ಪೋಸ್ಟರ್ ಮತ್ತು ಹಾಡುಗಳಿಂದ ನಿರೀಕ್ಷೆ ಹುಟ್ಟಿಸಿರುವ ‘ಮರ್ಯಾದೆ ಪ್ರಶ್ನೆ’ ಸಿನಿಮಾ ವೆಂಬರ್ 22ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ವಿಜೇತ ‘ದಿ ಬೆಸ್ಟ್ ಆ್ಯಕ್ಟರ್’ ಮೈಕ್ರೋಮೂವಿ ನಿರ್ದೇಶಕ ನಾಗರಾಜ ಸೋಮಯಾಜಿ ನಿರ್ದೇಶನದ ಚಲನಚಿತ್ರ ‘ಮರ್ಯಾದೆ ಪ್ರಶ್ನೆ’. ಈಗಾಗಲೇ ಲೂಸ್ ಕನೆಕ್ಷನ್, ಹನಿಮೂನ್ ವೆಬ್ ಸೀರೀಸ್ ನಿರ್ಮಿಸಿದ್ದ ಆರ್‌ಜೆ ಪ್ರದೀಪಾ ಅವರ ‘ಸಕ್ಕತ್ ಸ್ಟೂಡಿಯೋ’ ಈ ಚಿತ್ರವನ್ನು ನಿರ್ಮಿಸಿದೆ. ಈ ಸಿನಿಮಾದ ಕತೆಯನ್ನು ಪ್ರದೀಪಾ ಅವರೇ ಬರೆದಿದ್ದಾರೆ.
‘ಮರ್ಯಾದೆ ಪ್ರಶ್ನೆ’ ಸಿನಿಮಾದ ಎರಡನೇ ಹಾಡು ‘ನಾ ನಿನಗೆ, ನೀ ನನಗೆ’ ಬಿಡುಗಡೆಯಾಗಿದೆ. ಎರಡನೇ ಹಾಡು ‘ನಾ ನಿನಗೆ, ನೀ ನನಗೆ’ ಪೂರ್ಣಚಂದ್ರ ಮತ್ತು ತೇಜು ಬೆಳವಾಡಿ ಜೋಡಿಯ ನಡುವಿನ ಪ್ರೇಮದ ಸನ್ನಿವೇಶಗಳನ್ನು ಸೆರೆ ಹಿಡಿದಿದೆ. ಬಸವನಗುಡಿ, ಗಾಂಧಿಬಜಾರಿನಲ್ಲಿ ಚಿತ್ರಿಸಿರುವ ಈ ಹಾಡು ಬೆಂಗಳೂರಿನ ಮಿಡಲ್ ಕ್ಲಾಸ್ ಪ್ರೇಮದ ಅಚ್ಚಂತಿದೆ. ಅರ್ಜುನ್ ರಾಮು ರಾಗ ಸಂಯೋಜಿಸಿ, ಪ್ರಮೋದ್ ಮರವಂತೆ ಸಾಹಿತ್ಯ ಬರೆದಿರುವ ಈ ಹಾಡಿಗೆ ವಾಸುಕಿ ವೈಭವ್ ಮತ್ತು ಶ್ರೀಲಕ್ಷ್ಮಿ ಬೆಳ್ಮಣ್ಣು ದನಿಯಾಗಿದ್ದಾರೆ.
ನಟ ಶರಣ್ ದನಿಯಲ್ಲಿ ಮೂಡಿಬಂದ ಮೊದಲ ಹಾಡು ‘ಈಸಿ ಟೇಕ್ ಇಟ್ ಈಸಿ’ ಸಾಹಿತ್ಯಕ್ಕೆ ಈಗಾಗಲೇ ಭರ್ಜರಿ ಮೆಚ್ಚುಗೆ ವ್ಯಕ್ತವಾಗಿದೆ. ಹಾಡನ್ನು ಸಕ್ಕತ್ ಸ್ಟುಡಿಯೋ ಯ್ಯೂಟೂಬ್ ಚಾನೆಲ್ಲಿನಲ್ಲಿ ವೀಕ್ಷಿಸಬಹುದು.
‘ಮರ್ಯಾದೆ ಪ್ರಶ್ನೆ’ ಚಿತ್ರದಲ್ಲಿ ತೇಜು ಬೆಳವಾಡಿ, ಸುನಿಲ್ ರಾವ್, ಪೂರ್ಣಚಂದ್ರ ಮೈಸೂರು, ರಾಕೇಶ್ ಅಡಿಗ, ಶೈನ್ ಶೆಟ್ಟಿ, ಪ್ರಭು ಮುಂಡ್ಕುರ್, ನಾಗಾಭರಣ, ಪ್ರಕಾಶ್ ತುಂಭಿನಾಡು, ನಂದಗೋಪಾಲ್, ನಾಗೇಂದ್ರ ಷಾ, ರೇಖಾ ಕುಂಡಲಿಗಿ, ಶ್ರವಣ್, ಹರಿಹರನ್ ಮುಂತಾದವರು ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಐದು ಹಾಡುಗಳಿದ್ದು ಅರ್ಜುನ್ ರಾಮು ರಾಗ ಸಂಯೋಜಿಸಿದ್ದಾರೆ. ಹಾಡುಗಳಿಗೆ ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಮತ್ತು ಪಾಶಾಬಾಯ್ ಸಾಹಿತ್ಯ ರಚಿಸಿದ್ದಾರೆ.
Be the first to comment