ಒಂದೇ ವೇದಿಕೆಯಲ್ಲಿ 12 ಸಿನಿಮಾಗಳ ಟೈಟಲ್ ಲಾಂಚ್..!

ಸಿನಿಮಾವೊಂದನ್ನು ಆರಂಭಿಸಿ ಅದನ್ನು ತೆರೆಗೆ ತರುವುದು ಕಷ್ಟದ ಕೆಲಸ ಅನ್ನೋದು ಬಹುತೇಕರ ಅಭಿಪ್ರಾಯ. ಕಳೆದ ಒಂದು ವರ್ಷದಲ್ಲಿ ಕೊರೋನ ಸಮಸ್ಯೆಯಿಂದ ಚಿತ್ರರಂಗ ತತ್ತರಿಸಿದೆ. ಸಿನಿಮಾ ಆರಂಭಿಸಲು ನಿರ್ಮಾಪಕರು ಹಿಂದುಮುಂದು ನೋಡುತ್ತಿರುವ ಈ ಸಂದರ್ಭದಲ್ಲೇ ನಿರ್ದೇಶಕ ಅಜಯ್ ಕುಮಾರ್ 12 ಸಿನಿಮಾಗಳನ್ನು ಒಂದೇ ಸಲಕ್ಕೆ ಆರಂಭಿಸುತ್ತಿದ್ದಾರೆ.

ಅಜಯ್ ಡೈರೆಕ್ಟರ್ ಸರ್ಕಲ್ ಹೆಸರಿನ ತಂಡವನ್ನು ಕಟ್ಟಿಕೊಂಡು ತಾವೂ ನಿರ್ದೇಶನ, ನಿರ್ಮಾಣದೊಂದಿಗೆ ಇತರೆ ಯುವ ನಿರ್ದೇಶಕ, ನಿರ್ದೇಶಕಿಯರಿಗೂ ಅವಕಾಶ ಮಾಡಿಕೊಟ್ಟಿದ್ದಾರೆ. ʻನೀವು ಸಿನಿಮಾ ಮಾಡಿದಾಗ ಹೇಳಿ ನಿಮ್ಮೊಂದಿಗೆ ನಾವೂ ಕೈ ಜೋಡಿಸುತ್ತೇವೆʼ ಅಂದಿದ್ದವರನ್ನೆಲ್ಲಾ ಕರೆತಂದು ಅವರಿಂದ ಒಂದೊಂದು ಸಿನಿಮಾಗಳನ್ನು ನಿರ್ಮಾಣ ಮಾಡಿಸುತ್ತಿದ್ದಾರೆ.

