ಜೆಪಿ ಎಂಟರ್ಟೈನ್ಮೆಂಟ್ ವರ್ಲ್ಡ್ ಬ್ಯಾನರ್ನಲ್ಲಿ ನಿರ್ಮಾಣ ವಾಗಿರುವ “ಸ್ಕ್ರೇರಿ ಫಾರೆಸ್ಟ್” ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ಈ ಚಿತ್ರ ಫೆ. 26ಕ್ಕೆ ರಿಲೀಸ್ ಆಗಲಿದೆ. ಈ ಸಿನಿಮಾ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಮಾಧ್ಯಮದ ಮುಂದೆ ಬಂದಿದ್ದ ತಂಡ ಒಂದಷ್ಟು ಮಾಹಿತಿಯನ್ನು ಹಂಚಿಕೊಂಡಿತು.
ಮೊದಲಿಗೆ ಚಿತ್ರದ ನಿರ್ಮಾಪಕ ಜಯಪ್ರಭು ಆರ್ ಲಿಂಗಾಯತ್ ಮಾಥನಾಡಿ, ಕಳೆದ ಹಲವು ವರ್ಷಗಳಿಂದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದೇನೆ. ಇದೀಗ ಸಿನಿಮಾ ಕ್ಷೇತ್ರದಲ್ಲಿ ಏನಾದರೂ ಮಾಡಬೇಕು ಎಂಬ ಕಾರಣಕ್ಕೆ ಬಂದಿದ್ದೇನೆ. ಬಾಲಿವುಡ್ನ ಒಂದಷ್ಟು ಜನರ ಪರಿಚಯ ಇದ್ದಿದ್ದರಿಂದ ಅವರನ್ನೂ ಈ ಪ್ರಾಜೆಕ್ಟ್ನಲ್ಲಿ ಸೇರಿಸಿಕೊಂಡಿದ್ದೇನೆ.
ಇನ್ನು ಸಿನಿಮಾ ಬಗ್ಗೆ ಹೇಳುವುದಾದರೆ, ಇಲ್ಲಿ ನಾನು ಜೈ ಎಂಬ ಕಾಲೇಜು ಸ್ಟುಡೆಂಟ್ ಪಾತ್ರ ಮಾಡಿದ್ದೇನೆ. ರಿಸರ್ಚ್ ಮಾಡಲು ಕಾಡಿಗೆ ಹೋಗುವ ಯುವಕರು ಏನೆಲ್ಲ ವಿಚಿತ್ರಗಳನ್ನು ಅನುಭವಿಸುತ್ತಾರೆ ಎಂಬುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ, ಹಾರರ್ ಅಂಶದ ಜತೆಗೆ ಟ್ರಯಾಂಗಲ್ ಲವ್ಸ್ಟೋರಿಯೂ ಸಿನಿಮಾದಲ್ಲಿದೆ’ ಎಂದರು.
ಚಿತ್ರದ ನಾಯಕಿ ಟೀನಾ ಪೊನ್ನಪ್ಪ ಮಾತನಾಡಿ, ಈ ಸಿನಿಮಾದಲ್ಲಿ ನಟನೆಗೆ ಹೆಚ್ಚಿನ ಪ್ರಾಧಾನ್ಯತೆ ಇರುವ ಪಾತ್ರ ಸಿಕ್ಕಿದೆ. ಇದು ಲವ್ ಜತೆಗೆ ಹಾರರ್ ಸಿನಿಮಾ. ಹಿಂದಿ ಜತೆಗೆ ಕನ್ನಡದಲ್ಲಿ ಬರುತ್ತೆ ಅಂದಾಗ ಖುಷಿ ಆಯಿತು. ಚಿತ್ರದ ಶೇ.90 ಭಾಗದ ಶೂಟಿಂಗ್ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದಿದೆ ಎಂದರು.
ಈ ಚಿತ್ರಕ್ಕೆ ಸಂಜಯ್ ಅಭೀರ್ ನಿರ್ದೇಶನ ಮಾಡಿದ್ದಾರೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಬಾಲಿವುಡ್ ನಲ್ಲಿ ಅನುಭವ ಹೊಂದಿರುವ ಸಂಜಯ್ ನಿರ್ದೇಶನದ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅವರೇ ಬರೆದಿದ್ದಾರೆ. ಇದು ಪಕ್ಕಾ ಮನರಂಜಾನಾತ್ಮಕ ಸಿನಿಮಾ, ಹಾರರ್ , ಕಾಮಿಡಿ, ಲವ್, ಸೆಂಟಿಮೆಂಟ್ ಎಲ್ಲವನ್ನೂ ಮಿಶ್ರಣ ಮಾಡಿ ಸಿನಿಮಾ ಮಾಡಿದ್ದೇವೆ ಎಂದರು.
