ಈ ವರ್ಷದ ಕೊನೆಯ ದಿನವಾದ ಡಿಸೆಂಬರ್ 31 ರಂದು ಒಟ್ಟು ನಾಲ್ಕು ಕನ್ನಡ ಚಿತ್ರಗಳು ತೆರೆಗೆ ಬರಲಿವೆ.
ದೂದ್‌ಪೇಡ ದಿಗಂತ್ ಅಭಿನಯದ ‘ಹುಟ್ಟುಹಬ್ಬದ ಶುಭಾಶಯಗಳು’. ಲೂಸ್ ಮಾದ ಯೋಗಿ ನಟನೆಯ ‘ಒಂಬತ್ತನೆಯ ದಿಕ್ಕು’, ಅಜಯ್‌ರಾವ್ ನಾಯಕನಾಗಿರುವ ‘ಲವ್ ಯು ರಚ್ಚು’, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟನೆಯ ‘ಅರ್ಜುನ್ ಗೌಡ’ ಸಿನಿಮಾಗಳು ಒಂದೇ ದಿನ ರಿಲೀಸ್ ಆಗುತ್ತಿವೆ. ಇನ್ನು ಕೆಲವು ಚಿತ್ರಗಳು ತೆರೆಗೆ ಬರಲು ಮುಂದಾಗಿದ್ದರೂ, ಚಿತ್ರಮಂದಿರಗಳು ಸಿಗದ ಕಾರಣ ರಿಲೀಸ್ ಆಗಲು ಹಿಂದೇಟು ಹಾಕಿವೆ.
ದಿಗಂತ್ ನಾಯಕನಾಗಿರುವ ‘ಹುಟ್ಟುಹಬ್ಬದ ಶುಭಾಶಯಗಳು’ ಚಿತ್ರದ ಎಲ್ಲಾ ಕೆಲಸಗಳು ಈಗಾಗಲೇ ಪೂರ್ಣಗೊಂಡಿವೆ. ಈಗ ಡಿಸೆoಬರ್ 31ಕ್ಕೆ ಬಿಡುಗಡೆಯಾಗಲಿದೆ. ಈ ಚಿತ್ರದ ಮೂಲಕ ದೊಡ್ಡ ಬ್ರೇಕ್‌ನ ನಂತರ ದಿಗಂತ್ ತೆರೆಯ ಮುಂದೆ ಬರುತ್ತಿದ್ದಾರೆ. ಕ್ರಿಸ್ಟಲ್ ಪಾರ್ಕ್ ಸಿನಿಮಾದಡಿ ಟಿ.ಆರ್.ಚಂದ್ರಶೇಖರ್ ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ನಾಗರಾಜ್ ಬೇತೂರು ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಲೂಸ್‌ಮಾದ ಯೋಗಿ ಹಾಗೂ ಅದಿತಿ ಪ್ರಭುದೇವ ಕಾಣಿಸಿಕೊಂಡಿರುವ ಒಂಬತ್ತನೇ ದಿಕ್ಕು ಚಿತ್ರ ಡಿಸೆಂಬರ್ 31ರಂದು ತೆರೆಗೆ ಬರಲಿದೆ. ದಯಾಳ್ ಪದ್ಮನಾಭನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು ಆಕ್ಷನ್ ಕಂ ಕ್ರೈಂ ಥ್ರಿಲ್ಲರ್ ಸಬ್ಜೆಕ್ಟ್ ಇರುವ ಸಿನಿಮಾ ಆಗಿದೆ.
ಕೋಟಿ ರಾಮು ನಿರ್ಮಾಣದ, ಪ್ರಜ್ವಲ್ ದೇವರಾಜ್ ನಟನೆಯ ಅರ್ಜುನ್ ಗೌಡ ಚಿತ್ರ ಡಿಸೆಂಬರ್ 31ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಪ್ರಿಯಾಂಕ ತಿಮ್ಮೇಶ್ ನಾಯಕಿ ಆಗಿರುವ ಈ ಚಿತ್ರವನ್ನು ಲಕ್ಕಿ ಶಂಕರ್ ನಿರ್ದೇಶಿಸಿದ್ದಾರೆ. ಚಿತ್ರದ ಹಾಡುಗಳು ಹಾಗೂ ಟ್ರೈಲರ್ ರಿಲೀಸ್ ಆಗಿದ್ದು ಜನರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅಜಯ್ ರಾವ್ ನಟನೆಯ `ಲವ್ ಯು ರಚ್ಚು’ ಚಿತ್ರ ಡಿಸೆಂಬರ್ 31 ರಂದು ತೆರೆಗೆ ಬರುವ ಮೂಲಕ ತನ್ನ ಅದೃಷ್ಟ ಪರೀಕ್ಷೆ ಮಾಡಲಿದೆ. ರಚಿತಾರಾಮ್ ನಾಯಕಿಯಾಗಿರುವ ಚಿತ್ರವನ್ನು ಗುರು ದೇಶಪಾಂಡೆ ಅವರು ನಿರ್ಮಾಣ ಮಾಡಿದ್ದಾರೆ. ಚಿತ್ರದ ಟ್ರೈಲರ್, ಹಾಡು ಬಿಡುಗಡೆಗೊಂಡು ಸದ್ದು ಮಾಡುತ್ತಿದ್ದು ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ.
ರಕ್ಷಿತ್ ಶೆಟ್ಟಿ ನಟನೆಯ 777 ಚಾರ್ಲಿ ಚಿತ್ರ ಈ ಹಿಂದೆ ಘೋಷಣೆ ಆದಂತೆ ಡಿಸೆಂಬರ್ 31ರಂದು ಬಿಡುಗಡೆಯಾಗಬೇಕಾಗಿತ್ತು. ಆದರೆ ಚಿತ್ರದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ. ಈ ಚಿತ್ರ ಶ್ವಾನ ಪ್ರಿಯರು ಸೇರಿದಂತೆ ಚಿತ್ರ ಅಭಿಮಾನಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
___
Be the first to comment