R Chandru: ಪ್ಯಾನ್ ಇಂಡಿಯಾ ಸ್ಟಾರ್ ನಿರ್ದೇಶಕ ಆರ್.ಚಂದ್ರು ಸಿನಿ ಪಯಣಕ್ಕೆ 15ರ ಸಂಭ್ರಮ,

 ಕನ್ನಡ ನಿರ್ದೇಶಕ ಆರ್.ಚಂದ್ರು ಸಿನಿ ಪಯಣಕ್ಕೆ 15ರ ಸಂಭ್ರಮ

2008ರ ಜುಲೈ 25ರಂದು “ತಾಜ್ ಮಹಲ್” ಸಿನಿಮಾ ತೆರೆಕಂಡಿತ್ತು. ಇದು ನಿರ್ದೇಶಕ ಆರ್.ಚಂದ್ರು ಅವರ ಚೊಚ್ಚಲ ಚಿತ್ರವಾಗಿದ್ದು, ಸ್ಯಾಂಡಲ್​ವುಡ್​ನಲ್ಲಿ 15 ವರ್ಷ ಪೂರ್ಣಗೊಳಿಸಿದ್ದಾರೆ.

ಬಣ್ಣದ ಬದುಕು ಎಲ್ಲರನ್ನೂ ಆಕರ್ಷಣೆ ಮಾಡುತ್ತದೆ. ಆದರೆ ಕೆಲವರನ್ನ ಮಾತ್ರ ತನ್ನತ್ತ ಸೆಳೆಯುತ್ತದೆ. ಹಾಗೆಯೇ ಚಿತ್ರರಂಗದಲ್ಲಿ ಒಂದು ಭದ್ರ ನೆಲೆಯನ್ನು ಕಾಣಲು ಕೂಡ ದಾರಿಯನ್ನು ಮಾಡಿಕೊಡುತ್ತದೆ. ಆ ನಿಟ್ಟಿನಲ್ಲಿ ರೈತ ಕುಟುಂಬದಲ್ಲಿ ಜನಿಸಿದ ಪುಟ್ಟ ಹುಡುಗ ಆರ್. ಚಂದ್ರಶೇಖರ್ ಬೆಳೆಯುತ್ತಾ ಹಲವು ಕನಸುಗಳನ್ನು ಕಟ್ಟಿಕೊಂಡು ಹಳ್ಳಿಯಿಂದ ಬೆಂಗಳೂರಿಗೆ ಬಂದು ಗಾಂಧಿನಗರ ಸುತ್ತಾಡಿ ತನ್ನ ಪ್ರಾಮಾಣಿಕ ನಡೆ-ನುಡಿ ಬರವಣಿಗೆಯೊಂದಿಗೆ ಖ್ಯಾತ ನಿರ್ದೇಶಕರ ಬಳಿ ಸಹಾಯಕ , ಸಹ ನಿರ್ದೇಶಕರಾಗಿ ಕೆಲಸವನ್ನು ಮಾಡುತ್ತಾ ನಿರ್ದೇಶನದ ಬಗ್ಗೆ ಹೆಚ್ಚು ಒಲವನ್ನ ಬೆಳೆಸಿಕೊಂಡು ಸ್ವತಂತ್ರ ನಿರ್ದೇಶಕರಾಗಿ ಆರ್. ಚಂದ್ರು ‘ತಾಜ್ ಮಹಲ್’ ಚಿತ್ರದ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟು ಬೆಳ್ಳಿ ಪರದೆ ಮೇಲೆ ಒಂದು ಸುಂದರ ಪ್ರೇಮ ಕಾವ್ಯವನ್ನು 2008 ಜುಲೈ 25ಕ್ಕೆ ಪ್ರೇಕ್ಷಕರ ಮುಂದೆ ರಾಜ್ಯದ್ಯಂತ ತೆರೆದಿಟ್ಟರು. ಈ ಚಿತ್ರವನ್ನು ಶಿವಶಂಕರ್ ‌ರೆಡ್ಡಿ ನಿರ್ಮಿಸಿದ್ದರು. ಈ ಚಿತ್ರದ ನಾಯಕನಾಗಿ ಅಜೇಯ್ ರಾವ್ ಹಾಗೂ ನಾಯಕಿಯಾಗಿ ಅಭಿನಯಿಸಿದ್ರು , ಈ ಚಿತ್ರವು ಕರ್ನಾಟಕದಾದ್ಯಂತ ಭರ್ಜರಿ ಯಶಸ್ಸು ಕಂಡಿತ್ತು. ಅನೇಕ ಚಿತ್ರಮಂದಿರಗಳಲ್ಲಿ 200 ಕ್ಕೂ ಅಧಿಕ ದಿನ ಈ ಸಿನಿಮಾ ಪ್ರದರ್ಶನವಾಗಿತ್ತು. ತಮ್ಮ ಮೊದಲ ನಿರ್ದೇಶನದ ಚಿತ್ರದಲ್ಲೇ ಆರ್. ಚಂದ್ರು ಡಬಲ್ ಸೆಂಚುರಿ ಬಾರಿಸಿದ್ದರು.

