ಬಹಳ ದಿನಗಳ ನಂತರ ಕನ್ನಡ ಬೆಳ್ಳಿ ತೆರೆಯ ಮೇಲೆ ಮಹಿಳೆಯರ ಸಾಹಸದ ಚಿತ್ರವೊಂದು ಮೂಡಿಬರುತ್ತಿದೆ.
ಇತ್ತೀಚೆಗೆ ಕೆನಡಾ ದೇಶದ ಸಂಸತ್ ನಲ್ಲಿ ಬಾಲ ಕಾರ್ಮಿಕರನ್ನು ಬಳಸಿಕೊಂಡು ಸಿದ್ದಪಡಿಸುವ ಎಲ್ಲಾ ವಸ್ತುಗಳನ್ನು ನಿಷೇದಿಸುವ ಕಾಯ್ದೆಯೊಂದನ್ನು ಮಂಡನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕನ್ನಡ ಸಿನಿಮಾವೊಂದರ ಕಂದ ಪದ್ಯವನ್ನು ಪ್ರಸಾರ ಮಾಡಲಾಯಿತು. ಆ ಚಿತ್ರದ ಹೆಸರು ‘ತ್ರಿದೇವಿ’. ಬಿಗ್ ಬಾಸ್ ಖ್ಯಾತಿಯ ಶುಭಾ ಪೂಂಜ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ಈ ಚಿತ್ರವನ್ನು ಅಶ್ವಿನ್ ಎ. ಮ್ಯಾಥ್ಯೂ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಅಶ್ವಿನ್ ಮಲಯಾಳಂ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇದೀಗ ತ್ರಿದೇವಿ ಸಿನಿಮಾದಿಂದ ಕನ್ನಡದಲ್ಲಿ ನಿರ್ದೇಶಕರತಾಗಿ ಗುರುತಿಸಿಕೊಂಡಿದ್ದಾರೆ. ಕೆನಡ ದೇಶದ ಸಂಸತನಲ್ಲಿ ಪ್ರಸಾರವಾದ, ಜೇನು ಕನ್ನಡದಲ್ಲಿ ತಯಾರಾದ
ಕಂದ ಪದ್ಯಕ್ಕೆ ಕಾರ್ತಿಕ್ ಸಾಹಿತ್ಯ ಬರೆದಿದ್ದು, ಮಾಧುರಿ ಶೇಷಾದ್ರಿ ಹಾಡಿದ್ದಾರೆ. ಚಿತ್ರಕ್ಕೆ ಫಿಡಲ್ ಅಶೋಕ ಹಾಗೂ ಡಾಸ್ಮೋಡ್ ಐ. ಲುಲಿಬಿ ಅವರು ಸಂಗೀತ ಸಂಯೋಜಿಸಿದ್ದಾರೆ.
ಇತ್ತೀಚೆಗೆ ನಡೆದ ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಪತ್ರಿಕಾಗೋಷ್ಠಿಯಲ್ಲಿ ನಟಿ ಶುಭ ಪುಂಜಾ ಮಾತನಾಡಿ, ‘ಇದು ನನ್ನ ಕನಸಿನ ಕೂಸು. ಈವರೆಗೆ ಬರೀ ಅಳುಮುಂಜಿ, ಬಬ್ಲಿ ಹೀಗೆ ಒಂದೇ ತರದ ಪಾತ್ರಗಳನ್ನು ಮಾಡಿ ಬೇಜಾರಾಗಿತ್ತು. ಏನಾದರೂ ಹೊಸ ಪಾತ್ರ ಮಾಡಬೇಕು ಎಂಬ ತುಡಿತ ಕಾಡುತ್ತಿತ್ತು. ಗೆಳೆಯ ಅಶ್ವಿನ್ ಮ್ಯಾಥ್ಯೂಗೆ ನನಗಾಗಿ ಡಿಫರೆಂಟ್ ಕಥೆ ಬರೆಯಲು ಹೇಳಿದ್ದೆ. ಒಂದಷ್ಟು ದಿನಗಳ ನಂತರ ಈ ಕಥೆ ಮಾಡಿದರು. ಹುಡುಗಿಯರೆಂದರೆ ಅಮಾಯಕರಲ್ಲ, ಅವರು ಸಾಹಸದಲ್ಲಿ ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಆ್ಯಕ್ಷನ್ ಪ್ರದಾನ ಚಿತ್ರ. ಈ ತಂಡದಲ್ಲಿ ನಾನು ಎಲ್ಲಾ ವಿಭಾಗದಲ್ಲಿ ಕೆಲಸ ಮಾಡಿದ್ದು, ಸಿನಿಮಾ ಪ್ರೊಡಕ್ಷನ್ ಸಿದ್ಧವಾಗುತ್ತದೆ ಎಂಬುದನ್ನು ಕಲಿತೆ’ ಎಂದು ಹೇಳಿದರು.