ಈ ಹನ್ನೆರಡು ಸಿನಿಮಾಗಳ ಮುಹೂರ್ತ ಸಮಾರಂಭ ಇಷ್ಟರಲ್ಲೇ ಜರುಗಲಿದ್ದು, ಸದ್ಯ ಈ ಚಿತ್ರಗಳ ಟೈಟಲ್ ಲಾಂಚ್ ಕಾರ್ಯಕ್ರಮ ನೆರವೇರಿದೆ. ಅಜಯ್ ಕುಮಾರ್ ಎಜೆ ಕಲಾನಿರ್ದೇಶನ, ಸಂಕಲನ, ಸಂಗೀತ, ಕಥೆ ಚಿತ್ರಕತೆ, ಜೊತೆಗೆ ನಿರ್ಮಾಣ- ನಿರ್ದೇಶನ ಮಾಡುತ್ತಿರುವ ಪ್ರೇಮಂ ಶರಣಂ ಗಚ್ಚಾಮಿ, ಡ್ರಗ್ ಪೆಡ್ಲರ್, ಶ್ರೀ ಯೋಗ ಮಕರಂದ ನಿರ್ಮಾಣದ ಶ್ರೀ ರಾಮ ಸಿದ್ಧಿ, ಲಾಕ್ ಡೌನ್, ಚೆನ್ನಬಸವ ನಿರ್ಮಾಣ, ನವ್ಯಶ್ರೀ ಎಸ್ ನಿರ್ದೇಶನದ ಮಂದಾರ, ಕುಚೇಲ ನಿರ್ಮಾಣ, ಕಂಕಣವಾಡಿ ಬಸವರಾಜು ನಿರ್ದೇಶನದ ಠಕ್ಕ, ಮಂಜುನಾಥ್ ಆರ್ ಜಿ ನಿರ್ಮಾಣದಲ್ಲಿ, ಅಶ್ವಿನಿ ಎಕೆ ನಿರ್ದೇಶನದ ದೇವರ ಮಕ್ಕಳು, ಡಾ. ದೇವನಹಳ್ಳಿ ದೇವರಾಜ್ ನಿರ್ಮಾಣ ಮತ್ತು ನಿರ್ದೇಶನದ ಆಂಡ್ರಾಯ್ಡ್ ಫೋನ್, ನೆಲಮನೆ ರಾಘವೇಂದ್ರ ನಿರ್ಮಾಣದಲ್ಲಿ, ವನಿತ ನಿರ್ದೇಶಿಸಲಿರುವ ರಕ್ತಾಕ್ಷಿ, ಲಕ್ಷ್ಮಿ ಸಿ ನಿರ್ಮಾಣ, ಶಿವಸಾಹಿತ್ಯ ನಿರ್ದೇಶನದಲ್ಲಿ ʻಸಂಧ್ಯಾರಾಗʼ, ಶಫಿ ಹೆಬ್ಬಾಳ ನಿರ್ಮಾಣದ, ತನುಶ್ರೀ ಬಿವಿ ನಿರ್ದೇಶನದ ಲವ್ ಯು ಚಿನ್ನ, ಶಿವರಾಜ್ ಕುಮಾರ್ ಎನ್ ಎಸ್ ನಿರ್ಮಾಣದಲ್ಲಿ, ದಿನೇಶ್ ಉಂಡವಾಡಿ ನಿರ್ದೇಶಿಸಲಿರುವ ವ್ಯಾಕ್ಸಿನ್ – ಇವಿಷ್ಟೂ ಅಜಯ್ ಡೈರೆಕ್ಟರ್ ಸರ್ಕಲ್ ತಂಡ ಅನಾವರಣಗೊಳಿಸಿರುವವ ಶೀರ್ಷಿಕೆಗಳು. ಬಹುತೇಕ ಸಿನಿಮಾಗಳಿಗೆ ಗುಂಡ್ಳುಪೇಟೆ ಸುರೇಶ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಎಲ್ಲ ಹನ್ನೆರಡೂ ಸಿನಿಮಾಗೆ ಸ್ವತಃ ಅಜಯ್ ಕುಮಾರ್ ಅವರೇ ಕತೆ ಬರೆದಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹುಟ್ಟಿಕೊಂಡ ಕತೆಗಳು ಇವು. ತಲೆಯಲ್ಲಿ ಇದ್ದ ಐಡಿಯಾಗಳೆಲ್ಲಾ ಲಾಕ್ ಡೌನ್ ಸಮಯದಲ್ಲಿ ಅಕ್ಷರರೂಪಕ್ಕಿಳಿಯಿತು. ನಾನು ಈ ಹಿಂದೆ ನಿರ್ದೇಶಿಸಿದ್ದ ಎರಡು ಚಿತ್ರಗಳಿಗೆ ಸಹಾಯಕರಾಗಿ ನನ್ನೊಂದಿಗಿದ್ದ ಪ್ರತಿಭಾವಂತರಿಗೆ ಇಲ್ಲಿ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಕೊಡಿಸಿದ್ದೇನೆ. ನಿರ್ಮಾಪಕರನ್ನು ಒಪ್ಪಿಸಿ ಸಿನಿಮಾ ಮಾಡುವುದು ಎಷ್ಟು ಕಷ್ಟದ ಕೆಲಸ ಅನ್ನೋದನ್ನು ನಾನು ಬಲ್ಲೆ.

ಹೀಗಾಗಿ ನನ್ನ ತಂಡದ ಎಲ್ಲರೂ ಕ್ರಿಯಾಶೀಲತೆಗಷ್ಟೇ ಒತ್ತು ಕೊಟ್ಟು ನಿರ್ದೇಶನ ಮಾಡಲಿ ಎನ್ನುವ ಉದ್ದೇಶ ನನ್ನದುʼʼ ಅನ್ನೋದು ಅಜಯ್ ಡೈರೆಕ್ಟರ್ ಸರ್ಕಲ್ ರೂವಾರಿ ಅಜಯ್ ಕುಮಾರ್ ಮಾತು. ಅಜಯ್‌ ಕುಮಾರ್‌ ಅವರು ಚಿತ್ರರಂಗ ಮತ್ತು ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ ಅಪರೂಪದ ಪ್ರತಿಭೆ.

ರಂಗಭೂಮಿಯ ಹಲವಾರು ಹೆಸರಾಂತ ನಾಟಕಗಳಲ್ಲಿ ಅಜಯ್‌ ಅಭಿನಯಿಸಿದ್ದಾರೆ. ಅವರ ಪ್ರತಿಭೆಯ ಜೊತೆ ಶ್ರಮವನ್ನು ಸೇರಿಸಿ ದುಡಿಯುವ ಕೆಲಸಗಾರ. ರಂಗಭೂಮಿಯಲ್ಲಿ ಇವರ ಸಾಧನೆಯನ್ನು ತುಂಬಾ ಹತ್ತಿರದಿಂದ ಕಂಡಿದ್ದೇನೆ. ಚಿತ್ರರಂಗದಲ್ಲೂ ಅಜಯ್‌ ಹೆಸರು ಮಾಡಲಿ ಎಂದು ಹಿರಿಯ ಕಲಾ ನಿರ್ದೇಶಕ ಶಶಿಧರ ಅಡಪ ಹಾರೈಸಿದರು.

