ಕೋವಿಡ್ ನೆರಳಿನಲ್ಲಿ ಬಿಡುಗಡೆ ಆಗಿ 100 ದಿವಸ ಸಂಪೂರ್ಣ, ಶೇಖಡ 50 ರಷ್ಟು ಪ್ರೇಕ್ಷಕರ ಅನುಮತಿ ನಿಯಮ ಇಟ್ಟುಕೊಂಡು ಮಾಡಿದ್ದು ಯಾವುದಾದರೂ ಸಿನಿಮಾ ಇದ್ದರೆ ಅದು ಕನ್ನಡ ಸಿನಿಮಾ ‘5 ಅಡಿ 7 ಅಂಗುಲ’. ಮಾರ್ಚ್ 13 ರಂದು ಒಂದು ದಿವಸ ಆಮೇಲೆ ಅಕ್ಟೋಬರ್ 15 ರಂದು ಬಿಡುಗಡೆ ಮಾಡಿಕೊಂಡ ಈ ಸಿನಿಮಾ ಕೆಲವು ದಿವಸಗಳ ಹಿಂದೆ ಬೆಂಗಳೂರಿನ ಪಿ ವಿ ಆರ್ ಒರಿಯಾನ್ ಮಾಲ್ ಅಲ್ಲಿ 100 ನೇ ದಿವಸ ಪ್ರದರ್ಶನದ ಸಮಾರಂಭವನ್ನು ಹಿರಿಯರ ಸಮ್ಮುಖದಲ್ಲಿ ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು ಆಚರಿಸಿಕೊಂಡಿದ್ದಾರೆ.
ಅಚ್ಚುಕಟ್ಟಾದ 100 ನೇ ದಿನದ ಸಂಭ್ರಮದಲ್ಲಿ ನಿರ್ದೇಶಕರುಗಳಾದ ಪಿ ಎಚ್ ವಿಶ್ವನಾಥ್, ಪಿ ಶೇಷಾದ್ರಿ, ಗುರುಪ್ರಸಾದ್, ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ಜೈರಾಜ್, ನಿರ್ಮಾಪಕ ವೆಂಕಟೇಶ್, ನಟ ಸಚಿನ್ ಸಹ ಹಾಜರಿದ್ದು ನಿರ್ದೇಶಕ ಹಾಗೂ ನಿರ್ಮಾಪಕ ನಿತ್ಯಾನಂದ ಪ್ರಭು ಅವರಿಗೆ ಅಭಿನಂದನೆ ಸಲ್ಲಿಸಿದರು. ಇಡೀ ಚಿತ್ರ ರಂಗವೇ ಬೇಷ್ ಅನ್ನುವ ಹಾಗೆ ಮತ್ತು ತಾಳ್ಮೆ, ಶ್ರದ್ದೆ, ಗಾಡವಾದ ನಂಬಿಕೆ ಹೊತ್ತ ನಿತ್ಯಾನಂದ್ ಪ್ರಭು ಅವರ ಮೊದಲ ಪ್ರಯತ್ನದಲ್ಲಿ ‘ದೇವರ ಹೆಜ್ಜೆ ಹಾಕಿದ್ದಾರೆ’ ಎಂದು ಬಣ್ಣಿಸಿದವರು ಹಿರಿಯ ನಿರ್ದೇಶಕ ಪಿ ಎಚ್ ವಿಶ್ವನಾಥ್. ಯಾರೊಬ್ಬರು ಧೈರ್ಯ ಮಾಡದೆ ಇದ್ದಾಗ ನಿತ್ಯಾನಂದ ಪ್ರಭು ಅಂತಹವರು ಒಂದು ಬೆಂಚ್ ಮಾರ್ಕ್ ಹಾಕಿಕೊಟ್ಟಿದ್ದಾರೆ. ಸಂಕಷ್ಟದ ಸಮಯದಲ್ಲಿ ಅವರು ಸಿನಿಮಾ ಬಿಡುಗಡೆ ಮಾಡಿದ್ದಾರೆ.
ತ್ರಿವೇಣಿ ಚಿತ್ರಮಂದಿರದಲ್ಲಿ 52 ದಿವಸ ಮತ್ತು ಪಿ ವಿ ಆರ್ ಒರಿಯಾನ್ ಮಾಲ್ ಅಲ್ಲಿ 100ನೇ ದಿವಸದ ಪ್ರದರ್ಶನಕ್ಕೆ ‘5 ಅಡಿ 7 ಅಂಗುಲ’ ಕಾಲಿಟ್ಟಿದೆ ಎಂದು ಶ್ಲಾಘಿಸಿದರು ನಿರ್ದೇಶಕರಾದ ಪಿ ಎಚ್ ವಿಶ್ವನಾಥ್. ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಮಾತನಾಡುತ್ತಾ 100 ದಿವಸ ಪೂರೈಸಿವುರುದಕ್ಕೆ ಹೆಮ್ಮೆ ಪಡುವ ಕ್ಷಣ ಎಂದು ಹೇಳುತ್ತಾ ಈ ನಿರ್ದೇಶಕರಿಗೆ ರಾಷ್ಟ್ರ ಹಾಗೂ ಅಂತರರಾಷ್ಟ್ರ ಖ್ಯಾತಿ ಸಿಕ್ಕುವಂತಹ ಸಿನಿಮಾ ತಯಾರಾಗಲಿ ಎಂದರು. ಇದೆ ಸಮಯದಲ್ಲಿ ಕೇಂದ್ರ ಸರ್ಕಾರ ಬಹಳ ಬೇಗ ಚಿತ್ರ ಮಂದಿರದಲ್ಲಿ 100 ಪರ್ಸೆಂಟ್ ಪ್ರೇಕ್ಷಕ ಆಸೀನ ಆಗುವುದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ತಿಳಿಸಿದರು.
