‘ರಿವೈಂಡ್’ ಚಿತ್ರಕ್ಕೆ ರಿಲೀಸ್ ಡೇಟ್ ಅನೌನ್ಸ್!

ಕನ್ನಡ ಚಿತ್ರರಂಗಕ್ಕೆ ಬರುತ್ತಿರುವವರಲ್ಲಿ ಹೆಚ್ಚಿನವರು ಯುವ ಪ್ರತಿಭೆಗಳಾಗಿದ್ದು ಇವರಲ್ಲಿ ಹೊಸ ಐಡಿಯಾಗಳು, ಹೊಸ ಆಲೋಚನೆಗಳನ್ನು ಕಾಣಬಹುದಾಗಿದೆ, ಈಗ ಮತ್ತೊಬ್ಬ ಯುವಪ್ರತಿಭೆ ತೇಜಸ್ ರಿವೈಂಡ್ ಎನ್ನುವ ಸೈಂಟಿಫಿಕ್ ಫಿಕ್ಷನ್ ಕಥೆಯನ್ನು ತೆರೆಮೇಲೆ ತರುತ್ತಿದ್ದಾರೆ. ಈ ತೇಜಸ್ ಯಾರು ಗೊತ್ತೇ, ಹಿರಿಯನಟಿ ಪ್ರಮೀಳಾ ಜೋಷಾಯ್ ಅವರ ತಮ್ಮನ ಮಗ.

ಇತ್ತೀಚೆಗೆ ರಿವೈಂಡ್ ಚಿತ್ರದ ಟೀಸರ್ ಬಿಡುಗಡೆ ಹಾಗೂ ರಿಲೀಸ್ ಡೇಟ್ ಅನೌನ್ಸ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಚಿತ್ರದ ನಿರ್ದೇಶಕ, ನಿರ್ಮಾಪಕ ಹಾಗೂ ನಾಯಕನೂ ಆಗಿರುವ ತೇಜಸ್ ಈ ಹಿಂದೆ ಶಂಕರ್‍ನಾಗ್ ಅಭಿನಯದ ಮಹೇಶ್ವರ ಚಿತ್ರದಲ್ಲಿ ಬಾಲಕಲಾವಿದನಾಗಿ ಬಣ್ಣ ಹಚ್ಚಿದ್ದರು.

ಅಲ್ಲದೆ ಮೀಸೆ ಚಿಗುರಿದಾಗ ಚಿತ್ರದಲ್ಲಿಯೂ ನಟಿಸಿದ್ದರು. ನಂತರ ಪಿ.ಹೆಚ್.ಡಿ.ಮುಗಿಸಿಕೊಂಡು ಸಿಂಗಪೂರ್‍ನಲ್ಲಿ ಸೈಟಿಸ್ಟ್ ಆಗಿ ಕೆಲದಿನಗಳ ಕಾಲ ಕೆಲಸ ಮಾಡಿದ್ದಾರೆ. ಅಲ್ಲಿಂದ ಬಂದಮೇಲೆ ಕೊಂಜಂ ಮೆಲ್ ಕೊಂಜಂ ಮಾಜೈ, ಕಾದಲಿಕ್ಕಿ ಮರಣಂ ಇಲೈ ಎನ್ನುವ ಎರಡು ತಮಿಳು ಚಿತ್ರಗಳಲ್ಲಿ ನಟಿಸಿದ ನಂತರ ಸಿನಿಮಾ ನಿರ್ದೇಶನ ಮಾಡಬೇಕೆಂಬ ಉದ್ದೇಶದಿಂದ ರಿವೈಂಡ್ ಕಥೆ ಮಾಡಿಕೊಂಡು ಈ ಚಿತ್ರ ಆರಂಭಿಸಿ ಈಗ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ.

ಸೈಂಟಿಸ್ಟ್ ಒಬ್ಬನ ಜೀವನದ ಕಥೆ ಇಟ್ಟುಕೊಂಡು ರಿವೈಂಡ್ ಚಿತ್ರ ಮಾಡಿದ್ದಾರೆ. ಜೊತೆಗೆ ಚಿತ್ರದಲ್ಲಿ ಒಬ್ಬ ಪತ್ರಕರ್ತನ ಪಾತ್ರ ನಿರ್ವಹಿಸಿದ್ದಾರೆ. ಮೂಲತಃ ಎಂಜಿನಿಯರ್ ಆಗಿರುವ ತೇಜಸ್ ಚಿತ್ರರಂಗವನ್ನು ಫ್ಯಾಷನ್ ಆಗಿ ತೆಗೆದುಕೊಂಡಿದ್ದಾರೆ.

