2022 ಆಗಮಿಸಿದ್ದು, ಅದರ ಬೆನ್ನಿಗೇ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿ ಬಿಡುಗಡೆಯಾಗಿದೆ.
2022ರ ಬಹು ನಿರೀಕ್ಷಿತ ಸಿನಿಮಾಗಳ ಪಟ್ಟಿಯನ್ನು ಐಎಂಡಿಬಿ ಸಿದ್ಧಪಡಿಸಿದೆ. ಜನಪ್ರಿಯತೆ ಹಾಗೂ ಪಡೆದ ಮತಗಳ ಆಧಾರದ ಮೇಲೆ ಸಿನಿಮಾಗಳಿಗೆ ರ್ಯಾಂಕ್ ನೀಡಲಾಗಿದೆ.
ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಆರ್ಆರ್ಆರ್’ ಸಿನಿಮಾ ಸ್ಥಾನ ಪಡೆದಿದೆ. ಜ್ಯೂ.ಎನ್ಟಿಆರ್, ರಾಮ್ ಚರಣ್, ಆಲಿಯಾ ಭಟ್, ಅಜಯ್ ದೇವಗನ್ ನಟನೆಯ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಮೂಡಿಸಿದ್ದು, ಇದು ಹೆಚ್ಚಿನ ವೋಟ್ ಪಡೆದಿದೆ. ಈ ಚಿತ್ರ ಜನವರಿ 7ರಂದು ರಿಲೀಸ್ ಆಗುತ್ತಿದೆ.
ಬಾಲಿವುಡ್ ಜೋಡಿ ರಣಬೀರ್ ಕಪೂರ್ ಹಾಗೂ ಆಲಿಯಾ ಭಟ್ ನಟನೆಯ ‘ಬ್ರಹ್ಮಾಸ್ತ್ರ’ ಚಿತ್ರ ಎರಡನೇ ಸ್ಥಾನ ಪಡೆದಿದೆ. ಈ ಚಿತ್ರ ಸೆಪ್ಟೆಂಬರ್ 9ರಂದು ರಿಲೀಸ್ ಆಗಲಿದೆ.
ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಚಿತ್ರ ಏಪ್ರಿಲ್ 14ರಂದು ತೆರೆಗೆ ಬರಲಿದೆ. ಈ ಸಿನಿಮಾ ಮೂರನೇ ಸ್ಥಾನ ಪಡೆದಿದೆ. ಬಾಲಿವುಡ್ ನಟರಾದ ಸಂಜಯ್ ದತ್, ರವೀನಾ ಟಂಡನ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿರುವ ಏಕೈಕ ಕನ್ನಡ ಸಿನಿಮಾ ಇದಾಗಿದೆ.
ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಣಿಸಿಕೊಂಡಿರುವ ‘ರಾಧೆ ಶ್ಯಾಮ್’ ಚಿತ್ರ ಜನವರಿ 14ಕ್ಕೆ ತೆರೆಗೆ ಬರುತ್ತಿದ್ದು, ಈ ಸಿನಿಮಾ ನಾಲ್ಕನೇ ಸ್ಥಾನ ಪಡೆದಿದೆ. ‘ಕೆಜಿಎಫ್ 2’ ಜೊತೆ ರಿಲೀಸ್ ಆಗುತ್ತಿರುವ ಆಮೀರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಐದನೇ ನಿರೀಕ್ಷಿತ ಚಿತ್ರ ಎನಿಸಿದೆ.
ಉಳಿದಂತೆ ‘ಆದಿಪುರುಷ್’ (6), ‘ಬೀಸ್ಟ್’ (7), ‘ಗಂಗೂಬಾಯಿ ಕಾಠಿಯಾವಾಡಿ’ (8), ‘ಧಾಕಡ್’ (9), ‘ಹೀರೋಪಂತಿ 2’ (10) ಸ್ಥಾನ ಗಿಟ್ಟಿಸಿಕೊಂಡಿವೆ.
ನಿರೀಕ್ಷೆ ಹುಟ್ಟಿಸಿರುವ ಚಿತ್ರಗಳು ಥಿಯೇಟರ್ ನಲ್ಲಿ ಯಾವ ರೀತಿ ಕಲೆಕ್ಷನ್ ಮಾಡುತ್ತವೆ ಅನ್ನುವುದು ಬಿಡುಗಡೆ ಬಳಿಕ ಗೊತ್ತಾಗಲಿದೆ.
___

Be the first to comment