ಜನಪ್ರಿಯ ನಿರ್ದೇಶಕ ಗುರುಪ್ರಸಾದ್ ವಾಣಿಜ್ಯ ಮಂಡಳಿ ಅಧ್ಯಕ್ಷರ ಮಾತನ್ನು ಒಪ್ಪುತ್ತ, ಬೇರೆ ಎಲ್ಲ ಕಡೆ ಜನ ಸಮುದಾಯಕ್ಕೆ ಕಡಿವಾಣ ಇಲ್ಲ ಆದರೆ ಚಿತ್ರಮಂದಿರದಲ್ಲಿ ಮಾತ್ರ ಯಾಕೆ ಎಂದು ಪ್ರಶ್ನಿಸಿದರು. ನಿರ್ದೇಶಕ ನಿತ್ಯಾನಂದ ಪ್ರಭು ಅವರ ಕೆಲಸವನ್ನು ಹಾಗೂ ಧೈರ್ಯವನ್ನು ಮೆಚ್ಚಿಕೊಂಡ ಗುರುಪ್ರಸಾದ್ 6 ಅಡಿ 2 ಅಂಗುಲ ನಟರುಗಳ (ಸುದೀಪ್ ಹಾಗೂ ದರ್ಶನ್) ಸಿನಿಮಾ ಮಾಡುವಂತೆ ಆಗಲಿ ಎಂದು ಹರಸಿದರು. ಚಿತ್ರದಲ್ಲಿ ಕಾಗೆ ಸಹ ಪಾತ್ರ ಮಾಡಿದೆ. ನಾನು ಅದಕ್ಕೆ ಪ್ರಶಸ್ತಿ ಸಿಗಬಹುದು ಎಂದು ಒತ್ತಾಯ ಮಾಡುತ್ತೇನೆ ಎಂದರು ಗುರುಪ್ರಸಾದ್.
ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ ಶೇಷಾದ್ರಿ ‘5 ಅಡಿ 7 ಅಂಗುಲ’ ಸಿನಿಮಾ ನೋಡಿಲ್ಲ, ಈ ಕಾರ್ಯಕ್ರಮ ಆದ ಮೇಲೆ ನೋಡಲಿದ್ದೇನೆ ಎಂದು ಹೇಳಿಕೊಳ್ಳುತ್ತ ಇಂದಿನ ಸಮಾರಂಭದಲ್ಲಿ ಪಿ ಎಚ್ ವಿಶ್ವನಾಥ್, ಗುರುಪ್ರಸಾದ್ ಹಾಗೂ ಈಗ ನಿತ್ಯಾನಂದ್ ಪ್ರಭು 100 ದಿವಸಗಳ ಸಿನಿಮಾ ನೀಡಿದ್ದಾರೆ, ನಾನೊಬ್ಬ 100 ದಿವಸದ ಸಿನಿಮಾ ನೀಡಿಲ್ಲ ಎಂದು ಹೇಳುತ್ತಾ ಈ ಚಿತ್ರಕ್ಕೆ ಇನ್ನೂ ಮುಂದೆ 100 ಅಡಿ 100 ಅಂಗುಲ ಎಂದು ಹೇಳುವುದು ಸೂಕ್ತ ಎಂದರು.
ಸಮಾರಂಭದ ಅಂತ್ಯದಲ್ಲಿ ನಿರ್ದೇಶಕ ಕಂ ನಿರ್ಮಾಪಕ ನಿತ್ಯಾನಂದ ಪ್ರಭು ಮಾತನಾಡುತ್ತಾ ಪ್ರೇಕ್ಷಕರು ಅಭಿಮಾನದಿಂದ ಸಿನಿಮಾ ನೋಡಿದ್ದು, ಚಿತ್ರ ಮಂದಿರಗಳ ಸಹಾಯ ನನ್ನ ಕನಸಿನ ಸಿನಿಮಾ ‘5 ಅಡಿ 7 ಅಂಗುಲ’ ಸಿನಿಮಾಕ್ಕೆ ಮೆಚ್ಚುಗೆ ಸಿಗುವಂತೆ ಆಗಿದೆ. ಸಿನಿಮಾಕ್ಕೆ ಬಂದ ಮೇಲೆ ಕುತೂಹಲ ಇರಲೇಬೇಕಲ್ಲ ಅದನ್ನು ಸಿನಿಮಾದಲ್ಲಿ ಕಾಣಬಹುದು. ಇಂತಹ ಕೋರೋನಾ ಕಾಲದಲ್ಲಿ, ಶೇಖಡ 50 ಆಸನ ವ್ಯವಸ್ಥೆ ಪರಿಸ್ಥಿತಿಯಲ್ಲಿ 100 ದಿವಸ ಕನಸಿನ ಮಾತೆ ಆಗಿತ್ತು ಎಂದು ಅವರು ಹೇಳಿಕೊಂಡರು. ಅದು ನನಸಾಗಿರುವುದಕ್ಕೆ ನನ್ನ ತಂಡ ಹಾಗೂ ನನ್ನ ಹಿರಿಯರ ಜೊತೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಹಾಯ ಸಹ ದೊರಕಿತು ಎಂದು ವಿವರಿಸಿದರು.
Be the first to comment