ನಾವು ಜೀವನದಲ್ಲಿ ಯಾವಾಗಲೂ ಹಿಂದೆ ನೋಡಬೇಕು. ಮುಂದೆ ಹೋಗಬೇಕು ಎಂಬ ಚಿಕ್ಕ ಅಂಶವನ್ನು ಇಟ್ಟುಕೊಂಡು ರಿವೈಂಡ್ ಚಿತ್ರದ ಕಥೆ ಮಾಡಿ ತೆರೆಮೇಲೆ ತರುತ್ತಿದ್ದಾರೆ. ವಿಜ್ಞಾನಿಯೊಬ್ಬನ ಜೀವನದಲ್ಲಿ ನಡೆಯಬಹುದಾದ ರೋಚಕ ಕಥೆ ಈ ಚಿತ್ರದಲ್ಲಿದ್ದು, ತೇಜಸ್ ಹಾಗೂ ಚಂದನಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ತೇಜಸ್ ಮಾತನಾಡುತ್ತ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ನನ್ನ ಬಹಳ ದಿನಗಳ ಕನಸಾಗಿತ್ತು. ಮನುಷ್ಯನ ಮನಸಿನ ಭಾವನೆಗಳು, ಪ್ರೀತಿ, ಹಾಗೂ ಸಂಬಂಧದ ಮೌಲ್ಯಗಳ ಜೊತೆ ವಿಜ್ಞಾನ ಸೇರಿದಾಗ ಏನಾಗಬಹುದು ಎಂಬುದನ್ನು ನಮ್ಮ ಚಿತ್ರದ ಮೂಲಕ ಹೇಳಹೊರಟಿದ್ದೇನೆ.

ಪ್ರತಿಯೊಬ್ಬರ ಬದುಕಿನಲ್ಲಿಯೂ ಒಂದು ಮರೆಯಲಾರದ ಘಟನೆ ನಡೆದಿರುತ್ತದೆ. ನಮ್ಮ ಜೀವನದಲ್ಲಿ ಮತ್ತೆ ಅಂಥ ಘಟನೆ ಮರುಕಳಿಸಿದಾಗ ನಾವೇನು ಮಾಡುತ್ತೇವೆ ಎನ್ನುವುದೇ ಈ ಚಿತ್ರದ ಒನ್‍ಲೈನ್ ಕಥೆ. ಚಿತ್ರಕ್ಕೆ ಯುರೋಪ್, ಫ್ಲಾಂಕ್ ಫರ್ಟ್ ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಿದ್ದೇವೆ. ಕವಲುದಾರಿ ಖ್ಯಾತಿಯ ಸಂಪತ್‍ಕುಮಾರ್ ಚಿತ್ರದ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಏಪ್ರಿಲ್ ತಿಂಗಳಲ್ಲಿ ಚಿತ್ರವನ್ನು ರಿಲೀಸ್ ಮಾಡಬೇಕೆಂದು ಯೋಜನೆ ಹಾಕಿಕೊಂಡಿದ್ದೇವೆ ಎಂದು ಹೇಳಿದರು. 2 ದಿನಗಳ ಹಿಂದೆ ಸಿಲಂಬರಸನ್ ಅವರು ಇದೇ ಹೆಸರಿನ ತಮಿಳು ಚಿತ್ರ ಮಾಡುತ್ತಿರುವುದಾಗಿ ಗೊತ್ತಾಗಿ ಅವರಲ್ಲಿ ಕೇಳಿದೆ, ಆಗವರು ಟೈಟಲ್ ಚೇಂಜ್ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂಬುದಾಗಿಯೂ ಹೇಳಿದರು.