ನಂತರದ ದಿನಗಳಲ್ಲಿ ಆರ್. ಚಂದ್ರು, “ತಾಜ್ ಮಹಲ್” ಚಂದ್ರು ಅಂತಲೇ ಪ್ರಸಿದ್ದರಾದರು. ಈ ಚಿತ್ರದ ಸಂಗೀತ ನಿರ್ದೇಶನಕ್ಕಾಗಿ ಅಭಿಮಾನ್ ರಾಯ್ ಅವರಿಗೆ ರಾಜ್ಯಪ್ರಶಸ್ತಿ ಸಹ ಬಂದಿತ್ತು. ಈ ಚಿತ್ರ 2010 ರಲ್ಲಿ “ತಾಜ್ ಮಹಲ್” ಶೀರ್ಷಿಕೆಯಲ್ಲೇ ತೆಲುಗಿನಲ್ಲೂ ಬಿಡುಗಡೆಯಾಗಿತ್ತು. ಪ್ರಥಮ ಪ್ರಯತ್ನದಲ್ಲೇ ಭರ್ಜರಿ ಯಶಸ್ಸನ್ನು ಕಂಡಂತ ಆರ್. ಚಂದ್ರು ಮುಂದೆ ಸಾಗುತ್ತಾ ಸಾಲು ಸಾಲು ಚಿತ್ರಗಳ ನಿರ್ದೇಶನ ಮಾಡುತ್ತಾ ಸಾಗಿದರು. ಸೆಂಚುರಿ ಸ್ಟಾರ್ ಶಿವಣ್ಣ , ರಿಯಲ್ ಸ್ಟಾರ್ ಉಪೇಂದ್ರ , ಬ್ಲಾಕ್ ಕೋಬ್ರಾ ದುನಿಯಾ ವಿಜಯ್ , ಶ್ರೀನಗರ ಕಿಟ್ಟಿ ಸೇರಿದಂತೆ ಹಲವು ನಾಯಕರ ಜೊತೆ ಕೆಲಸ ಮಾಡಿ ಸ್ಟಾರ್ ನಿರ್ದೇಶಕರ ಪಟ್ಟವನ್ನು ಪಡೆದುಕೊಂಡರು. “ತಾಜ್ ಮಹಲ್” ನಿಂದ ಇತ್ತೀಚಿಗೆ ತೆರೆಕಂಡ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ತನಕ ಆರ್. ಚಂದ್ರು ಅವರ ಯಶಸ್ಸಿನ ಸಿನಿಮಾ ಯಾನ ಮುಂದುವರೆದುಕೊಂಡು ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ಪ್ರೇಕ್ಷಕರಿಗೆ ನೀಡುತ್ತಾ ಬಂದಿದ್ದಾರೆ.

