2020ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಮಾಕ್ಟೆಲ್’ ಸಿನಿಮಾದ ಮುಂದಿನ ಭಾಗವಾದ ‘ಲವ್ ಮಾಕ್ಟೆಲ್ 2’ ಚಿತ್ರದ ಟ್ರೈಲರ್ ಬಿಡುಗಡೆ ಆಗಿದೆ.

ನಿಧಿಮಾಳನ್ನು ಕಳೆದುಕೊಳ್ಳುವ ಆದಿ ಮುಂದೇನು ಮಾಡುತ್ತಾನೆ ಎಂಬುದು ‘ಲವ್ ಮಾಕ್ಟೆಲ್ 2’ರ ಕಥೆ ಆಗಿದೆ. ‘ಲವ್ ಮಾಕ್ಟೆಲ್’ ಸಿನಿಮಾದಲ್ಲಿರುವ ಕೆಲವು ಮುಖ್ಯ ಪಾತ್ರಗಳು ‘ಲವ್ ಮಾಕ್ಟೆಲ್ 2’ ಸಿನಿಮಾದಲ್ಲಿಯೂ ಮುಂದುವರೆದಿವೆ.

‘ಲವ್ ಮಾಕ್ಟೆಲ್ 2’ ಸಿನಿಮಾದಲ್ಲಿ ಆದಿ ಮತ್ತೊಮ್ಮೆ ಮದುವೆ ಆಗುವ ನಿಶ್ಚಯ ಮಾಡಿದ್ದಾನೆ. ಆದರೆ ಈ ಬಾರಿ ಯಾರನ್ನು ಮದುವೆ ಆಗುತ್ತಾನೆ ಎಂಬುದು ಕುತೂಹಲ ಆಗಿದೆ ಇದಕ್ಕೆ ಸಿನಿಮಾವನ್ನೇ ನೋಡಬೇಕಿದೆ.

‘ಲವ್ ಮಾಕ್ಟೆಲ್ 2’ ಟ್ರೈಲರ್‌ನಲ್ಲಿ ಸಾಕಷ್ಟು ಯುವತಿಯರು ಕಾಣಿಸಿಕೊಂಡಿದ್ದಾರೆ. ಆದರೆ ಯಾರನ್ನು ಆದಿ ಮದುವೆ ಆಗುತ್ತಾನೆ ಎನ್ನುವುದು ಕುತೂಹಲ ಮೂಡಿಸಿದೆ. ಆದಿಯ ಮದುವೆ ವಿಷಯ ಪೊಲೀಸ್ ಠಾಣೆ ಮೆಟ್ಟಿಲೇರಿರುವ ದೃಶ್ಯವೂ ಟ್ರೇಲರ್‌ನಲ್ಲಿದ್ದು ಪ್ರೇಕ್ಷಕರಲ್ಲಿ ನಿರೀಕ್ಷೆ ಗರಿಗೆದರಿಸಿದೆ.

ಚಿತ್ರವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದಾರೆ ಡಾರ್ಲಿಂಗ್ ಕೃಷ್ಣ ಹಾಗೂ ಪತ್ನಿ ಮಿಲನಾ ನಾಗರಾಜ್ ಒಟ್ಟಾಗಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 2020ರಲ್ಲಿ ಬಿಡುಗಡೆ ಆಗಿದ್ದ ‘ಲವ್ ಮಾಕ್ಟೆಲ್’ ಸಿನಿಮಾ ಹಿಟ್ ಆಗಿತ್ತು. ಒಟಿಟಿಯಲ್ಲಿ ದೊಡ್ಡ ಸಂಖ್ಯೆಯ ಜನ ಸಿನಿಮಾ ನೋಡಿ ಮೆಚ್ಚಿದ್ದರು.

ಲವ್ ಮಾಕ್ಟೆಲ್’ ಸಿನಿಮಾದಲ್ಲಿ ನಾಯಕ ಆದಿ ಹಲವು ಪ್ರೇಮ ವೈಫಲ್ಯಗಳನ್ನು ಅನುಭವಿಸಿ ಕೊನೆಗೆ ನಿಧಿಮಾಳನ್ನು ವಿವಾಹವಾಗುತ್ತಾನೆ. ಆದರೆ ಅವನ ದುರದೃಷ್ಟಕ್ಕೆ ನಿಧಿಮಾ ಕ್ಯಾನ್ಸರ್‌ಗೆ ಬಲಿಯಾಗುತ್ತಾಳೆ. ಈ ಕತೆಯನ್ನು ಯುವತಿಯೊಬ್ಬಳಿಗೆ ಆದಿ ಹೇಳುತ್ತಿರುವಲ್ಲಿಗೆ ಸಿನಿಮಾ ಮುಕ್ತಾಯ ಕಂಡಿತ್ತು.

2022ರ ಬಹು ನಿರೀಕ್ಷಿತ ಚಿತ್ರಗಳಲ್ಲಿ ‘ಲವ್ ಮಾಕ್ಟೆಲ್ 2’ ಒಂದಾಗಿದ್ದು, ಇದು ಯಾವ ರೀತಿ ಯಶಸ್ಸು ಕಾಣುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
___

Translate »
error: Content is protected !!