ನಾಯಕಿ ಚಂದನಾ ರಾಘವೇಂದ್ರ ಈಗಾಗಲೇ ಒಂದೆರಡು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡಿದ್ದಾರೆ. ಆದರೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರುವ ಮೊದಲ ಚಿತ್ರವಿದು. ಅವರು ಮಾತನಾಡುತ್ತ ಸಿನಿಮಾದ ಆರಂಭದಿಂದ ನಾನು ಬರೀ ನಾಯಕಿ ಮಾತ್ರವಲ್ಲದೆ ಡೈರೆಕ್ಷನ್ ವಿಭಾಗದಲ್ಲೂ ಕೆಲಸ ಮಾಡಿದ್ದೇನೆ.

ತೇಜ್ ಒಬ್ಬ ನಿರ್ಮಾಪಕ, ನಿರ್ದೇಶಕ ಹಾಗೂ ನಟನಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ ಎಂದು ಹೇಳಿದರು. ಮತ್ತೊಬ್ಬನಟ ಆನಂದ್ ಮಾತನಾಡುತ್ತ ಇದೊಂದು ಸೈಂಟಿಫಿಕ್ ಫಿಕ್ಷನ್ ಮೂವಿ. ಅದನ್ನು ತುಂಬಾ ಪ್ಲಾನ್ಡ್ ಆಗಿ ವರ್ಕ ಮಾಡಿದ್ದಾರೆ ಎಂದರು.

ನಂತರ ನಟ ಧರ್ಮ ಮಾತನಾಡಿ ಪ್ರವೀಣ್ ನನಗೆ 16-17 ವರ್ಷಗಳ ಪರಿಚಯ. ಈ ಮಧ್ಯೆ ವಿದೇಶಕ್ಕೆ ಹೋಗಿ ಸಾಧನೆ ಮಾಡಿ ಈಗ ನಿರ್ದೇಶಕನಾಗಿದ್ದಾರೆ. ಈ ರೀತೀನೂ ಆಗುತ್ತೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಿದ್ದಾರೆ. ನಂತರ ಸಂದೀಪ್ ಮಲಾನಿ, ವಲ್ಲೀ, ಕಿರಣ್ ಬಿರಾದಾರ್, ಸಂಕಲನಕಾರ ಎಲ್ಲರೂ ಚುಟುಕಾಗಿ ಮಾತನಾಡಿ ಪ್ರವೀಣ್ ಪ್ರಯತ್ನಕ್ಕೆ ಶುಭ ಹಾರೈಸಿದರು.

ರಿವೈಂಡ್ ಚಿತ್ರದಲ್ಲಿ ಕೆ.ಜಿ.ಎಪ್. ಖ್ಯಾತಿಯ ಸಂಪತ್‍ಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು ಸುಂದರರಾಜ್, ಮಂಡ್ಯರವಿ, ಆನಂದ್, ಸಂದೀಪ್ ಮಲಾನಿ, ವಿಕಾಸ್ ಗೌಡ ಮುಂತಾದವರು ಈ ಚಿತ್ರದ ಉಳಿದ ತಾರಾಬಳಗದಲ್ಲಿದ್ದಾರೆ.

ವಿಭಿನ್ನವಾದ ಶೀರ್ಷಿಕೆಯನ್ನು ಹೊಂದಿರುವ ಈ ಚಿತ್ರದಲ್ಲಿ ಒಂದು ವಿಶೇಷ ಸೈಂಟಿಫಿಕ್ ಫಿಕ್ಷನ್ ಕಥಾಹಂದರವನ್ನು ಹೇಳಲು ಪ್ರಯತ್ನಿಸಿದ್ದೇವೆ. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಭೂತಕಾಲ ಹಾಗೂ ವರ್ತಮಾನ ಕಾಲದ ನಡುವೆ ಈ ಚಿತ್ರದ ಕಥೆ ಸಾಗುತ್ತದೆ ಎಂದು ಚಿತ್ರದ ನಿರ್ದೇಶಕ ತೇಜ್ ತಿಳಿಸಿದ್ದಾರೆ. ಕನ್ನಡ ಮತ್ತು ತಮಿಳು ಸೇರಿ ಎರಡು ಭಾಷೆಯಲ್ಲಿ ಏ.16ಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡುವ ಪ್ಲಾನ್ ಚಿತ್ರತಂಡಕ್ಕಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!