ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಚಿತ್ರ ಮೊದಲ ನಾಲ್ಕು ದಿನದಲ್ಲಿ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಬಾಕ್ಸ್ ಆಫೀಸ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.
ಮಾರ್ಚ್ 17 ರ ಗುರುವಾರ ಸಿನಿಮಾ ರಿಲೀಸ್ ಆಗಲಿದೆ. ಶುಕ್ರವಾರ, ಶನಿವಾರ, ಭಾನುವಾರ ನಾಲ್ಕು ದಿನದಲ್ಲಿ ಸಿನಿಮಾ 100 ಕೋಟಿಯ ಗಡಿ ಮುಟ್ಟಲಿದೆ ಎನ್ನಲಾಗುತ್ತಿದೆ.
ಜೇಮ್ಸ್’ ಚಿತ್ರ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅಬ್ಬರಿಸಲಿದೆ. ಈಗಾಗಲೇ ‘ಜೇಮ್ಸ್’ ರಿಲೀಸ್ ಆಗುತ್ತಿರುವ ಚಿತ್ರಮಂದಿರಗಳ ಪಟ್ಟಿ ರಿವೀಲ್ ಆಗಿದೆ. ಅಲ್ಲದೇ ಕೆನಡ, ನೆದರ್‌ಲ್ಯಾಂಡ್‌ನಲ್ಲಿ ಯಾವ ಚಿತ್ರಮಂದಿರಗಳಲ್ಲಿ ‘ಜೇಮ್ಸ್’ ತೆರೆಕಾಣಲಿದೆ ಎನ್ನುವ ಪಟ್ಟಿ ಬಿಡುಗಡೆ ಆಗಿದೆ. ಅಪ್ಪುಗೆ ವಿಶ್ವಾದ್ಯಂತ ಅಭಿಮಾನಿಗಳು ಇರುವ ಕಾರಣ ವಿದೇಶಗಳಲ್ಲೂ ಕೂಡ ‘ಜೇಮ್ಸ್’ ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ.
ಜೇಮ್ಸ್ ಒಟ್ಟು 4 ಸಾವಿರ ಸ್ಕ್ರೀನ್‌ಗಳಲ್ಲಿ ಅಬ್ಬರಿಸಲಿದೆ. ಚಿತ್ರಕ್ಕೆ ಸಿಕ್ಕಿರುವ ಚಿತ್ರ ಮಂದಿರಗಳ ಸಂಖ್ಯೆ, ಆಸುಪಾಸು ಬೇರೆ ಚಿತ್ರ ಬಿಡುಗಡೆ ಇಲ್ಲದ ಲೆಕ್ಕಚಾರ ಸೇರಿದರೆ, ಜೇಮ್ಸ್ ಅತಿ ವೇಗವಾಗಿ 100 ಕೋಟಿ ಗಡಿ ಮುಟ್ಟುವುದರಲ್ಲಿ ಅನುಮಾನವೇ ಇಲ್ಲ ಎನ್ನಲಾಗುತ್ತಿದೆ. ಮಾರ್ಚ್ 17ರಂದು ಚಿತ್ರ ರಿಲೀಸ್ ಆದ ಬಳಿಕ ಬಾಕ್ಸಾಫಿಸ್‌ನಲ್ಲಿ ಜೇಮ್ಸ್ ಸದ್ದು ಹೇಗಿರಲಿದೆ ಎನ್ನುವುದು ಗೊತ್ತಾಗಲಿದೆ.
ಜೇಮ್ಸ್’ ರಿಲೀಸ್ ಆಗಲಿದೆ ಎನ್ನುವ ಕಾರಣಕ್ಕೆ ಬೇರೆ ಯಾವುದೇ ಚಿತ್ರಗಳು ರಿಲೀಸ್ ಆಗುತ್ತಿಲ್ಲ. ಒಂದು ವಾರ ‘ಜೇಮ್ಸ್’ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಅಪ್ಪಿ ತಪ್ಪಿ ಪರಭಾಷೆ ಸಿನಿಮಾಗಳು ರಿಲೀಸ್ ಆದರೆ ಕರ್ನಾಟಕದಲ್ಲಿ ಆ ಚಿತ್ರಗಳಿಗೆ ಜಾಗ ಸಿಗದ ಸ್ಥಿತಿ ಎದುರಾಗಿದೆ.
ಜೇಮ್ಸ್’ನಲ್ಲಿ ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್ ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ ಇದೆ.
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ.
__
Be the first to comment