ಮತ್ತೋರ್ವ ನಾಯಕಿ ಸಂಧ್ಯಾ ಲಕ್ಷ್ಮೀನಾರಾಯಣ ಮಾತನಾಡಿ, ನಾನು ಮೂಲತಃ ಮಾಡೆಲಿಂಗ್ ಕ್ಷೇತ್ರದಲ್ಲಿ ಇದ್ದು, ಸಿನಿಮಾ ಮಾಡುವ ಆಸಕ್ತಿ ಅಷ್ಟಾಗಿ ಇರಲಿಲ್ಲ. ನಿರ್ದೇಶಕರು ಈ ಕಥೆ ಹೇಳಿದಾಗ ಅಭಿನಯಿಸಬೇಕು ಎನಿಸಿತು. ಮುಖ್ಯವಾಗಿ ಚಿತ್ರದಲ್ಲಿ ಆ್ಯಕ್ಷನ್ ಇರೋದಕ್ಕೆ ಸಿನಿಮಾ ಒಪ್ಪಿಕೊಂಡೆ’ ಎಂದರು.
ಮತ್ತೊಬ್ಬ ನಾಯಕಿ ಜ್ಯೋತ್ಸ್ನಾ ಬಿ. ರಾವ್ ಮಾತನಾಡಿ ‘ನಾನು ಮೂಲತ ಥೇಟರ್ ಆರ್ಟಿಸ್ಟ್, ಇದು ನನ್ನ ಮೊದಲ ಸಿನಿಮಾ. ಇದರಲ್ಲಿ ನನ್ನದು ಸಲಿಂಗ ಪಾತ್ರ. ಕಲರಿ ಫೈಟ್ ಕಲಿತು ಆಕ್ಷನ್ ಮಾಡಿದ್ದೇನೆ, ಚಿತ್ರದ ಕ್ಲೈಮ್ಯಾಕ್ಸ್ ನನಗೆ ಬಹಳ ಇಷ್ಟವಾಯ್ತು ಎಂದರು. ಚಿತ್ರದ ಬಹುತೇಕ ಶೂಟಿಂಗ್ ಕಾಡಿನಲ್ಲೇ ನಡೆದಿದ್ದು, ಕಾಡಿನಲ್ಲಿ ಕಳೆದು ಹೋದ ಮೂರು ವ್ಯಕ್ತಿಗಳ ವ್ಯಕ್ತಿತ್ವಗಳನ್ನು ಪ್ರತಿಬಿಂಬಿಸುವ ಸಿನಿಮಾ ಇದಾಗಿದೆ. ಚಿತ್ರದ ಇತರ ತಾರಾಗಣದಲ್ಲಿ ಅಶ್ವಿನ್ ಎ. ಮ್ಯಾಥ್ಯೂ, ಜಯದೇವ ಮೋಹನ್, ನಾಟಕ ಅಮಾನ್, ಅಶ್ವಿನ್ ಕಾಕುಮಾನು, ನಿಖಿಲ್ ಭಾರದ್ವಾಜ್, ಫ್ರೇಯಾ ಕೊಠಾರಿ ಮುಂತಾದವರಿದ್ದಾರೆ. ಆಲ್ಟರ್ಡ್ ಇಗೋ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ನಲ್ಲಿ ನಿರ್ಮಾಣವಾದ ಈ ಚಿತ್ರಕ್ಕೆ ಕುಂಜುನ್ನಿ ಎಸ್.ಕುಮಾರ್ ಅವರ ಛಾಯಾಗ್ರಹಣವಿದೆ.
Be the first to comment