ಹೊಸಬರ ಹೊಸ ಪ್ರಯತ್ನಗಳು ಸಿನಿಮಾರಂಗದಲ್ಲಿ ಆಗಾಗ ಆಗುತ್ತಿರುತ್ತವೆ. ಇದೀಗ ಅಂಥದ್ದೆ ಮತ್ತೊಂದು ಪ್ರಯತ್ನದೊಂದಿಗೆ ಆಗಮಿಸುತ್ತಿದ್ದಾರೆ ನಿರ್ದೇಶಕ ಪ್ರಗ್ಬಾಲ್. ಭಾರತೀಯ ಸಿನಿಮಾ ಇತಿಹಾಸದಲ್ಲಿ ಸಂಪೂರ್ಣ ಮಡ್ ರೇಸ್ನ ಸಿನಿಮಾ ಸಿದ್ಧವಾಗಿಲ್ಲ.
ಇದೀಗ ಆ ಸಾಹಸಕ್ಕೆ ಪ್ರಗ್ಬಾಲ್ ಆ್ಯಂಡ್ ಟೀಮ್ ಕೈ ಹಾಕಿದೆ. ಅಂತಾರಾಷ್ಟ್ರೀಯ ಮಟ್ಟದ ಫೀಲ್ ಕೊಡುವ ಸಿನಿಮಾ ನೀಡಬೇಕೆಂಬ ಉದ್ದೇಶದಿಂದ ಅಷ್ಟೇ ದುಬಾರಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅದಕ್ಕೆ ಮಡ್ಡಿ ಎಂಬ ಶೀರ್ಷಿಕೆ ನೀಡಿದ್ದಾರೆ. ಬೆಟ್ಟ, ಗುಡ್ಡ, ಕೆಸರು ಹೀಗೆ ಕಡಿದಾದ ರಸ್ತೆಯಲ್ಲಿ ಈ ರೇಸ್ ನಡೆಯುವುದರಿಂದ ಅದಕ್ಕೆ ಮಡ್ಡಿ ಎಂದು ಶೀರ್ಷಿಕೆ ಇಡಲಾಗಿದೆ.
ಭಾರತದ ಮೊದಲ ಮಡ್ ರೇಸ್ ಸಿನಿಮಾ ಇದಾಗಿರಲಿದೆ ಎಂದು ಹೆಮ್ಮೆಯಿಂದಲೇ ಹೇಳಿಕೊಳ್ಳುವ ತಂಡ, ಅಷ್ಟೇ ರೋಚಕವಾದ ಕಥೆಯನ್ನೂ ಈ ಸಿನಿಮಾದಲ್ಲಿ ಹೆಣೆದಿದೆ. ಅಂದಹಾಗೆ ಈ ಚಿತ್ರವನ್ನು ಪಿಕೆ7 ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಪ್ರೇಮಾ ಕೃಷ್ಣದಾಸ್ ಬಂಡವಾಳ ಹೂಡಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ಅಡ್ವೆಂಚರಸ್ ಆ್ಯಕ್ಷನ್ ಶೈಲಿಯ ಚಿತ್ರವಾಗಿದೆ.
ಇನ್ನೇನು ಶೀಘ್ರದಲ್ಲಿ ಟೀಸರ್ ಮೂಲಕ ಆಗಮಿಸಲಿದೆ ತಂಡ ಸಜ್ಜಾಗಿದೆ.ಈ ಚಿತ್ರದ ಕಲಾವಿದರೆಲ್ಲ ಯಾವುದೇ ಡ್ಯೂಪ್ ಬಳಸದೆ ಹಲವು ಶೈಲಿಯ ಮಡ್ ರೇಸ್ನಲ್ಲಿ ಪರಿಣಿತಿ ಪಡೆದಿದ್ದಾರೆ. ಒಟ್ಟು 13 ಕ್ಯಾಮರಾಗಳನ್ನು ಶೂಟಿಂಗ್ನಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಕೆಜಿಎಫ್ ಸಿನಿಮಾ ಖ್ಯಾತಿಯ ರವಿ ಬಸ್ರೂರು ಸಂಗೀತ ನೀಡಿರುವ ಈ ಚಿತ್ರಕ್ಕೆ ಸ್ಯಾನ್ ಲೋಕೇಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಅದೇ ರೀತಿ ಹಾಲಿವುಡ್ ಸಿನಿಮಾಗಳ ಛಾಯಾಗ್ರಹಣ ವಿಭಾಗದಲ್ಲಿ ಕೆಲಸ ಮಾಡಿರುವ ಕೆ.ಜಿ ರತೀಶ್ ಈ ಸಿನಿಮಾಕ್ಕೆ ಕ್ಯಾಮರಾಮನ್ ಆಗಿದ್ದಾರೆ. ಕಲರಿಸ್ಟ್ ಆಗಿ ರಂಗ ಕೆಲಸ ಮಾಡಿದ್ದಾರೆ.
ಕಳೆದ ಐದು ವರ್ಷಗಳ ಕಾಲ ಮಡ್ ರೇಸ್ ಬಗ್ಗೆ ಅಧ್ಯಯನ ನಡೆಸಿ ಈ ಸಿನಿಮಾ ಮಾಡಿರುವ ಪ್ರಗ್ಬಾಲ್, ಎರಡು ತಂಡಗಳ ನಡುವಿ ಸ್ಪರ್ಧೆಯನ್ನು ಈ ಸಿನಿಮಾದಲ್ಲಿ ತೋರಿಸಿದ್ದಾರೆ. ಇದರ ಜತೆಗೆ ಫ್ಯಾಮಿಲಿ ಸೆಂಟಿಮೆಂಟ್, ಭಾವನಾತ್ಮಕ ಅಂಶಗಳು ಮತ್ತು ಅಡ್ವೆಂಚರಸ್ ತಿರುವುಗಳನ್ನೂ ಈ ಸಿನಿಮಾದಲ್ಲಿ ಮಿಶ್ರಣ ಮಾಡಿದ್ದಾರೆ.
ನೈಜ ಅರಣ್ಯ ಪ್ರದೇಶದಲ್ಲಿ ಇಡೀ ಸಿನಿಮಾದ ಶೂಟಿಂಗ್ ಆಗಿದ್ದು, ಸಿಂಕ್ ಸೌಂಡ್ ಟೆಕ್ನಾಲಜಿ ಬಳಸಿ ಸಿನಿಮಾ ಮೂಡಿಬಂದಿದ್ದು, ಬಹುತೇಕ ಹೊಸಬರೇ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಯುವನ್, ರಿಧಾನ್ ಕೃಷ್ಣ, ಅನುಷಾ ಸುರೇಶ್, ಅಮಿತ್ ಶಿವದಾಸ್ ನಾಯರ್, ಹರಿರ್ಶ ಪೆರಾಡಿ, ವಿಜಯನ್, ರೆಂಜಿ ಪೆನಿಕರ್ ತಾರಾಗಣದಲ್ಲಿದ್ದಾರೆ.
Be the first to comment