ಮೋಹನ್ ಹಾಗೂ ಸಾಹಿರಾ ಬಾನು ದಂಪತಿಗಳಿಗೆ ಅನಿರೀಕ್ಷಿತವಾಗಿ ಸಿಗುವ 13 ಕೋಟಿ ರೂಪಾಯಿ ತಂದೊಡ್ಡುವ ಸಂಕಷ್ಟಗಳ ಚಕ್ರವ್ಯೂಹದ ಕಥೆಯೇ 13 ಸಿನಿಮಾ.
ಅನಿರೀಕ್ಷಿತ ಹಣದ ಚಕ್ರವ್ಯೂಹದಲ್ಲಿ ಸಿಕ್ಕಿಹಾಕಿಕೊಂಡ ದಂಪತಿ ಹೇಗೆ ಹೊರಬರುತ್ತಾರೆ ಎನ್ನುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಆಗಿ 13 ಗಮನ ಸೆಳೆಯುತ್ತದೆ. ಇದಕ್ಕೆ ದೃಶ್ಯ ಚಿತ್ರದ ಸ್ಪೂರ್ತಿ ಇರುವಂತೆ ಕಾಣುತ್ತದೆ. ಹೆಂಡತಿಗೆ ಸಿಗುವ ಹಣವನ್ನು ರಕ್ಷಿಸಿಕೊಳ್ಳುವ ಜೊತೆಗೆ ಕುಟುಂಬವನ್ನು ದುಷ್ಟರಿಂದ ಕಾಪಾಡುವ ಸನ್ನಿವೇಶವನ್ನು ಚಿತ್ರದಲ್ಲಿ ನಿರೂಪಿಸಲಾಗಿದೆ.
ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದ ಮೋಹನ್ ತನ್ನನ್ನು ವಿಲನ್ ಆಗಿ ಕಾಡುವ ಪೊಲೀಸ್ ಇಲಾಖೆಯನ್ನು ಹೇಗೆ ಎದುರಿಸುತ್ತಾನೆ ಎನ್ನುವುದನ್ನು ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿ ನಿರ್ದೇಶಕರು ತೋರಿಸಿದ್ದಾರೆ. ಈ ಚಿತ್ರದಲ್ಲಿ ಹಲವು ಉತ್ತರ ಇಲ್ಲದಿರುವ ಪ್ರಶ್ನೆಗಳಿವೆ. ಇದಕ್ಕೆ ಮುಂದಿನ ಭಾಗದಲ್ಲಿ ಉತ್ತರ ಸಿಗಬಹುದು ಎಂದು ಪ್ರೇಕ್ಷಕರಿಗೆ ಅನಿಸುತ್ತದೆ.
ನಿರ್ದೇಶಕ ನರೇಂದ್ರ ಬಾಬು ಸಸ್ಪೆನ್ಸ್ ಥ್ರಿಲ್ಲರ್ ಜೊತೆಗೆ ಕಾಮಿಡಿ, ಐಟಂ ಸಾಂಗ್ ಎಲ್ಲವನ್ನು ಸೇರಿಸಿ ಚಿತ್ರ ನಿರ್ಮಿಸಿದ್ದಾರೆ. ನಿರೂಪಣೆಯಲ್ಲಿ ಇನ್ನಷ್ಟು ಚುರುಕುತನ ಇದ್ದರೆ ಪ್ರೇಕ್ಷಕರಿಗೆ ಸಿನಿಮಾ ನೆನಪಿನಲ್ಲಿ ಉಳಿಯುವ ಅವಕಾಶ ಇರುತ್ತಿತ್ತು.
ರಾಘವೇಂದ್ರ ರಾಜಕುಮಾರ್ ಅವರು ಗುಜರಿ ವ್ಯಾಪಾರಿಯ ಪಾತ್ರದಲ್ಲಿ ತಾಳ್ಮೆಯ ಗಂಡನಾಗಿ ಕಾಣಿಸಿಕೊಂಡಿದ್ದಾರೆ. ಶೃತಿ ಅವರು ಮುಸ್ಲಿಂ ಮಹಿಳೆಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿರುವ ಪ್ರಮೋದ್ ಶೆಟ್ಟಿ, ನೆಗೆಟಿವ್ ಶೇಡ್ ನಲ್ಲಿ ಗಮನ ಸೆಳೆಯುತ್ತಾರೆ.
ಶೋಗನ್ ಬಾಬು ಅವರ ಸಂಗೀತ ಸಂಯೋಜನೆಯ ಒಂದೆರಡು ಹಾಡುಗಳು ಮನಸಿಗೆ ಖುಷಿ ಕೊಡುತ್ತವೆ. ಸಸ್ಪೆನ್ಸ್ ಶೈಲಿಯ ಸಿನಿಮಾವಾಗಿ 13 ಇಷ್ಟ ಆಗುತ್ತದೆ. ಸಿನಿಮಾದಲ್ಲಿ ಒಂದಷ್ಟು ಪ್ರಶ್ನೆಗಳು ಇರುವುದರಿಂದ ಪ್ರೇಕ್ಷಕರಿಗೆ ಮುಂದಿನ ಭಾಗ ಬಂದ ಬಳಿಕವಷ್ಟೇ ಸಂತೃಪ್ತಿ ಸಿಗಬಹುದು.
____
Be the first to comment