ಕಾಮಿಡಿ ಪಾತ್ರಗಳ ಮೂಲಕ ಕನ್ನಡಿಗರ ಮನ ಗೆದ್ದಿರುವ ಬಿರಾದಾರ್ ’90 ಬಿಡಿ ಮನೀಗ್ ನಡಿ’ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದಾರೆ.
ಇದು ಬಿರಾದಾರ್ ನಟನೆಯ 500ನೇ ಚಿತ್ರವಾಗಿದೆ. ಇತ್ತೀಚೆಗೆ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿದೆ.
ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಕಥೆ ಬರೆದು, ಜಂಟಿಯಾಗಿ ನಿರ್ದೇಶಿಸಿರುವ ಈ ಚಿತ್ರಕ್ಕೆ ರತ್ನಮಾಲ ಬಾದರದಿನ್ನಿ ಬಂಡವಾಳ ಹೂಡಿದ್ದಾರೆ.
ಇತ್ತೀಚೆಗೆ ಈ ಸಿನಿಮಾದ ಸಿಂಗಲ್ ಕಣ್, ಡಬಲ್ ಹಾರ್ನ್ ಎಂಬ ಹಾಡಿಗೆ ಬಿರಾದಾರ್ ಹೆಜ್ಜೆ ಹಾಕಿದ್ದಾರೆ. ಬಿರಾದಾರ್ ಜೊತೆಗೆ ನಾಯಕಿ ನೀತಾ ಮೈಂದರಗಿಗೆ ಭೂಷಣ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಶಿವು ಬೆರಗಿ ರಚಿಸಿರುವ ಈ ಹಾಡಿಗೆ ಸ್ಟೆಪ್ ಹಾಕಲು ಬಿರಾದಾರ್ ಐದು ದಿನಗಳ ಪ್ರಾಕ್ಟೀಸ್ ಮಾಡಿದ್ದಾರೆ.
ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿರುವ ರಂಗಭೂಮಿ ಕಲಾವಿದೆ ನೀತು. ಈ ಚಿತ್ರದಲ್ಲಿ ವೈಜನಾಥ್ ಬಿರಾದಾರ್ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಡ್ಯಾನ್ಸ್ ಜೊತೆಗೆ ಫೈಟ್ ಮಾಡಿದ್ದಾರೆ ಬಿರಾದಾರ್.
ವೈಜನಾಥ್ ಬಿರಾದಾರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಪೇಪರ್ ಆಯುವ ಪಾತ್ರ ಮಾಡಿದ್ದೀನಿ. ಈ ಸಿನಿಮಾದಲ್ಲಿ ಸಂದೇಶ ಇದೆ. ನಿರ್ದೇಶಕರು, ನಿರ್ಮಾಪಕರು ನಮ್ಮಂಥ ಕಲಾವಿದರು ಬೆಳೆಯೋದಿಕ್ಕೆ ಕಾರಣ. ಜೊತೆಗೆ ಕಲ್ಲಿನಂಥ ಕಲಾವಿದನನ್ನು ಶಿಲ್ಪಿ ಮಾಡುವ ತಾಖತ್ ಇರೋದು ನಿರ್ದೇಶಕನಿಗೆ ಎಂದು ಹೇಳಿದರು.
ಚಿತ್ರ ಟ್ರೈಲರ್ ಹಾಗು ಹಾಡುಗಳಿಂದ ಗಮನ ಸೆಳೆಯುತ್ತಿದೆ.
ಉತ್ತಮ ಸಂದೇಶ ಹೇಳುವಂತ ಕಥಾಹಂದರವನ್ನಿಟ್ಟುಕೊಂಡು ಉತ್ತರ ಕರ್ನಾಟಕ ಶೈಲಿಯಲ್ಲಿ ಕಥೆ ಹೇಳಲು ಹೊರಟ್ಟಿದ್ದೇವೆ. ಎಂಭತ್ತು ಭಾಗದಷ್ಟು ಸಂಭಾಷಣೆ ಉತ್ತರ ಕರ್ನಾಟಕ ಶೈಲಿಯಲ್ಲಿರುತ್ತದೆ. ಹಾಗಾಗಿ ನಮಗೆ ಉತ್ತರ ಕರ್ನಾಟಕದ ಕಲಾವಿದನೇ ಬೇಕಾಗಿತ್ತು. ಆಗ ಬಿರಾದಾರ್ ಅವರನ್ನು ಆಯ್ಕೆ ಮಾಡಿಕೊಂಡೆವು. ಅವರ 500 ನೇ ಚಿತ್ರವನ್ನು ನಿರ್ದೇಶಿಸುತ್ತಿರುವುದು ಸಂತೋಷವಾಗಿದೆ ಎಂದು ನಿರ್ದೇಶಕರಾದ ಉಮೇಶ್ ಬಾದರದಿನ್ನಿ ಹಾಗೂ ನಾಗರಾಜ ಅರೆಹೊಳೆ ಹೇಳಿದ್ದಾರೆ.
__
Be the first to comment