ಬೆರಗಾಗಿಸೋ ವಿಶೇಷತೆಗಳ ಸಾರ್ವಕಾಲಿಕ ನಾಗರಹಾವು!
ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸುತ್ತಲೇ ಸ್ಟಾರ್ ಆಗಿಯೂ ರೂಪಿಸಿದ ಚಿತ್ರ ನಾಗರಹಾವು. ಈಶ್ವರಿ ಪೆÇ್ರಡಕ್ಷನ್ಸ್ ಲಾಂಛನದಲ್ಲಿ ಎನ್ ವೀರಾಸ್ವಾಮಿ ಅವರು ನಿರ್ಮಿಸಿದ್ದ ಹಾಗೂ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಈ ಚಿತ್ರವನ್ನು ವೀರಾಸ್ವಾಮಿಯವರ ಪುತ್ರ, ಕ್ರೇಜಿಸ್ಟಾರ್ ರವಿಚಂದ್ರನ್ ಸಹೋದರ ಬಾಲಾಜಿ ನವೀನ ತಂತ್ರಜ್ಞಾನದೊಂದಿಗೆ ಮತ್ತೆ ಈ ವಾರ ತೆರೆಗೆ ತರುತ್ತಿದ್ದಾರೆ.
ನಾಗರ ಹಾವು ಎಂಬುದು ಪುಟ್ಟಣ್ಣ ಕಣಗಾಲ್ ಸೃಷ್ಟಿಸಿದ ಸಾರ್ವಕಾಲಿಕ ಅದ್ಭುತ!
ಕೇವಲ ಕನ್ನಡಕ್ಕೆ ಮಾತ್ರವಲ್ಲದೇ ಹಿಂದಿ ಚಿತ್ರಗಳಿಗೂ ಸ್ಫೂರ್ತಿಯಾಗುವಂಥಾ ನಾನಾ ಸಂಗತಿಗಳ ಮೂಲಕ ಪುಟ್ಟಣ್ಣ ಕಣಿಗಾಲ್ ಅವರು ನಾಗರಹಾವು ಚಿತ್ರವನ್ನು ರೂಪಿಸಿದ್ದರು. ಹಿಂದಿಯಲ್ಲಿ ಆ ಹೊತ್ತಿಗೆಲ್ಲಾ ಮೇರಾ ನಾಮ್ ಜೋಕರ್ ಚಿತ್ರವನ್ನು ಮೂರು ಭಾಗ ಮಾಡುವಂಥಾ ತಂತ್ರಗಾರಿಕೆಯ ಪ್ರಯೋಗವಾಗಿತ್ತು. ಆದರೆ ನಾಗರಹಾವು ಚಿತ್ರದಲ್ಲಿ ತಾರಾಸು ಅವರ ನಾಗರಹಾವು, ಒಂದು ಗಂಡು ಎರಡು ಹೆಣ್ಣು ಮತ್ತು ಸರ್ಪ ಮತ್ಸರ ಎಂಬ ಮೂರು ಕಾದಂಬರಿಗಳನ್ನು ಒಟ್ಟಾಗಿಸಿ ಕಥೆ ರೂಪಿಸಿದ್ದರು.ನಾಗರಹಾವು ಚಿತ್ರಗಳಲ್ಲಿ ಎಲ್ಲ ಪಾತ್ರಗಳನ್ನೂ ಕೂಡಾ ಎಂದಿಗೂ ಪ್ರಸ್ತುತವಾಗಿರುವಂತೆ, ಅದನ್ನು ನಿರ್ವಹಿಸಿದ ಕಲಾವಿದರ ಬದುಕಿನ ದಿಕ್ಕೇ ಬದಲಾಗುವಂತೆ ಮಾಡಿದ್ದು ಮತ್ತೊಂದು ರೋಚಕ ಇತಿಹಾಸ. ಈ ಚಿತ್ರದಲ್ಲಿ ಪುಟ್ಟ ಪಾತ್ರವಾದ ಜಲೀಲನಾಗಿ ಕಾಣಿಸಿಕೊಂಡಿದ್ದ ಅಂಬರೀಶ್ ಅವರು ಭಾರೀ ಜನಪ್ರಿಯರಾದರು. ನಾಯಕ, ನಾಯಕಿಯರನ್ನೇ ಮೀರಿಸುವಂತೆ ಚಾಮಯ್ಯ ಮೇಸ್ಟರ ಪಾತ್ರದ ಮೂಲಕ ಅಶ್ವತ್ಥ್ ಅವರು ಮಿಂಚಿದ್ದರು. ಆ ನಂತರ ಅವರು ಚಾಮಯ್ಯ ಮೇಸ್ಟರೆಂದೇ ಕರೆಸಿಕೊಂಡಿದ್ದೀಗ ಇತಿಹಾಸ. ಅದರಲ್ಲಿಯೂ ವಿಶೇಷವಾಗಿ ರೋಷಾವೇಶವನ್ನೇ ಆವಾಹಿಸಿಕೊಂಡಂತೆ ನಟಿಸಿದ್ದ ವಿಷ್ಣುವರ್ಧನ್ ಅವರು ನಾಯಕ ನಟನಾಗಿ ಹೊರ ಹೊಮ್ಮಿದ್ದೇ ಈ ಚಿತ್ರದಿಂದ.
ಅದುವರೆಗೆ ಸಾಮಾನ್ಯ ಬೆಟ್ಟ ಪ್ರದೇಶದಂತಿದ್ದ ಚಿತ್ರದುರ್ಗವನ್ನು ಇಂಚಿಂಚಾಗಿ ಅನಾವರಣಗೊಳಿಸಿದ ಹೆಗ್ಗಳಿಕೆಯೂ ನಾಗರಹಾವು ಚಿತ್ರಕ್ಕೇ ಸಲ್ಲಬೇಕು. ಇನ್ನುಳಿದಂತೆ ಒಂದು ಪೀಳಿಗೆಯ ಯೌವನದ ರೋಷಕ್ಕೆ ಕಿಚ್ಚುಹಚ್ಚುವಂತೆ ಮೂಡಿ ಬಂದಿದ್ದ ಈ ಚಿತ್ರದ ಹಾಡುಗಳು ಇಂದಿಗೂ ಹಳತಾಗಿಲ್ಲ. ಅಂಥಾ ಆವೇಷದ ಹಾಡುಗಳಿಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಧ್ವನಿಯಾದರೆ, ಮಾಧುರ್ಯದ ಹಾಡುಗಳು ಪಿ ಬಿ ಶ್ರೀನಿವಾಸ್ ಅವರ ಕಂಠದಿಂದ ಮೂಡಿ ಬಂದಿದ್ದವು.
ನಾಯಕನ ಸಾಮಾನ್ಯ ನಡಿಗೆ ಮತ್ತು ನಾಯಕಿಯ ಸ್ಲೋ ಮೋಷನ್ ಓಟವನ್ನು ಒಂದೇ ಫ್ರೇಮಿನಲ್ಲಿ ತೋರಿಸಿದ ಮೊದಲ ಚಿತ್ರ ನಾಗರಹಾವು. ಈ ಚಿತ್ರದ ನಾಯಕಿಯರಾದ ಆರತಿ ಮತ್ತು ಶುಭಾ ಅವರಂತೆಯೇ ಓಬವ್ವನಾಗಿ ನಟಿಸಿದ್ದ ಜಯಂತಿ ಕೂಡಾ ಭಾರೀ ಜನಪ್ರಿಯತೆ ಗಳಿಸಿಕೊಂಡಿದ್ದರು. ಬೆಟ್ಟದ ಮೇಲೆ ನಡೆಯೋ ದೃಷ್ಯಗಳಿಗೆ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಅವರು ತಬಲಾ ಮೂಲಕ ಹಿನ್ನೆಲೆ ಸಂಗೀತ ನೀಡಿದ್ದರು. ಇದು ಅದೆಷ್ಟು ಸಂಚಲನ ಸೃಷ್ಟಿಸಿತ್ತೆಂದರೆ, ಮುಂದೆ ಬಾಲಿವುಡ್‍ನ ಖ್ಯಾತ ನಿರ್ದೇಶಕ ಆರ್.ಡಿ. ಬರ್ಮನ್ ಶೋಲೆ ಚಿತ್ರದಲ್ಲಿಯೂ ಇದೇ ತಂತ್ರ ಅನುಸರಿಸಿದ್ದು ಕನ್ನಡ ಚಿತ್ರ ರಂಗದ ಸಾರ್ವಕಾಲಿಕ ಹೆಮ್ಮೆ.
ಇಂಥಾ ಹತ್ತಾರು ವಿಶೇಷತೆಗಳನ್ನು ಒಡಲಲ್ಲಿ ತುಂಬಿಕೊಂಡಿರುವ ನಾಗರಹಾವು ಚಿತ್ರವನ್ನು ಹೊಸಾ ತಂತ್ರಜ್ಞಾನದೊಂದಿಗೆ ಈ ವಾರ ಜುಲೈ 20ರಿಂದ ಕನ್ನಡ ಚಿತ್ರಪ್ರೇಮಿಗಳು ಕಣ್ತುಂಬಿಕೊಳಬಹುದು.
Pingback: Garnier Thiebaut Shop