ಮೂರು ಭಾಷೆಗಳಲ್ಲಿ ‘ಅನುಷ್ಕಾ’

ಡೇಂಜರ್‍ಜೋನ್, ನಿಶ್ಯಬ್ದ 2 ಚಿತ್ರಗಳನ್ನು ನಿರ್ದೇಶಿಸಿರುವ ದೇವರಾಜ್‍ ಕುಮಾರ್ ಅವರು ಈಗ ಅನುಷ್ಕಾ ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಅನುಷ್ಕಾ ಚಿತ್ರವನ್ನು ತೆಲುಗು ಹಾಗೂ ತಮಿಳಿನಲ್ಲೂ ಚಿತ್ರೀಕರಿಸುತ್ತಿದ್ದು ಚಿತ್ರವು ಇತಿಹಾಸ ತಜ್ಞ, ಆಧುನಿಕ ವ್ಯಕ್ತಿ, ಭೂತ ಹೀಗೆ ಮೂರು ಕಾಲಮಾನದಲ್ಲಿ ವೈವಿಧ್ಯತೆಯಿಂದ ಕೂಡಿದೆ.

ಈ ಚಿತ್ರಕ್ಕೆ ಟಾಲಿವುಡ್‍ನ ನಂಬರ್ 1 ನಟಿ ಅನುಷ್ಕಾಶೆಟ್ಟಿಯವರನ್ನು ಸಿಡಿ ಬಿಡುಗಡೆಗೆ  ಕರೆತರಬೇಕೆಂದೂ ಚಿತ್ರತಂಡ ಯೋಚಿಸಿದೆ. ಅನುಷ್ಕಾ ಪಾತ್ರದಲ್ಲಿ ಅಮೃತಾ ಅಯ್ಯಂಗಾರ್ ಐತಿಹಾಸಿಕ ಹಾಗೂ ಮಾಡ್ರನ್ ರೋಲ್‍ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಚಿತ್ರಕ್ಕಾಗಿ ಅಮೃತಾ ಕುದುರೆ ಸವಾರಿ, ಫೈಟ್ ಕಲಿತಿದ್ದು ತುಂಬಾ ಪ್ರಬಲವಾದ ಪಾತ್ರವಂತೆ.

ಕಳೆದ ವಾರ ಕಂಠೀರವಾ ಸ್ಟುಡಿಯೋದಲ್ಲಿ ಅಮೃತ ಅಯ್ಯಂಗಾರ್ ಹಾಗೂ ರೂಪೇಶ್‍ಶೆಟ್ಟಿ ಅವರ ಪೋಟೋ ಶೂಟ್ ಹಾಗೂ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು. ನಿರ್ದೇಶಕ ದೇವರಾಜ್‍ಕುಮಾರ್ ಮಾತನಾಡಿ, ಕಳೆದ 6 ತಿಂಗಳ ಹಿಂದೆ ಈ ಚಿತ್ರವನ್ನು ಆರಂಭಿಸಿದ್ದೆವು, ಕನ್ನಡ, ತೆಲುಗು ಹಾಗೂ ತಮಿಳು ಮೂರು ಭಾಷೆಯಲ್ಲಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ, ತೆಲುಗು ಮತ್ತು ತಮಿಳಿಗೆ ದೇವಿ ಅನುಷ್ಕಾ ಎಂದು ಹೆಸರಿಟ್ಟಿದ್ದೇವೆ. ನನ್ನ ಹಿಂದಿನ ಚಿತ್ರಗಳಲ್ಲಿ ಕೆಲಸ ಮಾಡಿದ ಅನೇಕ ತಂತ್ರಜ್ಞರು ಕೂಡ ಅನುಷ್ಕಾದಲ್ಲಿದ್ದು ಚಿತ್ರವು 4 ಟ್ರಾಕ್‍ನಲ್ಲಿ ಸಾಗುತ್ತದೆ. ಚಿತ್ರಕಥೆ ಇಷ್ಟವಾಗಿದ್ದರಿಂದ ನಿರ್ಮಾಪಕ ಗಂಗಾಧರ್ ಸಮ್ಮತಿಸಿದರು. ಟೀಸರ್ ಅನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದೇವೆ ಎಂದರು.