ಜೀತ್ ರಾಯ್ದತ್ ಈ ಚಿತ್ರದ ದ್ವಿತೀಯ ನಾಯಕ. ಪಾತ್ರದ ಬಗ್ಗೆ ಮಾತನಾಡಿ, ಒಬ್ಬ ನಟನಾಗಿ ಭಾಷೆಯ ಗಡಿ ಇರಬಾರದು. ಅದೇ ರೀತಿ ಇದೀಗ ಪ್ರೇಮಬರಹ ಬಳಿಕ ಮತ್ತೆ ಕನ್ನಡಕ್ಕೆ ಬಂದಿದ್ದೇನೆ. ಇದರಲ್ಲಿ ನಾನು ಸೆಕೆಂಡ್ ಲೀಡ್ ಮಾಡುತ್ತಿದ್ದೇನೆ. ಹಾಡುಗಳ ಸಾಹಿತ್ಯ ನನಗೆ ಅಷ್ಟಾಗಿ ಗೊತ್ತಿಲ್ಲ. ಆದರೆ, ಸಂಗೀತ ಗುನುಗುವಂತಿದೆ ಎಂದರು.
ನಟಿ ಕಲ್ಪನಾ ಎರಡನೇ ನಾಯಕಿಯಾಗಿ ನಟಿಸಿದ್ದು, ಕನ್ನಡದ ಹಲವು ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಆ ಬಗ್ಗೆ ಹೇಳಿಕೊಳ್ಳುವ ಅವರು, ಮಹಾಕಾಳಿ, ಚಂದನದಗೊಂಬೆ, ಸೇರಿ ಒಟ್ಟು 9 ಧಾರಾವಾಹಿ ಮಾಡಿದ್ದೇನೆ. ಸೀರಿಯಲ್ ಜತೆಗೆ ಸಿನಿಮಾ ಮಾಡುವ ಮನಸ್ಸಿತ್ತು. ಅದರಂತೆ ಸ್ಕೇರಿ ಫಾರೆಸ್ಟ್ ಸಿನಿಮಾ ಮಾಡಿದ್ದೇನೆ. ಅಷ್ಟೇ ವಿಶೇಷವಾಗಿದೆ ಎಂದರು.
ಬಹುಭಾಷ ನಟ ಯಶ್ ಪಾಲ್ ಶರ್ಮ ಪ್ರಮುಖಪಾತ್ರದಲ್ಲಿ ನಟಿಸಿದ್ದಾರೆ. ಕೊಡಗಿನ ಟೀನಾ ಪೊನ್ನಪ್ಪ, ಆಮ್ ರೀನ್, ಕಲ್ಪನ ಈ ಚಿತ್ರದ ನಾಯಕಿಯರು. ಅಷ್ಟೇ ಅಲ್ಲದೆ ಅನುಭವಿ ಕಲಾವಿದರ ದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ. ನಿರ್ಮಾಪಕರ ಪುತ್ರಿ ಬೇಬಿ ಪೂಜಾ ಸಹ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ.
ಕನ್ನಡದ ಯುವ ಪ್ರತಿಭೆ ಆದಿ ಹಾಗೂ ಎಲ್.ಕೆ. ಲಕ್ಷ್ಮೀಕಾಂತ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಹಿನ್ನೆಲೆ ಸಂಗೀತ ಲಕ್ಷ್ಮೀಕಾಂತ್ ಅವರದು. ಹಾಲಿವುಡ್ ನ ಜಂಗಲ್ ಬುಕ್ 1994, ಹಿಂದಿಯ ರಾಗಿಣಿ ಎಂ.ಎಂ.ಎಸ್ 2 ಸೇರಿದಂತೆ ಮುಂತಾದ ಹೆಸರಾಂತ ಚಿತ್ರಗಳ ಛಾಯಾಗ್ರಾಹಕರಾದ ನರೇನ್ ಗೇಡಿಯಾ ಅವರ ಛಾಯಾಗ್ರಹಣ, ರಾಜೇಶ್ ಶಾ ಸಂಕಲನ ಹಾಗೂ ದೀಪಕ್ ಶರ್ಮ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
Be the first to comment