‘ಬೈಒನ್ ಗೆಟ್‍ಒನ್ ಫ್ರೀ’ ಚಿತ್ರದ ಟೀಸರ್ ಬಿಡುಗಡೆ

ಕನ್ನಡದಲ್ಲಿ ವಿಭಿನ್ನ ಶೈಲಿಯ ಚಿತ್ರಗಳು, ಬಗೆಬಗೆಯ ಶೀರ್ಷಿಕೆಯೊಂದಿಗೆ ನಿರ್ಮಾಣವಾಗುತ್ತಿವೆ. ಅಂಥಾ ಚಿತ್ರಗಳ ಸಾಲಿಗೆ ಸೇರಲಿರುವ ಮತ್ತೊಂದು ಚಿತ್ರ ಬೈಒನ್ ಗೆಟ್‍ಒನ್ ಫ್ರೀ. ಹರೀಶ್ ಅನಿಲ್‍ಗಾಡ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಧುಮಿಥುನ್ ಹಾಗೂ ಮನುಮಿಲನ್ ಎಂಬ ಅವಳಿ ಸಹೋದರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅಲ್ಲದೆ ಇವರೇ ಚಿತ್ರದ ನಿರ್ಮಾಪಕರು ಕೂಡ. ಈ ಚಿತ್ರದ ಟೀಸರ್ ಅನಾವರಣ ಕಾರ್ಯಕ್ರಮ ಚಲನಚಿತ್ರ ಕಲಾವಿದರ ಸಂಘದ ಆವರಣಲ್ಲಿ ನಡೆಯಿತು. ವಿಶೇಷ ಎಂದರೆ ಈ ಮೂವರೂ ಉಷಾ ಭಂಡಾರಿ ಅವರ ಸಿನಿಮಾ ಶಾಲೆಯಲ್ಲಿ ಕಲಿತವರು. ಅದೇ ಕಾರಣಕ್ಕೆ ಈ ಚಿತ್ರದಲ್ಲಿ ಮದರ್ ಸೆಂಟಿಮೆಂಟ್ ಇರೋ ಪಾತ್ರದಲ್ಲಿ ಉಷಾ ಭಂಡಾರಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಟೀಸರನ್ನು ಬಿಡುಗಡೆ ಮಾಡಿದ ನಂತರ ಉಷಾ ಭಂಡಾರಿ ಅವರು ಮಾತಾಡುತ್ತ ಮಧು, ಮನು, ಹರೀಶ ನನ್ನ ಹಳೇ ವಿದ್ಯಾರ್ಥಿಗಳು. ಈ ಸಿನಿಮಾದಲ್ಲಿ ಬಹಳಷ್ಟು ರಹಸ್ಯಗಳಿವೆ, ಮಿಸ್ಟ್ರಿಗಳಿವೆ, ನನ್ನ ಪಾತ್ರವೂ ಸಹ ಸಸ್ಪೆನ್ಸ್ ಆಗಿದೆ.

 

ಈ ಅವಳಿ ಹುಡುಗರ ನಡವಳಿಕೆಗಳು ಒಂದೇ ಆಗಿದ್ದರೂ ಒಬ್ಬ ಸ್ಲೋ ಮತ್ತೊಬ್ಬ ಫಾಸ್ಟ್. ಹರೀಶ ನನ್ನ ಶಾಲೆಗೆ ಕುಕ್ ಆಗಿ ಬಂದಿದ್ದ, ಈಗ ನಿರ್ದೇಶಕನಾಗಿದ್ದಾನೆ, ತುಂಬಾ ಖುಷಿಯಾಗ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. ಕನ್ನಡ ಫಿಲಂ ಚೇಂಬರ್ ಅಧ್ಯಕ್ಷ ಕೃಷ್ಣೇಗೌಡ, ರಾಮಾ ರಾಮಾ ರೇ ಖ್ಯಾತಿಯ ಸತ್ಯಪ್ರಕಾಶ್, ಮಹೇಶ್‍ಕುಮಾರ್(ಅಯೋಗ್ಯ) ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಟೀಸರ್‍ನಲ್ಲಿ ಈ ಹುಡುಗರ ಶ್ರಮ ಎದ್ದು ಕಾಣುತ್ತದೆ. ಈಚಿನ ದಿನಗಳಲ್ಲಿ ಹೊಸ ಹುಡುಗರು ಹೊಸ ರೀತಿಯ ಕಥೆಗಳನ್ನು ಹೇಳುವ ಮೂಲಕ ಹೊಸ ಕಲ್ಪನೆಗಳನ್ನು ಕಟ್ಟಿಕೊಡುತ್ತಿದ್ದಾರೆ ಎಂದು ಹೇಳಿದರು.