ನಾಯಕಿ ಅಮೃತಾ ಮಾತನಾಡಿ, ಅನುಷ್ಕಾ ಚಿತ್ರದಲ್ಲಿ ನನಗೆ ಡುಯಲ್ ರೋಲ್ ಇದೆ, ಒಂದು ಪಾತ್ರದಲ್ಲಿ ಐತಿಹಾಸಿಕ ಪಾತ್ರವಾಗಿದ್ದು ರಾಶಿಯಾಗಿ ಕಾಣಿಸಿಕೊಂಡಿದ್ದರೆ, ಮತ್ತೊಂದು ಕಾಲಮಾನದಲ್ಲಿ ಸೋಷಿಯಲ್ ವರ್ಕರ್ ಆಗಿ ಕಾಣಿಸಿಕೊಂಡಿದ್ದೇನೆ ಆದರೂ ಈ ಎರಡೂ ಜನ್ಮಕ್ಕೂ ಹೊಂದಾಣಿಕೆ ಇಲ್ಲ ಎಂದರು. ನಾಯಕ ರೂಪೇಶ್‍ಶೆಟ್ಟಿ ಮಾತನಾಡಿ, ಡೇಂಜರ್ ಜೋನ್, ನಿಶ್ಯಬ್ದ 2 ಚಿತ್ರಗಳಲ್ಲೂ ನಾನು ನಿರ್ದೇಶಕ ದೇವರಾಜ್‍ಕುಮಾರ್ ಅವರೊಂದಿಗೆ ಕೆಲಸ ಮಾಡಿದ್ದೇನೆ, ನನ್ನ ಸಿನಿಮಾ ಜರ್ನಿಗೆ ಅವರು ಕೂಡ ಕಾರಣ. ಈ ಚಿತ್ರದ ಒಂದು ಹಾಡನ್ನು ಬ್ಯಾಂಕಾಕ್‍ನಲ್ಲಿ ಚಿತ್ರೀಕರಿಸಿದ್ದಾರೆ , ಈ ಚಿತ್ರದ ಟೀಸರ್ ಅನ್ನು ಟಾಲಿವುಡ್ ನಟಿ ಅನುಷ್ಕಾಶೆಟ್ಟಿಯವರಿಂದ ಬಿಡುಗಡೆ ಮಾಡಲು ಚಿಂತಿಸುತ್ತಿದ್ದೇವೆ ಎಂದರು.

ಕಳೆದ ಫೆಬ್ರವರಿಯಲ್ಲಿ ಶೂಟಿಂಗ್ ಆರಂಭಿಸಿ ಮೈಸೂರು, ಶ್ರೀರಂಗಪಟ್ಟಣ, ಅರಸೀಕೆರೆ ಹಾಗೂ ತಾವರೆಕೆರೆ ಸುತ್ತಮುತ್ತ ಸುಮಾರು 65 ದಿನಗಳ ಕಾಲ ಚಿತ್ರೀಕರಣ ನಡೆಸಿ ಇದೀಗ ಬಿಡುಗಡೆಯ ಹಂತಕ್ಕೆ ತಂದಿದ್ದಾರೆ. ಎಸ್.ಕೆ.ಗಂಗಾಧರ್ (ರಾಜು) ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.  ಅನುಷ್ಕಾ ಚಿತ್ರದ ಮೂಲಕ ಟಾಲಿವುಡ್ ಹಾಗೂ ಕಾಲಿವುಡ್ ಗೆ ಪರಿಚಯವಾಗಲು ಹೊರಟಿರುವ ರೂಪೇಶ್‍ಶೆಟ್ಟಿ , ಅಮೃತಾ ಹಾಗೂ ನಿರ್ದೇಶಕ ದೇವರಾಜ್‍ಕುಮಾರ್ ಅವರು ಆ ಚಿತ್ರರಂಗಗಳಲ್ಲೂ ಗುರುತಿಸಿಕೊಳ್ಳುವಂತಾಗಲಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!