‘ಚಾರ್ಲಿ 777’ಕ್ಕೆ ನಾಯಕಿ ಸಂಗೀತಾ!
ರಕ್ಷಿತ್ ಶೆಟ್ಟಿ ‘ಚಾರ್ಲಿ 777 ’ ಚಿತ್ರಕ್ಕೆ ಈಗಾಗಲೇ ಒಂದು ಹಂತದ ಶೂಟಿಂಗ್ ಮುಗಿದಿದೆ. ಆದರೆ ಚಿತ್ರದ ನಾಯಕಿ ಯಾರೆಂದು ಹೇಳಿರಲಿಲ್ಲ ಚಿತ್ರತಂಡ. ಇದೀಗ ಆ ಮಾಹಿತಿ ಹೊರಬಿದ್ದಿದೆ. ‘ಹರ ಹರ ಮಹಾದೇವ’ ಧಾರಾವಾಹಿಯಲ್ಲಿ ಸತಿ ಪಾತ್ರ ಮಾಡಿದ್ದ ನಟಿ ಸಂಗೀತಾ ಈಗ ರಕ್ಷಿತ್ ಎದುರು ನಟಿಸುವುದಕ್ಕೆ ಆಯ್ಕೆಯಾಗಿದ್ದಾರೆ.ಚಿತ್ರದಲ್ಲಿ ರಕ್ಷಿತ್ ಮತ್ತು ನಾಯಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿದರೆ, ಸಂಗೀತಾ ಕೂಡ ಅಷ್ಟೇ ಮಹತ್ವದ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ. ‘ಸಂಗೀತಾ ನಿಭಾಯಿಸುತ್ತಿರುವ ಪಾತ್ರವನ್ನು ನಾಯಕಿ ಎನ್ನುವುದರ ಬದಲು ತುಂಬ ವಿಶೇಷವಾದ, ಚಿತ್ರಕ್ಕೆ ಬಹುಮುಖ್ಯವಾದ ಪಾತ್ರ ಎಂದಷ್ಟೇ ಹೇಳಬಹುದು. ‘ಕಿರಿಕ್ ಪಾರ್ಟಿ’ಯಲ್ಲೂ ಹೊಸ ನಟಿಯರಿಗೆ ಅವಕಾಶ ನೀಡಿದ್ದೆವು. ಈ ಬಾರಿಯೂ ಹೊಸಬರಿಗೆ ಅವಕಾಶ ನೀಡಬೇಕು ಎಂಬ ಉದ್ದೇಶ ಇತ್ತು. ಜನಪ್ರಿಯ ಕಲಾವಿದರನ್ನು ಆಯ್ಕೆ ಮಾಡಿಕೊಂಡರೆ, ಪಾತ್ರಕ್ಕಿಂತ ಹೆಚ್ಚು ಅವರೇ ಕಾಣಿಸುತ್ತಾರೆ. ನಮಗೆ ಕಲಾವಿದರಿಗಿಂತ ಚಿತ್ರದಲ್ಲಿ ಪಾತ್ರ ಕಾಣಿಸಬೇಕಿತ್ತು’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕ ಕಿರಣ್ ರಾಜ್. ನಾಯಕಿ ಪಾತ್ರಕ್ಕಾಗಿ ಅಂದಾಜು 2,700ಕ್ಕೂ ಅಧಿಕ ಪ್ರೊಫೈಲ್ಗಳು ಬಂದಿದ್ದವು. ಅದರಲ್ಲಿ 150ರಿಂದ 200 ಜನರಿಗೆ ಆಡಿಷನ್ ಮಾಡಲಾಗಿತ್ತು. ಅಂತಿಮವಾಗಿ ಸಂಗೀತಾ ಆಯ್ಕೆಯಾಗಿದ್ದರು. ‘ತುಂಬ ಎನರ್ಜಿ ತುಂಬಿರುವ ಪಾತ್ರವಿದು. ಸಣ್ಣ ಸಣ್ಣ ಭಾವನೆಗಳನ್ನು ಸಂಗೀತಾ ತುಂಬ ಕಾನ್ಪಿಡೆಂಟ್ ಆಗಿ ಹೊರಹೊಮ್ಮಿಸುತ್ತಾರೆ. ನಮ್ಮ ಚಿತ್ರದ ಸೆಟ್ನಲ್ಲಿ ಯಾವ ಕಲಾವಿದರಿಗೂ ರಿ-ಟೇಕ್ ಅವಕಾಶ ಇರುವುದಿಲ್ಲ. ಪ್ರಮುಖ ಪಾತ್ರದಲ್ಲಿ ನಾಯಿ ನಟಿಸುತ್ತಿರುವುದರಿಂದ ಕಲಾವಿದರು ಸದಾ ಸಿದ್ಧರಿರಬೇಕು.
Be the first to comment