ಚಿತ್ರಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌ ಅವರು ಕೂಡಾ ಅಜಯ್‌ ಡೈರೆಕ್ಟರ್‌ ಸರ್ಕಲ್‌ ನ ಹನ್ನೆರಡು ಸಿನಿಮಾಗಳ ಟೈಟಲ್‌ ಲಾಂಚ್‌ ಕಾರ್ಯಕ್ರಮಕ್ಕೆ ಆಗಮಿಸಿ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ಶುಭ ಕೋರಿದರು.

# ರಾಗಿಣಿ ನುಡಿ:
ಏಕಕಾಲದಲ್ಲಿ ಹನ್ನೆರಡು ಸಿನಿಮಾಗಳನ್ನು ಆರಂಭಿಸೋದು ಅಂದರೆ ಸುಲಭದ ಮಾತಲ್ಲ. ಈ ಪ್ರಯತ್ನವನ್ನು ಕಂಡು ಖುಷಿ ಮತ್ತು ಹೆಮ್ಮೆ ಅನ್ನಿಸುತ್ತಿದೆ. ಒಂದಕ್ಕಿಂತಾ ಒಂದು ಭಿನ್ನವಾದ ಶೀರ್ಷಿಕೆಗಳು ಅನಾವರಣಗೊಂಡಿವೆ. ಹೊಸದಾಗಿ ಸಿನಿಮಾಗೆ ಬಂದು, ಇಲ್ಲಿ ನೆಲೆ ನಿಲ್ಲಲು ಶ್ರಮಿಸುವವರ ಮನಸ್ಥಿತಿ ಹಾಗೂ ತಳಮಳಗಳು ಹೇಗಿರುತ್ತವೆ ಅನ್ನೋದು ನನಗೆ ಗೊತ್ತು.

ಯಾಕೆಂದರೆ, ನಾನು ಕೂಡಾ ಆ ಘಟ್ಟವನ್ನು ಧಾಟಿ ಬಂದವಳು. ಒಂದಂತೂ ಹೇಳಲು ಇಷ್ಟ ಪಡುತ್ತೇನೆ. ಪ್ರತಿಭಾವಂತರನ್ನು ಪೊರೆಯಯುವ, ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕನ್ನಡ ಚಿತ್ರರಂಗಕ್ಕಿಂತ ಮತ್ತೊಂದು ಇಂಡಸ್ಟ್ರಿ ಬೇರೆ ಯಾವುದೂ ಇಲ್ಲ. ಇಲ್ಲಿ ನಿಮ್ಮ ಪ್ರತಿಭೆ ಮಾತ್ರ ಮುಖ್ಯವಾಗುತ್ತದೆ. ಅತ್ಯುತ್ತಮ ಸಿನಿಮಾಗಳು ಬರುವ ಸೂಚನೆಯನ್ನು ಈ ವೇದಿಯಲ್ಲಿ ಕಾಣುತ್ತಿದ್ದೇನೆ. ಹೆಚ್ಚು ಮಹಿಳಾ ನಿರ್ದೇಶಕಿಯರ ಕಡಿಮೆ ಇರುವ ನಮ್ಮ ಚಿತ್ರರಂಗದಲ್ಲಿ ಈ ಬ್ಯಾನರ್ ಮೂಲಕ ಒಂದೇ ಸಲಕ್ಕೆ ಇಷ್ಟೊಂದು ಡೈರೆಕ್ಟರ್ಸ್ ಬರುತ್ತಿರುವುದು ಖುಷಿಯ ವಿಚಾರ.

2020 ನನ್ನ ಪಾಲಿಗೆ ಮಾತ್ರವಲ್ಲದೆ, ಎಲ್ಲರ ಬದುಕಿನಲ್ಲೂ ಕಹಿ ಅನುಭವಗಳನ್ನು ಉಳಿಸಿ ಹೋಗಿದೆ. 2021 ಎಲ್ಲ ನೋವು, ಅವಮಾನಗಳನ್ನೂ ಮರೆಯುವಂತೆ ಮಾಡಲಿ. ಲೈಫು ಅಂದರೆ ಏಳುಬೀಳುಗಳು ಇದ್ದಿದ್ದೇ. ನನ್ನ ಬದುಕು ಅದಕ್ಕೆ ಉದಾಹರಣೆಯಂತಿದೆ. ಯಾವುದಕ್ಕೂ ಅಂಜದೇ ಅಳುಕದೇ ಮುನ್ನಡೆಯಬೇಕು. ಅಜಯ್‌ ಡೈರೆಕ್ಟರ್‌ ಸರ್ಕಲ್‌ ಗೆ ಒಳಿತಾಗಲಿ. ಎಲ್ಲ ಹನ್ನೆರಡೂ ಸಿನಿಮಾಗಳ ನಿರ್ಮಾಪಕರಿಗೆ ಶುಭ ಹಾರೈಸುತ್ತೇನೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!