಡಿಕೊಂಡು ಸಂಭ್ರಮಿಸಿದೆ. ನೀನಾಸಂ ಸತೀಶ್ ಮತ್ತು ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್ ವಿಶೇಷ ಅತಿಥಿಗಳಾಗಿ ಆಗಮಿಸಿ ಸ್ನೇಹಿತನ ಚಿತ್ರದ ಆಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದ್ದಾರೆ.
ಅಂದಹಾಗೆ, ಈಗಾಗಲೇ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡಿಕೊಂಡು ಬರುತ್ತಿರುವ ಹನುಮಂತ ಪೂಜಾರ್ ಮೊದಲ ಬಾರಿಗೆ ಪಾರು ಎಂಬ ಮಕ್ಕಳ ಸಿನಿಮಾ ಮೂಲಕ ನಿರ್ದೇಶನಕ್ಕೆ ಇಳಿದಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ಚಿಂದಿ ಆಯುವ ಮಕ್ಕಳ ಕುರಿತಾದ ಸಿನಿಮಾ ಇದು.
ಪುಟ್ಟ ಮಕ್ಕಳೇ ಈ ಚಿತ್ರದ ಪ್ರಧಾನ ಪಾತ್ರಗಳು. 31 ದಿನಗಳ ಕಾಲ ದಾವಣಗೆರೆಯ ಸುತ್ತಮುತ್ತ ಶೂಟಿಂಗ್ ಮಾಡಿದ್ದೇವೆ. ಇದೀಗ ಆಡಿಯೋ ಮೂಲಕ ಬಂದಿದ್ದೇವೆ. ಇದೇ ತಿಂಗಳ 26ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದರು.
ನಟ ನೀನಾಸಂ ಸತೀಶ್ ಮಾತನಾಡಿ ಹನಮಂತು ನೀನಾಸಂನಲ್ಲಿ ನನಗಿಂತ ಸೀನಿಯರ್. 10-15 ವರ್ಷಗಳಿಂದ ನಮ್ಮ ಒಡನಾಟವಿದೆ. ಹೊಸ ಪ್ರಯತ್ನದ ರೀತಿಯಲ್ಲಿ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಗೆಲುವು ನಮ್ಮ ಕೈಯಲ್ಲಿ ಇಲ್ಲ.
ಪ್ರಯತ್ನ ನಮ್ಮದಾಗಬೇಕಷ್ಟೇ. ಹಾಗಾಗಿ ಸ್ನೇಹಿತನ ಈ ಹೊಸ ಪ್ರಯತ್ನಕ್ಕೆ ನನ್ನ ಬೆಂಬಲ ಇದ್ದೇ ಇದೆ. ಎಲ್ಲರಿಗೂ ಒಳ್ಳೆಯದಾಗಲಿ ಎಂದರು. ಮಕ್ಕಳು ಮುದ್ದಾಗಿ ನಟಿಸಿದ್ದಾರೆ. ನಿಮ್ಮ ತಂಡಕ್ಕೆ ಏನೇ ಬೇಕೆಂದರೂ ಒಂದು ಕರೆ ಮಾಡಿ ಎಂದು ಭಾಮಾ ಹರೀಶ್ ಹೊಸ ತಂಡಕ್ಕೆ ಅಭಯ ನೀಡಿದರು. ಪಾರು ಅನ್ನೋ ಶೀರ್ಷಿಕೆ ತುಂಬ ಇಷ್ಟವಾಯ್ತು. ಮೂರು ಹಾಡು ಸಖತ್ ಆಗಿದೆ. ಎ.ಟಿ ರವೀಶ್ ಅವರ ಮ್ಯೂಸಿಕ್ ಚೆನ್ನಾಗಿ ಮಾಡಿದ್ದಾರೆ. ಇಡೀ ತಂಡದಲ್ಲಿ ಏನಾದರೊಂದು ಮಾಡಬೇಕೆಂಬ ಛಲ ಇದೆ.. ಮಕ್ಕಳೆಲ್ಲ ತುಂಬ ಚೆನ್ನಾಗಿ ನಟಿಸಿದ್ದಾರೆ.
ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಅಯೋಗ್ಯ ಸಿನಿಮಾ ಖ್ಯಾತಿಯ ನಿರ್ದೇಶಕ ಮಹೇಶ್ ಚಿತ್ರತಂಡಕ್ಕೆ ಹರಸಿದರು. ಇನ್ನು ಈ ಸಿನಿಮಾದಲ್ಲಿ ಪುಟಾಣಿಗಳಾದ ಹಿತೈಶಿ ಪೂಜಾರ, ಪ್ರಸಾದ್, ಅಚ್ಯುತ್, ಮೈಲಾರಿ ನಟಿಸಿದ್ದಾರೆ. ನಟರಾದ ರಾಮ್ಜಿ, ಕಾರ್ತಿಕ್ ಸಹ ನಟಿಸಿದ್ದಾರೆ. ಇನ್ನುಳಿದಂತೆ ಸುಭಾಸ್ಚಂದ್ರ, ಗೂಳಿಹಟ್ಟಿ ಸಿನಿಮಾ ಖ್ಯಾತಿಯ ಶಶಾಂತ್ ರಾಜ್ , ಭಾಸ್ಕರ್, ಆಡುಗೋಡಿ ಶ್ರೀನಿವಾಸ್ ಚಿತ್ರಕ್ಕೆ ಶುಭ ಕೋರಿದರು. ವಿತರಕ ವೆಂಕಟ್ಗೌಡ ಸಿನಿಮಾ ವಿತರಣೆ ಮಾಡುತ್ತಿದ್ದಾರೆ.
ಅಂದಹಾಗೆ ನಿರ್ದೇಶಕ ಹನುಮಂತ್ ಬುದ್ದಿವಂತ, ಅಯೋಗ್ಯ, ದೋಬಿಘಾಟ್ ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಇದು ಅವರಿಗೆ ಚೊಚ್ಚಲ ನಿರ್ದೇಶನದ ಚಿತ್ರ.ದುರ್ಗ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಹನುಮಂತ್ ಪೂಜಾರ್ ಅವರೆ ನಿರ್ಮಿಸಿರುವ ಈ ಚಿತ್ರದ ಸಹ ನಿರ್ಮಾಪಕರು ಸಿ.ಎನ್.ಗೌರಮ್ಮ .ಮೂರು ಹಾಡುಗಳಿದ್ದು, ಎ.ಟಿ.ರವೀಶ್ ಸಂಗೀತ ನೀಡಿದ್ದಾರೆ. ಶಿವಕುಮಾರ್ ಸ್ವಾಮಿ ಸಂಕಲನ ‘ಪಾರು ‘ಗಿದೆ.
ಬೇಬಿ ಹಿತೈಶಿ ಪೂಜಾರ್, ಮಾಸ್ಟರ್ ಮೈಲಾರಿ ಪೂಜಾರ್, ಮಾಸ್ಟರ್ ಅಚ್ಯುತ್, ಮಾಸ್ಟರ್ ಪ್ರಸಾದ್, ಶಿವಕಾರ್ತಿಕ್, ರಾಂಜಿ, ನಿಜಗುಣ ಶಿವಯೋಗಿ, ಹಾಲೇಶ್, ಪ್ರೇಂಕುಮಾರ್ ಮುಂತಾದವರ ತಾರಾಬಳಗ ಈ ಚಿತ್ರದಲ್ಲಿದೆ. ದಾವಣಗೆರೆ, ಬೆಂಗಳೂರು, ಹಾವೇರಿ ಮುಂತಾದ ಕಡೆ 31 ದಿನಗಳ ಚಿತ್ರೀಕರಣ ನಡೆದಿದೆ.
Be the first to comment