ನಂತರ ನಿರ್ಮಾಪಕ ಹಾಗೂ ನಾಯಕನಟ ಮಧು ಮಾತನಾಡುತ್ತ ಈ ಪ್ರಾಜೆಕ್ಟ್ 4 ವರ್ಷದ್ದು, ಹರೀಶ್, ಸ್ನೇಹಿತರ ಮೇಲೆ ಮಾಡಿರುವ ಕಥೆ ಚೆನ್ನಾಗಿದೆ ಎಂದರು. ನನ್ನ ಎಲ್ಲಾ ಯೋಚನೆಗಳಿಗೂ ನನ್ನ ತಮ್ಮ ಆಲೋಚನೆಯಾಗಿದ್ದ. ಬೈ ಟಿಕೆಟ್ 100% ಎಂಟರ್‍ಟೈನ್‍ಮೆಂಟ್ ಫ್ರೀ ಎಂದು ಹೇಳಿದರು.

ಚಿತ್ರದ ನಾಯಕಿ ರೋಷನಿ ತೇಲ್ಕರ್ ಮಾತನಾಡುತ್ತ ನನ್ನ ಪ್ರೊಫೆಷನ್ನೇ ಬೇರೆ, ಅನಿರೀಕ್ಷಿತವಾಗಿ ಈ ತಂಡದಲ್ಲಿ ಸೇರಿಕೊಂಡೆ. ಸೀರಿಯಲ್‍ಗಳಲ್ಲಿ ನೆಗೆಟಿವ್ ಪಾತ್ರಗಳನ್ನೇ ಮಾಡಿಕೊಂಡು ಬಂದಿದ್ದ ನನಗೆ ಈ ಆಫರ್ ಬಂತು ಎಂದು ಹೇಳಿದರು, ಮತ್ತೊಬ್ಬ ನಟಿ ರಿಶಿತಾ ಮಲ್ನಾಡ್ ಮಾತನಾಡುತ್ತ ಚಿತ್ರದಲ್ಲಿ ಸಸ್ಪೆನ್ಸ್, ಥ್ರಿಲ್ಲರ್, ಲವ್ ಎಲ್ಲಾ ಇದೆ. ಮುರುಡೇಶ್ವರದಲ್ಲಿ ಚಿತ್ರೀಕರಣ ಮಾಡಿದ್ದಂತೂ ಟ್ರಿಪ್ ಥರ ಇತ್ತು ಎಂದು ಶೂಟಿಂಗ್ ಅನುಭವಗಳನ್ನು ಹಂಚಿಕೊಂಡರು.

ಮನು ಮಾತನಾಡಿ ಚಿತ್ರದಲ್ಲಿ ಕಿಶೋರ್ ಅವರದ್ದು ಒಬ್ಬ ಪೋಸ್ಟ್‍ಮಾನ್ ಪಾತ್ರ. ಚಿತ್ರಕಥೆಯಲ್ಲಿ ಅವರ ಪಾತ್ರವೇ ಪ್ರಮುಖವಾಗಿದೆ ಎಂದರು, ಪ್ರಥಮಾರ್ಧದಲ್ಲಿ ಮೈಸೂರಿನಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರ ಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, ಕಮರ್ಷಿಯಲ್ ಎಲಿಮೆಂಟ್ ಹೊಂದಿರುವ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ ಇದಾಗಿದೆ.

ಹುಡುಗಾಟದಲ್ಲಿ ಶುರುವಾಗುವ ಅವಳಿ ಜವಳಿಯ ಆಟಗಳು ದ್ವಿತೀಯಾರ್ಧದಲ್ಲಿ ಗಂಭೀರ ಸ್ವರೂಪ ಪಡೆಯುತ್ತಾ, ಒಂದು ಹುಡುಕಾಟದಲ್ಲಿ ಕೊನೆಯಾಗುತ್ತದೆ ಚಿತ್ರದ ಸಂಗೀತ ನಿರ್ದೇಶಕರಾಗಿ ದಿನೇಶ್‍ಕುಮಾರ್, ಹಿನ್ನೆಲೆ ಸಂಗೀತವನ್ನು ಅನಿಲ್ ಸಿಜೆ ಮಾಡಿದ್ದಾರೆ. ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್ ರಾವ್ ಕ್ಯಾಮೆರಾವರ್ಕ್ ಮಾಡಿದ್ದಾರೆ.

ರಾಜಶೇಖರ್‍ರಾವ್, ವಿಜಯೇಂದರ್, ಮುತ್ತು ಹಾಗೂ ಶಿವು ಸಾಹಿತ್ಯ ರಚಿಸಿದ್ದಾರೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಷ್ಯಗಳನ್ನು ಸೆರೆಹಿಡಿದಿದ್ದಾರೆ. ಬಲ ರಾಜವಾಡಿ, ಪ್ರಶಾಂತ್ ರಾಯ್ ಉಳಿದ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!