ನಟ ದರ್ಶನ್ ಅಪರೂಪದ ಅತಿಥಿಯಂತೆ ಇತ್ತೀಚೆಗೆ ಕನ್ನಡ ಫಿಲ್ಮ್ ಛೇಂಬರ್ ಗೆ ಹೋಗಿದ್ದು ಎಲ್ಲರಿಗೂ ಗೊತ್ತು. ಇಷ್ಟು ವರ್ಷಗಳ ಕಾಲ ನಾನು ನಡೆದಿದ್ದೇ ದಾರಿ ಎಂಬಂತೆ ವರ್ತಿಸುತ್ತಿದ್ದ ಗಜ ಮೊನ್ನೆ ಫಿಲ್ಮ್ ಛೇಂಬರ್ ಬಳಿ ದೂರು ನೀಡಲು ಹೋಗಿತ್ತು. ಅದು ಕನ್ನಡ ಚಿತ್ರರಂಗದವರ ಮೇಲೆ ಅಲ್ಲ ಅನ್ನೋದು ಪುಣ್ಯ. ಅಸಲಿಗೆ ದರ್ಶನ್ ದೂರು ನೀಡಲು ಹೋಗಿದ್ದು ತೆಲುಗು ಚಿತ್ರರಂಗದ ಮೇಲೆ. ಅಲ್ಲಿ ತಮ್ಮ ರಾಬರ್ಟ್ ಚಿತ್ರದ ಬಿಡುಗಡೆಗೆ ತೊಂದರೆ ಆಗುತ್ತಿದೆ ಅನ್ನೋದು ದರ್ಶನ್ ಅವರ ಅಳಲಾಗಿತ್ತು. ಅದನ್ನು ಹೇಳಿಕೊಂಡು ನಂತರ ತೆಲುಗು ತಮಿಳಿನವರನ್ನು ನೋಡಿ ಕಲಿಯಿರಿ, ಅವರಲ್ಲಿರೋ ಅಭಿಮಾನ ನಮ್ಮಲ್ಲಿ ಒಬ್ಬರಿಗೂ ಇಲ್ಲ ಎಂದು ದರ್ಶನ್ ಹೇಳಿಕೊಂಡು ಗೋಳಾಡಿದ್ದೂ ಆಗಿತ್ತು. ಆದರೆ ಅಯ್ಯೋ, ನಿಮ್ಮ ಸಿನಿಮಾ ರಿಲೀಸ್ ಆಗದೇ ಇರೋದಕ್ಕೂ ಕನ್ನಡಿಗರ ಕನ್ನಡಾಭಿಮಾನಕ್ಕೂ ಸಂಬಂಧ ಏನಪ್ಪ ಅಂತ ಹಲವು ಕನ್ನಡಿಗರು ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಆಯಿತು.
ಅಸಲಿಗೆ ಅಲ್ಲಿ ರಾಬರ್ಟ್ ಬಿಡುಗಡೆಯ ದಿನವೇ ತೆಲುಗಿನ 4 ಚಿತ್ರಗಳು ಬಿಡುಗಡೆಗೆ ತಯಾರಾಗಿ ಕೂತಿದ್ದಾವಂತೆ. ಹಾಗಾಗಿ ನಮಗೆ ಚಿತ್ರಮಂದಿರ ಸಮಸ್ಯೆ ಆಗುತ್ತೆ ಅಂತ ಅಲ್ಲಿನ ಛೇಂಬರ್ ನವರು ರಾಬರ್ಟ್ ಬಿಡುಗಡೆಗೆ ಒಪ್ಪಿಲ್ಲ. ಆದರೆ ಅದನ್ನೇ ಕನ್ನಡಾಬಿಮಾನಕ್ಕೆ ತಳುಕು ಹಾಕಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಲು ಹೊರಟಿದ್ದರು ದರ್ಶನ್. ಆದರೆ ಅದು ನೆಟ್ಟಿಗರನ್ನು ಕೆರಳಿಸಿತ್ತು. ತಮ್ಮ ಚಿತ್ರಕ್ಕೆ ಬಿಡುಗಡೆ ಆಗುವ ಅವಕಾಶ ಸಿಗದೇ ಇದ್ದುದಕ್ಕೆ ಹೀಗೆ ನೇರವಾಗಿ ಕನ್ನಡಿಗರನ್ನು ಟಾರ್ಗೆಟ್ ಮಾಡಿ ಮಾತಾಡಿ ಎಲ್ಲರ ಅಸಮಾಧಾನಕ್ಕೆ ಕಾರಣವಾಗಿದ್ದರು ದರ್ಶನ್. ನಿಮ್ಮ ಸಿನಿಮಾಗೆ ತೊಂದರೆ ಆಯಿತು ಅಂತ ಕನ್ನಡಿಗರ ಭಾಷಾಭಿಮಾನವನ್ನ ಪ್ರಶ್ನೆ ಮಾಡೋದು ಎಷ್ಟು ಸರಿ ಎಂದು ನೆಟ್ಟಿಗರು ದರ್ಶನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದೂ ಆಯಿತು. ಫೇಸ್ ಬುಕ್ ನಲ್ಲಿ ಸಕ್ರಿಯರಾಗಿರುವ, ಬೆಂಗಳೂರಿನಲ್ಲಿ ಡಿವೈಎಸ್ ಪಿ ಹುದ್ದೆಯಲ್ಲಿರುವ ಕಿಶೋರ್ ಭರಣಿ ಅಂಥವರು ಕೂಡ ದರ್ಶನ್ ಅವರ ಹೇಳಿಕೆಗೆ ರಿಯಾಕ್ಟ್ ಮಾಡಿದ್ದರು.“KGF -2 ಚಿತ್ರಕ್ಕಾಗಿ ಆಂಧ್ರದಲ್ಲಿ, ತಮಿಳ್ನಾಡಿನಲ್ಲಿ ಥಿಯೇಟರ್ ಕೊಡಲು ಕಾಯುತ್ತ ಕುಳಿತಿದ್ದಾರೆ. ಚೆನ್ನಾಗಿ ಸಿನಿಮಾ ಮಾಡಿದರೆ ಎಲ್ಲಾ ಕಡೆ ಡಿಮ್ಯಾಂಡ್ ಇದೆ. ಡಬ್ಬಾ ಮೂವಿಗಳನ್ನು ಮಾಡಿದರೆ, ನೀನು ಯಾವೂರ ದಾಸಯ್ಯ ಎಂದು ಅವರು ಕೇಳುತ್ತಾರೆ !! ಕನ್ನಡಿಗರಿಗೆ ಭಾಷಾಭಿಮಾನ ಬೇರೆಯವರಿಗಿಂತ ಹೆಚ್ಚು ಇದೆ.ನೀವು ಎಷ್ಟೇ ಕೆಟ್ಟ ಚಿತ್ರಗಳನ್ನು ಕೊಟ್ಟರೂ ಅವುಗಳನ್ನು ಸಹ ನೋಡಿ ನಿಮ್ಮನ್ನೂ ಕೂಡ ಸ್ಟಾರ್ ಮಾಡಿದಾರಲ್ಲ ಅದುವೇ ಕನ್ನಡಿಗರ ಅಭಿಮಾನಕ್ಕೆ ಸಾಕ್ಷಿ” ಎಂದು ದರ್ಶನ್ ಅವರಿಗೆ ತಿರುಗೇಟು ಕೊಟ್ಟಿದ್ದರು.
ಸದ್ಯಕ್ಕೆ ಈ ಎಲ್ಲ ಪ್ರಹಸನ ಮುಗಿದಿದ್ದು ಕರ್ನಾಟಕ ಫಿಲ್ಮ್ ಛೇಂಬರ್ ಮತ್ತು ತೆಲುಗು ಸಿನಿಮಾ ಛೇಂಬರ್ ನಡುವೆ ಮಾತುಕತೆ ಆಗಿದೆ. ಈಗ ಅಲ್ಲಿ ರಾಬರ್ಟ್ ಸಿನಿಮಾವನ್ನು ಬಿಡುಗಡೆ ಮಾಡಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ದೊರೆತಿದೆಯಂತೆ. ಈಗ ತಮ್ಮ ಚಿತ್ರದ ಬಿಡುಗಡೆಗೆ ಯಾವ ಅಡ್ಡಿಯೂ ಇಲ್ಲವಾದ್ದರಿಂದ ದರ್ಶನ್ ಅವರಿಗೆ ಈಗ ಕನ್ನಡಿಗರಲ್ಲಿ ಕನ್ನಡಾಭಿಮಾನ ಕಾಣುತ್ತಿದೆಯಾ, ಇಲ್ಲವಾ ಎಂದು ಯಾರಾದರೂ ಕೇಳಬೇಕಿದೆ.
Be the first to comment