120 ಚಿತ್ರಮಂದಿರಗಳಲ್ಲಿ 100 ರಿಲೀಸ್

ರಮೇಶ್ ಅರವಿಂದ್ ನಟನೆ, ನಿರ್ದೇಶನದ 100 ಚಿತ್ರ, ನವೆಂಬರ್ 19ರಂದು ಬಿಡುಗಡೆಯಾಗುತ್ತಿದ್ದು, 120ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ.

ಚಿತ್ರದ ಸ್ಯಾಟಲೈಟ್ ಹಕ್ಕುಗಳು ಜೀ5 ಗೆ ಮಾರಾಟವಾಗಿದೆ. ಚಿತ್ರ ಬಿಡುಗಡೆಗೊಂಡ ಸುಮಾರು 3 ತಿಂಗಳ ನಂತರ ಕಿರುತೆರೆಯಲ್ಲಿ ಸಿನಿಮಾ ಬರಬಹುದು ಎಂದು ರಮೇಶ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳು ವರವೋ, ಶಾಪವೋ ಎನ್ನುವುದು ಬಳಸುವವರ ಕೈಯಲ್ಲಿದೆ. ಸಾಮಾಜಿಕ ಜಾಲತಾಣಗಳನ್ನು ಬಹಳ ಜವಾಬ್ದಾರಿಯುತವಾಗಿ ಬಳಸಬೇಕು. ಈ ಅಂಶವನ್ನು ಕಮರ್ಷಿಯಲ್ ವಿಧಾನದ ಮೂಲಕ ಚಿತ್ರದಲ್ಲಿ ಹೇಳಲಾಗಿದೆ. ಜನರು ಏಕೆ ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿದ್ದಾರೆ? ಇದರಿಂದ ಏನು ಸಮಸ್ಯೆಗಳಾಗುತ್ತಿವೆ ಈ ಎಲ್ಲವನ್ನೂ ಚಿತ್ರದಲ್ಲಿ ಹೇಳಲಾಗಿದೆ. ಇದಕ್ಕಾಗಿ ಸೈಬರ್ ಕ್ರೈಮ್ ಕುರಿತು ಅಧ್ಯಯನ ಮಾಡಲಾಗಿದೆ ಎಂದು ರಮೇಶ್ ಹೇಳಿದ್ದಾರೆ.

ಗಾಳಿಪಟ-2 ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ಅವರು ಸೂರಜ್ ಪ್ರೊಡಕ್ಷನ್ಸ್ ನಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ರಮೇಶ್ ಅರವಿಂದ್ ಅವರು ಚಿತ್ರದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ರಚಿತಾ ರಾಮ್, ರಮೇಶ್ ಅವರ ಸಹೋದರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಇವರಿಬ್ಬರೂ ಪುಷ್ಪಕ ವಿಮಾನದಲ್ಲಿ ಜೊತೆಗೆ ನಟಿಸಿದ್ದರು. ಇದಲ್ಲದೇ ಚಿತ್ರದಲ್ಲಿ ಪೂರ್ಣಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ, ಶೋಭರಾಜ್, ರಾಜು ತಾಳಿಕೋಟೆ, ಮಾಲತಿ ಸುಧೀರ್, ಬೇಬಿ ಸ್ಮಯ ಇತರರು ಚಿತ್ರದಲ್ಲಿ ನಟಿಸಿದ್ದಾರೆ.

ಚಿತ್ರಕ್ಕೆ ಕೆಜಿಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ಸಂಯೋಜನೆ, ಸತ್ಯ ಹೆಗಡೆ ಛಾಯಾಗ್ರಹಣ ಮಾಡಿದ್ದಾರೆ. ಶಿವಾಜಿ ಸುರತ್ಕಲ್ ಚಿತ್ರದ ನಿರ್ದೇಶಕ ಆಕಾಶ್ ಶ್ರೀವತ್ಸ ಚಿತ್ರಕ್ಕೆ ಎಡಿಟರ್ ಆಗಿ ಕೆಲಸ ಮಾಡಿದ್ದಾರೆ.
ರಾಮ ಶಾಮ ಭಾಮಾ ಚಿತ್ರದ ಮೂಲಕ ನಿರ್ದೇಶನ ಆರಂಭಿಸಿದ ರಮೇಶ್ ಅವರು ಸುಂದರಾಂಗ ಜಾಣ (2016) ಚಿತ್ರವನ್ನು ಕೊನೆಯದಾಗಿ ನಿರ್ದೇಶನ ಮಾಡಿದ್ದರು. ಈಗ 100 ಚಿತ್ರದ ಮೂಲಕ ನಿರ್ದೇಶಕರಾಗಿ ತೆರೆಯ ಮೇಲೆ ಬಂದಿದ್ದು, ಪ್ರೇಕ್ಷಕರನ್ನು ಯಾವ ರೀತಿ ಹಿಡಿದಿಡಲಿದ್ದಾರೆ ಎನ್ನುವುದಕ್ಕೆ ನ. 19ಕ್ಕೆ ಉತ್ತರ ಸಿಗಲಿದೆ.


ಈ ಚಿತ್ರದ ಟ್ರೈಲರ್ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದ್ದು ಚಿತ್ರದ ಬಗ್ಗೆ ಕುತೂಹಲವನ್ನು ಮೂಡಿಸಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!