ಹಾಗೆಯೇ ನಿರ್ದೇಶಕ ಆರ್. ಚಂದ್ರು ತಮ್ಮ ಸ್ವಂತ ಬ್ಯಾನರ್ ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಮೂಲಕ ಹಲವಾರು ಯುವ ನಿರ್ದೇಶಕರಿಗೆ ಸಿನಿಮಾ ನಿರ್ದೇಶನದ ಅವಕಾಶವನ್ನು ನೀಡಲು ಮುಂದಾದರು. ಇದರ ಜೊತೆಗೆ ತಮ್ಮ ಬ್ಯಾನರ್ ನಲ್ಲಿ ಇತ್ತೀಚಿಗಷ್ಟೇ ಸುಮಾರು 100 ಕೋಟಿ ವೆಚ್ಚದಲ್ಲಿ ಸ್ಟಾರ್ ನಟರಾದ ಶಿವರಾಜ್ ಕುಮಾರ್ , ಉಪೇಂದ್ರ ಹಾಗೂ ಸುದೀಪ್ ನಟನೆಯ ಮೂಡಿಬಂದಂತ ” ಕಬ್ಜ” ಎಂಬ ಫ್ಯಾನ್ ಇಂಡಿಯಾ ಚಿತ್ರ ಅದ್ದೂರಿಯಾಗಿ ಬಿಡುಗಡೆ ಮಾಡಿದರು. ನಾವು ಯಾರಿಗೆ ಏನು ಕಮ್ಮಿ ಇಲ್ಲ ಚಿತ್ರ ನಿರ್ದೇಶನ ಹಾಗೂ ನಿರ್ಮಾಣಕ್ಕೂ ಸೈ ಎನ್ನುತ ವಿಭಿನ್ನ ಶೈಲಿಯ ಚಿತ್ರವನ್ನು ಮಾಡಲು ಒಂದು ತಂಡವನ್ನೇ ಕಟ್ಟಿಕೊಂಡು ಸದಾ ಸಿದ್ದ ಎಂದಿದ್ದಾರೆ ನಿರ್ದೇಶಕ ಆರ್. ಚಂದ್ರು. ಸರಿಸುಮಾರು 11 ಚಿತ್ರಗಳನ್ನ ಪ್ರೇಕ್ಷಕರ ಮುಂದೆ ತಂದಂತ ನಿರ್ದೇಶಕ ಆರ್. ಚಂದ್ರು ಚಿತ್ರರಂಗದಲ್ಲಿ ಸೋಲು ಗೆಲುವು ಎರಡನ್ನು ನೋಡಿದ್ದಾರೆ. ತಮ್ಮ ಸಿನಿಜರ್ನಿಗೆ 15 ವರ್ಷಗಳು ತುಂಬಿರುವ ಈ ಸುಸಂದರ್ಭದಲ್ಲಿ ಆರ್‌. ಚಂದ್ರು ತಮಗೆ ಸಹಕಾರ ನೀಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ದಾರೆ. ನಿರ್ದೇಶಕ ಆರ್. ಚಂದ್ರು ಬತ್ತಳಿಕೆಯಲ್ಲಿ ಹಲವಾರು ವಿಭಿನ್ನ ಬಗೆಯ ಚಿತ್ರಗಳು ಹೊರಬರಲು ಸಿದ್ಧವಾಗುತ್ತಿದೆಯಂತೆ. ಒಟ್ನಲ್ಲಿ ಸ್ಟಾರ್ ನಟರುಗಳ ನೆಚ್ಚಿನ ನಿರ್ದೇಶಕ ಆಗಿರುವ ಆರ್. ಚಂದ್ರು ಇನ್ನಷ್ಟು ಸದಾಭಿರುಚಿಯ ಉತ್ತಮ ಚಿತ್ರಗಳನ್ನು ಕನ್ನಡ ಸಿನಿಪ್ರಿಯವರಿಗೆ ನೀಡುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!