ಚಿತ್ರ: 45
ನಿರ್ಮಾಪಕರು: ರಮೇಶ್ ರೆಡ್ಡಿ
ನಿರ್ದೇಶಕರು: ಅರ್ಜುನ್ ಜನ್ಯಾ
ಕಲಾವಿದರು: ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ. ಶೆಟ್ಟಿ, ಕೌಸ್ತುಭ ಮಣಿ, ಜೀಶು ಸೆನ್‌ಗುಪ್ತಾ, ಮಾನಸಿ ಸುಧೀರ್, ಮೊಟ್ಟೈ ರಾಜೇಂದ್ರನ್, ಪ್ರಮೋದ್ ಶೆಟ್ಟಿ, ಮಂಜು ಪಾವಗಡ ಮುಂತಾದವರು.
ಸಂಭಾಷಣೆ: ಅನಿಲ್ ಕುಮಾರ್
ಸಂಗೀತ: ಅರ್ಜುನ್ ಜನ್ಯಾ
ಛಾಯಾಗ್ರಹಣ: ಸತ್ಯಾ ಹೆಗಡೆ
ನಿರ್ದೇಶನ: ಅರ್ಜುನ್ ಜನ್ಯಾ
ರೇಟಿಂಗ್: 4/5
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಾಜ್ ಬಿ ಶೆಟ್ಟಿ. ಮೂವರ ಸಂಗಮವನ್ನು ಸಂಭ್ರಮವಾಗಿಸಿರುವ ಚಿತ್ರ 45.
ವಿನಯ್ ಎನ್ನುವ ಐಟಿ ಉದ್ಯೋಗಿಗೆ ಎದುರಾಗುವ ಅಪಘಾತದಿಂದ ಸಿನಿಮಾ ಶುರುವಾಗುತ್ತದೆ. ಈ ಅಪಘಾತ ಕನಸೇ? ಅಥವಾ ನಿಜವೇ? ವಿನಯ್ ಸಾವಿಗೆ 45 ದಿನಗಳ ಗಡುವು ನೀಡುವ ರಾಯಪ್ಪ ಯಾರು? ಆತ ಕಂಡುಕೊಳ್ಳುವ ಪರಿಹಾರ ಏನು? ಹೀಗೆ ರೋಮಾಂಚಕಾರಿಯಾಗಿ ಸಾಗುವ ಕಥೆಯಲ್ಲಿ ಎಂಟ್ರಿಯಾಗುವ ಶಿವಪ್ಪ ಯಾರು? ಶಿವಪ್ಪನ ಶಕ್ತಿ ಏನು? ಇವೆಲ್ಲಕ್ಕೂ ರಸಮಯವಾಗಿ ಉತ್ತರ ನೀಡಿರುವ ಚಿತ್ರವೇ 45.
ಐಟಿ ಉದ್ಯೋಗಿ ವಿನಯ್ ಆಗಿ ರಾಜ್ ಬಿ ಶೆಟ್ಟಿ ನಟಿಸಿದ್ದಾರೆ. ವಿನಯ್ ತಾಯಿಯ ಪಾತ್ರವನ್ನು ನಟಿ ಮಾನಸಿ ಸುಧೀರ್ ನಿರ್ವಹಿಸಿದ್ದಾರೆ. ಆರಂಭದಲ್ಲೇ ನಡೆಯುವ ಅಪಘಾತದೊಂದಿಗೆ ಆಘಾತದಲ್ಲಿ ಕಳೆಯುವ ಪಾತ್ರಕ್ಕೆ ರಾಜ್ ಜೀವ ತುಂಬಿದ್ದಾರೆ. ಆದರೆ ರಾಜ್ ಪಾತ್ರಕ್ಕೆ ಗೆಲುವಿನ ಜೀವಕಳೆ ತುಂಬಲು ಶಿವಪ್ಪನೇ ಎಂಟ್ರಿ ನೀಡಬೇಕಾಗುತ್ತದೆ. ಶಿವಪ್ಪನಾಗಿ ಸೆಂಚುರಿ ಸ್ಟಾರ್ ಶಿವಣ್ಣ ಗ್ರ್ಯಾಂಡ್ ಎಂಟ್ರಿಕೊಟ್ಟಿದ್ದಾರೆ. ರಾಜ್ ಬಿ ಶೆಟ್ಟಿ ಪಾತ್ರಕ್ಕೆ 45 ದಿನಗಳ ಸಾವಿನ ಗಡುವು ನೀಡುವ, ನೀಡಿ ಕಾಡುವ ರಾಯಪ್ಪನ ಪಾತ್ರವನ್ನು ರಿಯಲ್ ಸ್ಟಾರ್ ಉಪೇಂದ್ರ ಅಭಿನಯಿಸಿದ್ದಾರೆ.
ಫ್ಯಾಂಟಸಿ ತುಂಬಿದ ಚಿತ್ರದಲ್ಲಿ ಗರುಡಪುರಾಣದಿಂದ ಪ್ರೇರಣೆಯಾದ ಅಂಶಗಳನ್ನು ತೋರಿಸಲಾಗಿದೆ. ಶಿವರಾಜ್ ಕುಮಾರ್ ವಿವಿಧ ಅವತಾರಗಳಲ್ಲಿ ಕಾಣಿಸಿಕೊಳುವ ದೃಶ್ಯವಂತೂ ಮೈ ರೋಮಾಂಚನಗೊಳಿಸುತ್ತದೆ. ಅದರಲ್ಲೂ ಸ್ತ್ರೀ ವೇಷದಲ ಕಾಣಿಸಿದಾಗ ಸಿಳ್ಳೆ, ಚಪ್ಪಾಳೆ ಮುಗಿಲು ಮುಟ್ಟುತ್ತದೆ.
ಚಿತ್ರದಲ್ಲಿರುವ ಮೂರು ಮಂದಿ ಸ್ಟಾರ್ ಕಲಾವಿದರಿಗೆ ತಕ್ಕಂಥ ಪಾತ್ರಗಳನ್ನೇ ನೀಡಿರುವ ನಿರ್ದೇಶಕ ಅರ್ಜುನ್ ಜನ್ಯ ಮೊದಲ ಪ್ರಯತ್ನದಲ್ಲೇ ಗೆದ್ದಿದ್ದಾರೆ. ಕುಟುಂಬ ಸಮೇತ ನೋಡಬಹುದಾದ ಬಹುಕೋಟಿ ವೆಚ್ಚದ ಚಿತ್ರವನ್ನು ನೀಡಿರುವ ನಿರ್ಮಾಪಕರು ಖಂಡಿತವಾಗಿ ಮೆಚ್ಚುಗೆಗೆ ಅರ್ಹರು.





Be the first to comment